Friday, 14 February 2014

ಜನುಮದ ಜೋಡಿ

ಕಣ್ಗಪ್ಪು ಕರಗಿತ್ತು
ಕುಂಕುಮ ಚೆದುರಿತ್ತು
ನೆರಿಗೆ ಗೆರೆಗಳು 
ಮಕ್ಕಳ ಕೋರೆ ಗೀಟು
ಮಾತು ಮರೆಯಾಗಿತ್ತು
ಮೌನವೇ ಜೋರಿತ್ತು
ಅಹಮ್ಮುಗಳಿಗೆ ತಕ್ಕ
ಚಾಟಿಯ ಏಟು

ಕಣ್ಮುಚ್ಚಿ ತೆರೆವಾಗ
ತೊನೆದಾಡುವ ಸಿಗ್ಗು
ಸತ್ತ ಇರುವೆಯ ಹಾಗೆ
ನಟಿಸಿ ಅಧರ
ಕಣ್ತುಂಬಿ ನಂತರದಿ
ರೆಪ್ಪೆ ಬಡಿದುಕೊಳಲು
ಕೆನ್ನೆ ಮೇಲೆ ಸಣ್ಣ 
ನದಿ ಸಡಗರ

ಸೋತವುಗಳ ಸವರಿ
ಗೆದ್ದಾಗ ಗರಿಗೆದರಿ
ನವಿಲಾದರು ಕೊಂಚ
ಕುಣಿದು ದಣಿದು
ಆಗಂತುಕ ಮೊದಲು
ಆತಂಕದ ನಡುವೆ
ಅಂತ್ಯವು ರೋಚಕ-
-ವಾಗ ಬಹುದು

ತಾಳೆ ಹೂ ಗರಿಯೊಂದು
ತಳದಲ್ಲಿ ಕಮರಿತ್ತು
ಸುಕ್ಕು ಹಿಡಿದ ಚರ್ಮಕ್
ಸಿಕ್ಕಿ ಘಮಲು
ಮಳೆಗರೆಯದೆ ಒಂದು
ಮಿಂಚು ಮೂಡಿತು
ಅನ್ನುವಷ್ಟರಲ್ಲಿ
ಒದ್ದೆಯಾದ ಒಡಲು

ಇರುಳನ್ನು ಬೆಳಕುಂಡು
ಬೆಳಕು ಬೇಗೆಯ ಹರಡಿ
ಸಿಕ್ಕಾಯಿತು ಒಂದು
ಅಲ್ಪ ವಿರಾಮ
ಬೆಸುಗೆಯಾಗಿತ್ತಲ್ಲಿ
ಜನುಮ ಜನುಮದ ಜೋಡಿ
ಕುಂಟು ನೆಪ ಮಾತ್ರ
ನಡುವಿದ್ದ ಕಾಮ

              -- ರತ್ನಸುತ

2 comments:

  1. ಈವತ್ತು ನನ್ನ ಓದಿಗೆ ಸಿಕ್ಕ ಅತ್ಯುತ್ತಮ ದಾಂಪತ್ಯ ಕವಿತೆ.

    ReplyDelete

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...