Friday, 31 January 2014

ಸಣ್ಣ ಬಿನ್ನಹ !!

ಬರೆಯೋಕೂ ಮುನ್ನ ಬಿಡಬೇಕು ನೀನು 
ಒಮ್ಮೆಯಾದರು ನನ್ನ ಬೆರಳ ಸೋಕಿ
ಹರಿಯೋಕೂ ಮುನ್ನ ಅಳಬೇಕು ನಾನು 
ನೀನು ಬಂದು ತಡೆವುದೊಂದೇ ಬಾಕಿ 

ಮಲಗೋಕೂ ಮುನ್ನ ಜ್ವರವೊಂದು ಬರಲಿ 
ನೀ ನೀಡುವ ಕನಸ ಗುಳಿಗೆಗಾಗಿ
ಮುಗಿಲಾಚೆ ಸಣ್ಣ ಮನೆ ಕಟ್ಟಿ ಇಡುವೆ 
ಹಾರಾಡಿದ ಬಳಿಕ ಉಳಿವಿಗಾಗಿ 

ಮರುವಲ್ಲಿ ಒಂದು ಸುಳುವಾಗಿ ನಿಲ್ಲು 
ಮರೆತಲ್ಲೂ ನಿನ್ನ ನೆನೆಯುವಂತೆ 
ಕತ್ತಲೆಯ ದಾರಿ, ನೀ ಪ್ರಣತಿಯಾಗು 
ಪಯಣದಲ್ಲಿ ಬಾರದಂತೆ ಚಿಂತೆ 

ಕಥೆಯಲ್ಲಿ ಒಂದು ತಿರುವಾಗಿ ಬಂದು 
ಕಥೆಗಾರನ ನಿದ್ದೆ ಕೆಡಿಸು ಈಗ 
ಹಲವಾರು ಸಾಲ ಹಾಡೊಂದ ಬರೆವೆ 
ಕೆಲವೊಂದ ಹೆಕ್ಕಿ ಹಾಡು ಬೇಗ

ಎದೆಗೊಂದು ಕಿವಿಯ ಇಟ್ಟಾರ ಕೇಳು 
ಹೃದಯಕ್ಕೆ ಚೂರು ಪೆಟ್ಟಾಗಿದೆ 
ಕಡೆಗೊಂದು ಮುತ್ತು ಕೊಟ್ಟಾರ ಹೇಳು 
ಯಾವೊಂದು ಮಾತ ಮುಚ್ಚಿ ಇಡದೆ !!


                                -- ರತ್ನಸುತ

ಆಟ

ಆಟ ಮುಗಿಸುವ ಹುರುಪು 
ಕಾಯಿ ಜರುಗಿಸಲು ಹಿಂಜರಿಕೆ 
ಮೇಲಿಂದ ಮೇಲೆ 
ಎದುರಾಳಿಯಿಂದ ಒತ್ತಡ 
ಜರುಗಿಸಲೇ ಬೇಕಾದ 
ಅಸಹಾಯಕತೆ 

ಗೆಲ್ಲುವ ಆಶಯ,
ತೋರಿಕೊಳ್ಳುವಂತಿಲ್ಲ 
ನಿಲ್ಲುವ ಮನಸು,
ತಡೆಯುವಂತಿಲ್ಲ 
ಗೆದ್ದ ಕಾಯಿಗಳು ಕೆಲವು 
ಸೋತು ಉರುಳಿದವು ಹಲವು

ನೇರ ಸಾಗುತ್ತಲೇ 
ಎಡ, ಬಲ ಪಂಕ್ತಿಗಳ ಕಂಡು 
ವಿಚಲಿತಗೊಂಡು 
ಸತ್ತವುಗಳ ಲೆಕ್ಕ-
ಹಾಕುತ್ತಾ, ಹಾಕುತ್ತಾ 
ಮುಗಿಯುತ್ತಲೇ ಇಲ್ಲ

ನನಗಿದು ಜೀವನ 
ಇನ್ಯಾರಿಗೋ ಕದನ 
ನನ್ನ ಮುನ್ನಡೆ 
ಮತ್ತಾರಿಗೋ ಹಿಂಸೆ 
ನನ್ನ ತಡಬಡಿಕೆ 
ಅವರಾರಿಗೋ ಪ್ರಶಂಸೆ 

ಕರತಾಡನ ಕೇಳಿದೊಡನೆ 
ಒಮ್ಮೆಲೆ ಎಚ್ಚೆತ್ತು 
ಕಣ್ಣ ದಿಟ್ಟಿಸಿದಂತೆ 
ಎಲ್ಲವೂ ಮಂಜು ಮಂಜು 
ಯಾರೋ ನಡೆಸಿರುವರು ಮೋಸ.
ತೀರ್ಪುಗಾರರ ಪ್ರಕಾರ 
ಎಲ್ಲವೂ ಪಾರದರ್ಶಕ?

ನೋಡು ನೋಡುತ್ತಿದ್ದಂತೆ 
ಮೇಲುಗೈ ಸಾಧಿಸಿದ ಎದುರಾಳಿ 
ನಾನು ಖಿನ್ನ
ಕಳೆದುಕೊಂಡು ಬೆಂಬಲಿಗರನ್ನ 
ಒಬ್ಬಂಟಿ ನಾನು 
ಎದುರಾಳಿಯೂ ಒಬ್"ಬಂಟ"

ರಾಜನಾರೋ? ರಾಣಿಯಾರೋ?
ಆನೆ, ಕುದುರೆಗಲಂತೂ 
ಬಡಕಲಾಗಿ ಬಿದ್ದಿವೆ 
ಎದುರಾಳಿಯ ಮುಷ್ಟಿಯಲ್ಲಿ
ಸೈನ್ಯ ಕುಸಿಯುತ್ತಿದೆ 
ಈಗ ಉಳಿಸಿಕೊಳ್ಳಬೇಕಾದ್ದು ನನ್ನನ್ನ
ನಾನಾರು?

ಇನ್ನೂ ಅಖಾಡಕ್ಕಿಳಿಯದೆ 
ಶಸ್ತ್ರಾಸ್ತ್ರಕೆ ಪಳಗುತಿರುವೆ
ಸಮರವ ಮಾರು ದೂರ 
ನಿಂತು ನೋಡುತಿರುವೆ 
ಅನ್ಯರ ಸೋಲಲ್ಲಿ ಸೋತು 
ಗೆಲುವಲ್ಲಿ ಗೆದ್ದು 

ಆಟ ಇನ್ನೂ ಮುಗಿದಿಲ್ಲ 
ಮೊದಲಾಗಬೇಕಷ್ಟೆ 
ಅಭ್ಯಾಸಕ್ಕೆ ಹರಿಸಿದ ಬೆವರ
ಆಟಕ್ಕೂ ಉಳಿಸಬೇಕು 
ಹುಸಿಯಾದರೂ ಸರಿಯೇ 
ಆಡಿದಂತಸಿಸಬೇಕು 
ನನಗೂ, ನನ್ನವರಿಗೂ ..... 

               -- ರತ್ನಸುತ

ನೀನೆ ಬರಿ ನೀನೆ !!

ನಿನ್ನ ತೋಳಲಿ ಉಳಿದ ಜೀವಕೆ 
ಅದುವೆ ನೆನಪಿನ ಶಾಲೆ
ನಿನ್ನ ಆಸರೆ ಪಡೆದ ಭಾವಕೆ 
ಸಾಕ್ಷಿಯಾದವು ಹಾಳೆ 
ನಿನ್ನ ರಕ್ಷೆಯ ಭಿಕ್ಷೆಯಿಂದಲೇ 
ಬೆಚ್ಚಗುಳಿದವು ಕನಸು 
ನಿನ್ನ ಕಣ್ಣಿನ ಅಂತರಿಕ್ಷದಿ 
ತಾರೆ ನಕ್ಷೆಯ ಸೊಗಸು 

ನಿನ್ನ ಸಮ್ಮತಿ ಸಿಕ್ಕಿದಾಗಲೇ 
ಮುಗಿಲ ಹನಿಗೆ ಬಿಡುಗಡೆ
ನಿನ್ನ ರೂಪವ ಕಂಡ ಶಿಲ್ಪಿಗೆ  
ಕೆತ್ತಲೊಂದು ಕಲ್ಪನೆ
ನಿನ್ನ ಮೌನವ ಮೀರುವಾಸೆಗೆ 
ಮರಳುಗಾಡು ನಿರ್ಲಿಪ್ತ 
ನಿನ್ನ ಸೋಕಿದ ಪುಷ್ಪ ಮಾಲಿಕೆ
ಸಾವಿನಲ್ಲೂ ಸಂತೃಪ್ತ 

ನಿನ್ನ ಮಾತಲಿ ಜೇನ ಮಾಧುರಿ  
ಸಾಲು ಸಾಲು ಸಾಹಿತ್ಯ 
ನಿನ್ನ ಹೆಜ್ಜೆಯ ಗೆಜ್ಜೆ ನಾದವು 
ಒಂದು ಲಲಿತ ರಸ ನಾಟ್ಯ 
ನಿನ್ನ ಉಸಿರಿಗೆ ಕೊಳಲು ಹಸಿದರೆ 
ಅತಿಶಯೋಕ್ತಿ ನಡೆಯಲ್ಲ
ನಿನ್ನ ಕೆನ್ನೆಯ ಗುಳಿಯ ಉಂಗುರ 
ಸೊನ್ನೆಯೆಂದು ಮರುಗಿಲ್ಲ 

ನಿನ್ನ ಉಬ್ಬನು ಅಳಿಯೆ ಹೋದರೆ 
ತಗ್ಗು ಅನಿಸಿತು ಅಂಬರ 
ನಿನ್ನ ಮೋರೆಯ ಕಂಡು ದಣಿಯಲು 
ಇಳಿದು ಬಂದನು ಚಂದಿರ 
ನಿನ್ನ ಕಾಡಿಗೆ ಅದರ ಪಾಡಿಗೆ 
ಉಳಿದರಷ್ಟೆ ನಾ ಉಳಿವೆನು 
ನಿನ್ನ ಕರಗಳ ಮೆಲ್ಲ ಚರಗಳ
ತಾಳದಲ್ಲಿ ನಾ ಕುಣಿವೆನು 

ನಿನ್ನ ಕೈ ಪಿಡಿ, ಬಾಳ ಕೈಪಿಡಿ  
ದಾರಿ ಸೂಚಕ ದೂರಕೆ 
ನಿನ್ನ ಹಸ್ತವು ಚಂದ ಕನ್ನಡಿ 
ನನ್ನ ನಾಳೆಯ ರೇಖೆಗೆ 
ನಿನ್ನ ಸಂಭ್ರಮ ಹೃದಯಂಗಮ  
ನಿತ್ಯ ನಾಕ ಪ್ರತ್ಯಕ್ಷವು 
ನಿನ್ನ ಆಧರ ಹೊನ್ನ ಸಾಗರ
ಮುಳುಗಿ ಆತ್ಮಕೆ ಮೋಕ್ಷವು 


                  -- ರತ್ನಸುತ

ತೀರದಲ್ಲೇ ಉಳಿದು !!

ನಾನಿನ್ನೂ ಕಣ್ಣ್ಬಿಡದೆ 
ಇಡಿ ಲೋಕವನ್ನೇ ನೋಡಿದೆನೆಂಬ 
ಹಮ್ಮು ನನ್ನೊಳಗೆ . 
ತಿದ್ದುವ ತಾಳ್ಮೆಯಿಲ್ಲ 
ತೀಡುವ ಶಕ್ತಿಯಿಲ್ಲ 
ಈ ನನ್ನೊಳಗಿನ "ನಾನು"
ಯಾರ ಮಾತನ್ನೂ ಕೇಳದವನು 
ಅಚ್ಚು ನನ್ನಂತೆಯೇ!!

ತುಕ್ಕು ಹಿಡಿದ ಖಡ್ಗ ಹಿಡಿದು 
ಆಗಷ್ಟೇ ಕುಲುಮೆಯಿಂದ 
ಮಿಂದೆದ್ದು ಬಂದವುಗಳ-
ಮುಂದೆ ಸಮರಕ್ಕೆ ನಿಂತೆ 
ಮೆಲ್ಲಗೆ ಹಣೆಯಿಂದಿಳಿದ 
ಬೆವರು ಕಿವಿಗೆ ಪಿಸುಗುಟ್ಟಿತು 
"ಮತಿಗೇಡಿತನಕೆ ಬಳುವಳಿ 
ಎದುರು ಕಾದಿದೆ" ಎಂದು 

ಬೆಂಬಲಿಸುವೆವೆಂದು ಸವರಿ-
ಬಿಟ್ಟ ತಲೆಗಳುರುಳುತಿವೆ
ಹಿಂದಿರುಗಿ ನೋಡಿದರೆ 
ಸಹಸ್ತ್ರ ಜನರ ನೆರಳು 
ಸೂರ್ಯ ಎದುರು ನಿಂತು 
ನನ್ನೆದೆಗೆ ರಂಪ ಬೀಸಿದ್ದಾನೆ 
ಮುಂದಿನವರ ಹಿಂದಿನೆರಳು 
ನಾನೂ ಒಬ್ಬ ಅವರೊಳು

ಕಣ್ಣ ಹನಿಗಳ ಉಗಮ
ನರಕವೆಂಬುದು ಸುಗಮ 
"ನನ್ನ" ನಂಬಿ ಬಂದ ನನಗೆ,
ನನ್ನವುಗಳ ಪಾಲಿಗೆ
ಹೊತ್ತು ಮೀರಿ ಹೊತ್ತಿಸಿ
ಕತ್ತಲಲ್ಲಿ ನಂದಿಸಿ
ಇದ್ದೂ ಸಹಕರಿಸಲಿಲ್ಲ 
ದುಷ್ಟ ಬುದ್ಧಿ ದೀವಿಗೆ 

ಅಲೆಯ ಜೊತೆಗೆ ಸರಸ 
ಪುಟ್ಟ ತೆಪ್ಪ ಎದುರು ತೇಲಿ 
ಹುಟ್ಟು ಮರೆತೆನೆಂಬ ನೆಪ 
ಇದ್ದಿದ್ದರೂ ಇರದ ಲಾಭ 
ತೀರಕೆ ಪರಿಚಿತ ಅಲೆಗಳು 
ಪದೆ ಪದೆ ನನ್ನ ನೂಕಿ 
ರಂಜಿಸುತ್ತಿವೆ ಅದನು 
ನನ್ನ ಕುರಿತು ಹಾಸ್ಯಗೈದು !!

                -- ರತ್ನಸುತ

Thursday, 30 January 2014

ನೆನಪಿನ ಬುಗುರಿ !!

ಬುಗುರಿಯ ಕೊಂಡರೆ 
ಮೊಳೆಗಳು ಉಚಿತ 
ಬುಡಕೊಂದಾದರೆ, ತಲೆಗೊಂದು
ಸುತ್ತಿಗೆ ಹಿಡುವುದ
ಕಲಿತದು ಆಗಲೇ 
ಗುರಿಯ ತಪ್ಪಿ ಬಡಿದಂದು 

ಚಾಟಿಗೆ ಸಾಲದ 
ಕಾಸಲಿ ತಿಂದ
ಬೋಟಿ, ಚಿಕ್ಕಿ, ನಿಪ್ಪಟ್ಟು 
ಲಾಡಿ ಸುತ್ತಿ 
ಬೀಸಿದರಾಯ್ತು 
ಬುಗುರಿ ತಿರುಗಿತು ಸಕ್ಕತ್ತು 

ತಕ-ತಕ ಕುಣಿದರೆ 
ಬಡಿ-ಬಡಿ ಬುಡಕೆ 
ನೇರಕೆ ತಾ ತಿರುಗುವ ತನಕ 
ಸವಾಲು ಸಿಕ್ಕರೆ 
ಆಟಕೆ ಸೆಡ್ಡು 
ಯಾರದ್ದು ಉಳಿವುದು ಕಡೆ ತನಕ 

ಚಾಟಿಯ ಕೊನೆಗೆ 
ಬಿಗಿದ ಗಂಟು 
ಬೀಸಿಗೆ ಸಿಗಲು ಬಿಗಿ ಹಿಡಿತ
ಬೀಸಲು ಬಾರದೆ 
ಕಲಿಸುವ ಪಾಠದಿ 
ಬುಗುರಿಯೂ ಕಲಿಯದು ಕಾಗುಣಿತ 

ನೆಲವ ತಾಕದೆ 
ಅಂಗೈ ಹಿಡಿಯಲು 
ಪಟ್ಟ ಪರಿಶ್ರಮಗಳು ಎಷ್ಟೋ 
ಕಲಿತ ಆ ದಿನ
ಖುಷಿಯ ಎಲ್ಲೆ 
ಸವಿದಂತಾಯಿತು ಒಬ್ಬಟ್ಟು 

ಗೆದ್ದ ಆಟಕೆ 
ತಳ ಮೊಳೆ ಸೀಳಿತು 
ಸೋತ ಬುಗುರಿಗಳ ತಲೆಯ 
ಸೋತಂದಿನ ಆ 
ತಳಮಳ ಕೇಳಿ 
ಗುನ್ನ ಇಟ್ಟವ ನನ್ನ ಗೆಳೆಯ 

ಬಗೆ ಬಗೆ ಬಣ್ಣ 
ತಿರುಗುವ ವೇಳೆ 
ಕಲೆತು ಆಯಿತು ಮತ್ತೇನೋ
ಚಾಟಿಯ ಕೊಳ್ಳಲು 
ಕಾಸು ಸಿಕ್ಕರೆ 
ತಿಂಡಿ ಕೊಳ್ವುದ ಮರೆತೇನು 

ಅಟ್ಟದ ಮೇಲೆ 
ಜೇಡನ ಗೂಡು 
ಧೂಳು ಹೊದ್ದು ಮಲಗಿತ್ತು 
ಬುಗುರಿ ತಲೆಯ
ಗುರುತುಗಳೆಲ್ಲ 
ಒಂದೊಂದು ಕಥೆಯ ಸಾರಿತ್ತು ... 

                     -- ರತ್ನಸುತ

ಭಾವನೆಗಳು ಚೂರಾದಾಗ !!

ಒಡೆದ ಕನ್ನಡಿಯ ಚೂರುಗಳಲ್ಲಿ
ನನ್ನ ಬಿಂಬ ಯಾವುದೆಂದು ನಂಬಲಿ?
ಎಲ್ಲವೂ ನನ್ನಂತೆಯೇ, 
ನನ್ನ ಪ್ರತಿನಿಧಿಸುತಿದ್ದವುಗಳೇ 
ಹೆಚ್ಚು ಕಮ್ಮಿ ಎಲ್ಲವೂ ಸ್ಪಷ
ನನ್ನ ನಾ ಆಯ್ದುಕೊಳ್ಳುವ 
ತೀರದ ಗೊಂದಲದಲ್ಲಿ ದಿಟ್ಟಿಸಿದೆ ಒಂದರೆಡೆಗೆ 
ಮಿಕ್ಕೆಲ್ಲವುಗಳ ತಿರಸ್ಕರಿಸಿ 

ದೊಡ್ಡವರು ಇದಕ್ಕೇ ಅಂದಿರಬೇಕು 
ಒಡೆದ ಕನ್ನಡಿಗೆ 
ಮುಖ ಒಡ್ದಬಾರದೆಂದು 
ಚೂರುಗಳೆಲ್ಲವ ತಿಪ್ಪೆಗೆಸೆಯುತ್ತಿದ್ದರು.  
ಈಗ ತಿಪ್ಪೆಯ ಎಲ್ಲೆಂದು ಹುಡುಕಲಿ?
ಅಸಲಿಗೆ ಚೂರುಗಳ ಆಯ್ವುದಾದರು ಹೇಗೆ ?
ಒಡೆದಿರುವುದು ನನ್ನ ಮನಸು 
ಅದರೊಳಗಿನ ಭಾವನೆಗಳು!!

ಇನ್ನೂ ನೆನಪಿದೆ 
ಭಾವನೆಗಳ ನವೀಕರಿಸಿಕೊಂಡಾಗ 
ಅವೆಷ್ಟು ಖುಷಿ ಪಟ್ಟಿದ್ದವು!!
ಒಂದೊಂದೂ ತಂತಮ್ಮ 
ಹೊಸ ಉಡುಗೆ-ತೊಡುಗೆಯಲ್ಲಿ 
ನಾಚುತ್ತಲೇ ಬಂದು ಎದುರು ನಿಂತಾಗ 
ಕಂಗಳ ಎಷ್ಟು ತಡವಿಕೊಂಡರೂ 
ಸಾಲದಾಗಿತ್ತು ಅಂದು 

ಒಂದು ಸಣ್ಣ ಕೆಡುಕಿಗೆ 
ಯೋಜಿತ ಇರುವೆ ಸಾಲು 
ದಿಕ್ಕಾ ಪಾಲಾಗುವ ಹಾಗೆ 
ಮನದ ತಲ್ಲಣದ ಕಾರಣ 
ಉದುಗಿದ್ದ ಭಾವನೆಗಳೆಲ್ಲ 
ಚೆಲ್ಲಾಪಿಲ್ಲಿ ಆಗುವುದಲ್ಲದೆ 
ಒಡೆದ ಮನದ ಅವಶೇಷಗಳಡಿ 
ಸಿಲಿಕಿದ್ದಾವೆ, ಅಸಹಾಕ ಸ್ಥಿತಿಯಲ್ಲಿ

ಇಷ್ಟಕ್ಕೂ ನನ್ನ ಚಂಚಲತೆಯೇ ಹೊಣೆ
ಯಾವುದನ್ನೂ ಅಷ್ಟು ಗಾಢವಾಗಿ 
ಗಣನೆಗೆ ಸ್ವೀಕರಿಸ ಬಾರದಿತ್ತು 
ಹೌದು, ನಾನೇ ಎಲ್ಲಾಕ್ಕೂ ಹೊಣೆ!!
ಅಂದು ಮಿಡಿಯದ ಮನಸಿಗೆ 
ಬೇಕೆಂದೇ ತುರುಕಿದ ಬಯಕೆಗಳು 
ಇಂದು ಅಟ್ಟಹಾಸ ಮೆರೆಯುತ್ತಿವೆ 
ನನ್ನ ಮಾತುಗಳನ್ನೂ ಧಿಕ್ಕರಿಸಿ 

ನಾ ಕ್ಷಮೆಗೆ ಅನರ್ಹ ಅಪರಾಧಿ!!

                         -- ರತ್ನಸುತ

Wednesday, 29 January 2014

ಪ್ರಣಯ ಕವಿತೆ !!

ಪ್ರಣಯ ಕವಿತೆ 
ಬರೆದೆ ನಿನ್ನ ಹೆಸರಲೇ
ಜಪಿಸಿ ಕುಳಿತೆ 
ಕೊರೆವ ನಿನ್ನ ನೆನಪಲೇ
ಉಸಿರು ಎದೆಯೊಳಗೆ 
ನಡುಗಿ ಸಾಯುತಿದೆ 
ತೊದಲು ಮಾತಿನಲಿ 
ಹೇಗೆ ಹೇಳಲಿ 

ಪ್ರಣಯ ಕವಿತೆ ....             [೧]

ಕಾಲ ಮುಳ್ಳಿಗೂ ಕಾತರ 
ಏನು ಮುಂದಿನ ಯೋಜನೆ 
ಕಾದು ಕಾದು ಸಾಕಾಗಿದೆ 
ಮನಸಿಗೆ ಇದೇ ಯೋಚನೆ 
ಬಿಡಿಸಿ ಮತ್ತೆ ಬೆರೆಸಿ 
ಪೋಣಿಸೋದೆ ಪ್ರಾಣವ 
ಮೂರು ಮಾತೇ ಸಾಕು 
ಮರೆತು ಬಿಡಲು ಲೋಕವ 

ಪ್ರಣಯ ಕವಿತೆ....            [೨]

ಮಾತು ಮೀರಲು ಮೌನವಹಿಸುವೆ 
ನೀನು ತಡೆದು ನೋಡು 
ನನ್ನ ಸಾಲನು ಕದ್ದು ಆಲಿಸಿ 
ನೀನೂ ಒಮ್ಮೆ ಹಾಡು 
ಒಡೆದು ಮತ್ತೆ ಬರೆದು 
ಸಿದ್ಧವಾದ ಮುನ್ನುಡಿ      
ಚೂರು ಚೂರೇ ಸೆಳೆದ
ನೀನೇ ಮಾಯಾ ಗಾರುಡಿ

ಪ್ರಣಯ ಕವಿತೆ ............    [೩] 

                          -- ರತ್ನಸುತ

ಹುತಾತ್ಮ ಗಾಂಧಿ !!

ಯಾರೊಬ್ಬರ ನೆನಪು ಗಾಢವಾಗಿ ಕಾಡಬೇಕಿದ್ದರೆ
ಆವತ್ತಿನ ದಿನ ಅವರು ಹುಟ್ಟಿರಬೇಕು
ಇಲ್ಲವೇ ಸತ್ತಿರಬೇಕು

ಅಕ್ಟೋಬರ್ ೧ ಗಾಂಧಿ ಹುಟ್ಟಿದ ದಿನ
ಜನವರಿ ೩೦ ಬಾಪು ಹುಟ್ಟಿದ ದಿನ

ಬಾಪುವಿಗೆ ಸಾವೆಂಬುದೇ ಇಲ್ಲ
ನೂರು ಗೋಡ್ಸೆಗಳು ಹುಟ್ಟಿ ಬಂದು
ಗುಂಡು ಹಾರಿಸಿ ಕೊಂದರೂ ಸಹಿತ

ಗಾಂಧಿ ಎಲ್ಲೇ ಕಂಡರೂ
ಇನ್ನೂ ನಗುತ್ತಿದ್ದಾನೆ
ನಮ್ಮೊಳಗಿನ ಬಾಪುವ ಕಂಡು !!
                          -- ರತ್ನಸುತ 

ಸಣ್ಣ ಫ್ಲಾಶ್ ಬ್ಯಾಕು !!

ನಾನು ಪಾಸ್ಸಿಂಗ್ ಮಾರ್ಕ್ಸ್ ಬಿಟ್ಟು ಒಂದಷ್ಟು ಹೆಚ್ಚು ಸಂಪಾದಿಸೋದೇ ಸಾಧನೆ ಮಾಡ್ದಂಗೆ. 
ನೂರಿಗೆ ಐವತ್ತರ ಗಡಿ ದಾಟಿದರೆ ಅದೇ ಮೆರಿಟ್ಟು. 
ಮನೆಯವರು ತಾನೇ ಎಷ್ಟು ಅಂತ ತಲೆ ಚಚ್ಕೊಳ್ಳೋದು, ಪಾಸಾದ್ರೆ ಹೆಚ್ಚಾಗಿತ್ತು ಅವರಿಗೂ ಕೂಡ. 

ಹೆಂಗೋ ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಬರ್ದು ಮುಗ್ಸಿದ್ದಾಗಿತ್ತು, ಇನ್ನೇನಿದ್ರೂ ರಿಸಲ್ಟ್ಗಾಗಿ ಕಾದಿದ್ದೆ .

ನಂಗೆ ಈ ಮೊದಲ ಮೂರು ರಾಂಕ್ ಪಡೆಯೋರ್ನ ಕಂಡ್ರೆ ಅದ್ಯಾಕೋ ಅಲರ್ಜಿ, ಸ್ವಲ್ಪ ದೂರನೇ ಉಳಿತಿದ್ದೆ ಅವ್ರಿಂದ, ಫ್ರೆಂಡ್ ಶಿಪ್ ಅಂತೂ ನೋ ಚಾನ್ಸ್.
ಒಂದು ಅಂಕ ದೊಡ್ ಮ್ಯಾಟರ್ರು ಅನ್ನೋ ಹಂಗೆ ತಲೆ ಕೆಡ್ಸ್ಕೋಳ್ಳೋ ಒಂಥರ ಮೆಂಟ್ಲುಗಳು ಅವ್ರು ನನ್ ಪ್ರಕಾರ.

ಅವ್ರಲ್ಲೇ ಯಾರು ಯಾರಿಗೂ ಸ್ನೇಹಿತ್ರಲ್ಲ, ಒಬ್ಬ್ರನ್ನೊಬ್ರು ದ್ವೇಷಿಸುವಷ್ಟರ ಮಟ್ಟದ ಪರಮ ವೈರಿಗಳು. 
ಆದ್ರೂ ಆಪ್ತ ಸ್ನೇಹಿತರಂತೆ ನಟಿಸುವ ಕೌಶಲ್ಯ ಆ ಬುದ್ಧಿವಂತಿಕೆಯ ಒಂದು ಭಾಗವೇ ಇರ್ಬೇಕು!!
ಅಂತ ವಿದ್ಯಾರ್ಥಿಗಳು ತಮ್ಮ ಶಿಷ್ಯರೆಂದು ಬೀಗುತ್ತಿದ್ದ ಮೇಷ್ಟ್ರುಗಳ ಕಂಡರಂತೂ  ಡಬಲ್ ಅಲರ್ಜಿ ನಂಗೆ. 

ಅಂತೂ ಆ ದಿನ ಬಂದೇ ಬಿಡ್ತು. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ರಿಸಲ್ಟ್ ದಿನ. 

ಇಂಟರ್ನೆಟ್ ಅನ್ನೋದೂ ಒಂದಿದೆ, ಅಲ್ಲಿ ಮುಂಚಿತವಾಗಿಯೇ ರಿಸಲ್ಟ್ ತಿಳಿ ಬಹುದು ಅನ್ನೋದು ನನ್ನಂಥ ದಡ್ಡನ ತಲೆಗೆ ಹೊಳಿಯೋದು ದೂರದ ಮಾತು ಮಾತಾಗಿತ್ತು.


ಮಾರನೆ ದಿನ ಶಾಲೆಗೆ ಹೋದ್ರೆ, ನನ್ನಂಥವೇ ಅದೆಷ್ಟೋ ದಡ್ಡ ಶಿಕಾಮಣಿಗಳು ರಿಸಲ್ಟ್ಗಾಗಿ ಕಾಯುತ್ತಿದ್ರು. 
ಅವ್ರಲ್ಲಿ ಟಾಪರ್ಗಳು ಅನ್ನಿಸ್ಕೊಂಡೋರೂ ಇದ್ರು ಅನ್ನೋದೇ ವಿಶೇಷ.

ಬೋರ್ಡ್ ಮೇಲೆ ಮೆತ್ತಿದ ರಿಸಲ್ಟ್ ಪಟ್ಟಿ ಹೊರಗಿಟ್ಳು ಆಯ. 
"ಬೇಗ ಹೋಗಿ ನೋಡಿದ್ರೆ ಸಿಗೋದಾದ್ರೂ ಏನು" ಅನ್ಕೊಂಡು ಹಿಂದೆ ಉಳ್ದೆ
"ನಿಂಗೆ ಸ್ವಲ್ಪನೂ ಭಯ ಅನ್ನೋದೇ ಇಲ್ಲ ಕಣೋ ಅಂತ ಅಮ್ಮ ತಲೆ ಮೊಟ್ಕುದ್ರು", ಆದ್ರೂ ಜರ್ಗೋ ಆಸಾಮಿ ನಾನಾಗಿರ್ಲಿಲ್ಲ. 
ಒಬ್ಬೊಬ್ಬ್ರಾಗಿ ರಿಸಲ್ಟ್ ನೋಡಿ ತಿರ್ಗೋವ್ರ  ಮುಖ ನೋಡೋದೇ ಒಂದು ಖುಷಿ. ಏನ್ ವೆರೈಟಿ ಎಕ್ಸ್ಪ್ರೆಶನ್ಗಳೋ!!

ಕೊನೆಗೂ ನನ್ನ ರಿಸಲ್ಟ್ ನೋಡಿಯೇ ಬಿಟ್ಟೆ, ಆಶ್ಚರ್ಯಗಳೇನೂ ಇರ್ಲಿಲ್ಲ. ಪಾಸಾಗಿದ್ದೆ ಅಷ್ಟೇ. 

ಅಮ್ಮಳಿಗೆ ಏನೋ ಸಾಧಿಸಿದ ಖುಷಿ, ನಂಗೂ ಚೂರು ಪಾರು ಖುಷಿ ಇತ್ತು ಅಂತ ಇಟ್ಕೊಳೊಣ.

ಮನೆ ಕಡೆ ಹೊರ್ಟಾಗ ನಂಗೆ ಕಾಣ್ಸಿದ್ದು ಆ ಮೂರು ರಾಂಕ್ ಸ್ಟೂಡೆಂಟ್ಗಳಲ್ಲಿ ಸದಾ ಮೊದಲ ರಾಂಕ್ ಪಡಿತಿದ್ದ ಹುಡುಗಿ. 

ಮೂಗು, ಕೆನ್ನೆ ಮುಂತಾದವುಗಳನ್ನೆಲ್ಲ ಕೆಂಪಗಾಗಿಸಿಕೊಂಡು ಬಿಕ್ಕುತ್ತಿದ್ಲು. ಫೇಲ್ ಆಗೋ ಪಾರ್ಟಿ ಅಲ್ಲ ಅದು, ನಂಗಂತೂ ಫುಲ್ ಕನ್ಫ್ಯೂಷನ್ನು. 
ನನ್ಗ್ಯಾಕೆ ಅವಳ ವಿಚಾರ ಅಂತ ಸುಮ್ನಿದ್ದೆ. ನನಮ್ಮ ಸುಮ್ನಿರ್ಬೇಕಿತ್ತಾ, "ಏನಾಯ್ತು??" ಅಂತ ಅವಳಮ್ಮಳತ್ರ ಕೇಳಿಯೇ ಬಿಟ್ಳು. ಅದ್ಕೆ ಆವಮ್ಮ "ನನ್ ಮಗ್ಳು ಸೆಕೆಂಡ್ ರಾಂಕು ಬಂದೌಳೆ, ಅದ್ಕೇ ಅಳ್ತೌಳೆ" ಅಂತ ಅನ್ನೋದಾ!!
ನನ್ ಬಗ್ಗೆ ಚೂರು ಪಾರು ಖುಷಿ ಇಟ್ಕೊಂಡಿದ್ ನನ್ ತಾಯಿ "ನೋಡಿ ಕಲಿ ಇವ್ಳಿಂದ" ಅಂತ ಹೇಳಿ ಸಿಟ್ಟಾಗಿ ಮನೆ ಕಡೆ ಹೊರ್ಟ್ಳು, ನಾನೂ ಹಿಂದಿಂದೆ ಓಡಿ ಮನೆ ಸೇರ್ಕೊಂಡೆ. 

ಒಂದು ಲಾಲಿಪಪ್ಪಾದ್ರೂ ಗಿಟ್ಟಿಸ್ಬೋದಿತ್ತು ಆ ದಿನ , ಕೊನೆ ಕ್ಷಣದಲ್ಲಿ ಕಲ್ ಬಿದ್ದಂಗಾಯ್ತು, ಕರ್ಮ!!

"ಈಗ ಈ ವಿಷ್ಯ ಯಾಕೆ??" ಅಂತ ಕೇಳಿ
ದಿಢೀರ್ ಅಂತ ಈವತ್ತು ಆ ಹುಡುಗಿ ಕಂಡ್ಳು ಅನ್ನಿ. ಎಲ್ಲೆಲ್ ಉರಿತು ಅಂತ ಕೇಳ್ಳೇ ಬೇಡಿ !!

                                                                                                                                     -- ರತ್ನಸುತ

ಕಿತ್ತೋದ್ ಸಾಂಗು !!

ಕಿವಿ ಕಿತ್ತೋಗೋ ಹಾಗೆ ಹೊಡಿ 
ಕಾಲು ಬಿದ್ದೋಗೋ ವರ್ಗೂ ಹೊಡಿ 
ಚಿಂತೆ ಗಿಂತೆನ ಮರ್ತು ಹೊಡಿ 
ಖುಷಿ ನೋವಲ್ಲಿ ಜೋರು ಹೊಡಿ

ಕಿತ್ತೋದ ಕಿವಿಗಿಲ್ಲಿ ಒಳ್ಳೇದು ಕೆಟ್ಟದ್ದು 
ಯಾವೊಂದು ಕೇಳೋದಿಲ್ಲ 
ಕಿತ್ತೋದ ಪಿಕ್ಚರ್ಗೆ ಕಟ್ ಔಟು ಹೊಡ್ಸಿದ್ರೂ 
ನಾಯಿನೂ ಮೂಸೋದಿಲ್ಲ 
ಕಿತ್ತೋದ ಹಾಡಲ್ಲಿ ಲಾಜಿಕ್ಕು ಇಲ್ದಿದ್ರೂ
ಕಿಕ್ ಅಂತೂ ಇರ್ಲೇ ಬೇಕು 
ಕಿತ್ತಾಡೋ ಮಂದಿನ ಒಟ್ಟಿಗೆ ಸೇರ್ಸೋಕೆ 
ತಮಟೆನೂ ಕಿತ್ತೋಗ್ಬೇಕು 

ಕಿತ್ತೋದ ಸಾಂಗು ಹಾಡೋಕು ಒಂದು 
ಗತ್ತಿದ್ರೆ ಸೂಪರ್ ಹಿಟ್ಟು 
ಕಿತ್ತಿಟ್ಟು ತುತ್ತು ಬಾಯ್ಗಿಟ್ರೆ ತಾನೇ 
ಬೊಂಬಾಟು ರಾಗಿ ಹಿಟ್ಟು.....    [೧]


ಕಳೆಯ ಕಿತ್ತಾಗ್ಲೇ, ಬೆಳೆಯು ಬಂಗಾರ 
ಬಾಳು ಹಸಿರಾಗೋದು 
ಕಲ್ಲ ಕಿತ್ತಾಗ್ಲೇ, ಶಿಲೆಗೆ ಸಿಂಗಾರ 
ಕೆತ್ತಿ ಕಲೆಯಾಗೋದು
ಬೆಳಕ ಕಿತ್ಕೊಂಡ ಕತ್ಲು ಸೋತಿದ್ದು 
ಬೆಳಕುಹರ್ದಾಗ್ಲೇನೆ 
ಒಳ್ಳೆ ಕೆಲ್ಸಕ್ಕೆ ಕಿತ್ಕೊಂಡ್ ಹಂಚೋನು 
ಕೆಟ್ಟೋನ್ ಹೆಂಗಾಗ್ತಾನೆ?


ಕಿತಪತಿ ಮಾಡೋರ್ಗಿಂತ 
ಕಿತ್ತೋದಂಗಿ ಉಟ್ಟೋರ್ಮೇಲು
ಇರೋ ತನ್ಕ ಕಿತ್ತಾಡೋರು 
ಹೋಗೋವಾಗ ಸೈಲೆಂಟು......    [೨]


ಎಲ್ಲೇ ನೋಡಿದ್ರೂ ಹಸಿವು ಬಡತನ 
ಕಿತ್ತು ತಿನ್ನೋ ಅಷ್ಟು
ದೇಶ ಕಿತ್ತೋಗಿ, ಭಾಷೆ ಸತ್ತೋಗಿ 
ಪ್ರಾಣ ಇದ್ರೆ ಇಷ್ಟು 
ಕಿತ್ತೂರ ರಾಣಿ ಚನ್ನಮ್ಮ ನಮ್ಮ 
ಸಂಗೊಳ್ಳಿ ರಾಯಣ್ಣ 
ಸೈನ್ಯ ಕಿತ್ತೋದ್ರೂ ಮತ್ತೆ ಕಟ್ಟಿದ್ರು 
ನಾವೇನ್ ಸುಮ್ನೆ ನಾ 

ಕತ್ತು ಸೀಳಿ ಬದ್ಕೋರ್ಗಿಂತ
ಬೆವ್ರು ಕಿತ್ತು ಬಾಳೋನ್ ಪಂಟ 
ಕರ್ನಾಟಕನ್ ಕಿತ್ಕೊಳ್ಳೋರ್ಗೆ
ಕನ್ನಡಿಗ ಕರೆಂಟು                       [೩]


                             -- ರತ್ನಸುತ

Tuesday, 28 January 2014

ಹೀಗೇ ಇರಬೇಕು ಅನವರತ !!

ಇರಬೇಕು ನಿನ್ನೊಡನೆ 
ಉಸಿರ ಜೊತೆಗೆ ಬೆಸೆದು 
ನೆರಳ ಕೂಡಿ ನಡೆದು 
ಬರಬೇಕು ನಿನ್ನೊಡನೆ 
ಕಷ್ಟ ದಾರಿಯ ದಾಟಿ 
ಇಷ್ಟಾರ್ಥಗಳ ಮೀಟಿ 

ಕಾಣಬೇಕು ನಿನ್ನ 
ಕಣ್ಣಿನೊಳಗೆ ಖುಷಿಯ 
ಮಾತಿನೊಳೆಗೆ ಸಿಹಿಯ 
ಒರಗಬೇಕು ಎದೆಗೆ 
ಮರುಗ ಬೇಕು 
ನಿನ್ನ ಮರುಕದಲ್ಲಿ 

ಸಾಗಬೇಕು ಹೀಗೇ 
ಅಲೆಗಳ ಹಿಂದಿಕ್ಕಿ 
ಮೋಡಗಳ ತಾಕಿ 
ನರಳಬೇಕು ಒಮ್ಮೆ 
ಒಮ್ಮೊಮ್ಮೆಯಾದರೂ 
ಮನಸಲ್ಲಿಯಾದರೂ 

ನುಡಿಯಬೇಕು ಚೂರು 
ಹೃದಯ ಸ್ಪರ್ಶಿ ಮಾತು 
ಬಿಡುವಿಲ್ಲದೆ ಕೂತು 
ತಡೆಯಬೇಕು ತಾನು 
ಮಿತಿ ಮೀರಿದಾಗ 
ಸ್ಮೃತಿ ಹಾಡುವಾಗ

ಉರುಳಬೇಕು ಮುತ್ತು 
ಹಿಡಿಯಬೇಕು ನಾ-
-ನಿಟ್ಟ ಮುತ್ತುಗಳು 
ಕೆರಳಬೇಕು ಬೆರಳು 
ನಡು ಮಲ್ಲಿಗೆಯ ಬಳಿ
ತೊದಲಬೇಕು 

ತಡವಬೇಕು ಬೆವರ 
ಬೆನ್ನೀರನೂ 
ಬೆಚ್ಚಗಾಗಿಸುವ ಮುನ್ನ
ಹಡೆಯಬೇಕು ಒಲವ 

ಬೆಳಕು ಕತ್ತಲು 
ಒಂದುಗೂಡುವ ಮುನ್ನ !!

                 -- ರತ್ನಸುತ

ಚಾತಕ ಪಕ್ಷಿಗಳು !!

ಒಂಟಿ ಕಾಲಿನಲಿ 
ನಿಂತು ಕಾಯುತಿರುವೆ 
ಚಾತಕ ಪಕ್ಷಿಯಾಗಿ 
ಮತ್ತೆಲ್ಲೋ ನನಗಾಗಿ 
ಕಾದಿರುವ 
ಚಾತಕ ಪಕ್ಷಿಗಾಗಿ 

ನಾನಿಲ್ಲೇ;
ಅವಳಲ್ಲೇ;
ಅವೆಳೆಲ್ಲೋ ಎಂದು ನನಗೆ 
ನಾನೆಲ್ಲೋ ಎಂದು ಆಕೆಗೆ
ತೀರದ ಗೊಂದಲ 
ಆದರೂ 
ಬಿಟ್ಟು ಕದಲುವ ಮನಸಿಲ್ಲ 

ನಡುವೆ ಕವಲುಗಳು ನನ್ನ 
ದಿಕ್ಕು ತಪ್ಪಿಸಿ ಬಿಟ್ಟರೆ?
ನಂಬಿಕೆ ಎಂಬ ಬಾಣದ 
ವ್ಯರ್ಥ ಪ್ರಯೋಗ!!
ತೊಟ್ಟ ಬಾಣವ 
ಮತ್ತೆ ತೊಡಲಾರೆ;
ಭಾಷೆ ನೀಡಿರುವೆ ಆಕೆಗೆ 
ಉಳಿಸಿಕೊಳ್ಳುವೆನೆಂದು ನಂಬಿಕೆಯ;
ಹುಸಿಗೊಳಿಸಲಾರೆ !!

ಇಲ್ಲಿ ಹಾವಿಯಾದ ನೀರು 
ಅಲ್ಲಿ ಕರಗಬಹುದು 
ಯಾವುದಕ್ಕೂ ಒಂದು 
ಓಲೆ ಗೀಚಿಬಿಡುವೆ ನೀರ ಮೇಲೆ. 

ಮತ್ತಿಲ್ಲಿ ಕರಗಲಿರುವ ಮುಗಿಲ 
ಸಾರಿ ಸಾರಿ ವಿಚಾರಿಸುವೆ 
ತಲುಪಬೇಕಾದ 
ಪತ್ರಗಳ ಕುರಿತು

ಜೇನು ಮೆತ್ತಿದ ಕೈಗೆ 
ಕಚ್ಚಿದ ಹುಳುವಿನ ಚಿಂತೆಯಿಲ್ಲ 
ಮೆತ್ತದ ಕೈಗೇ 
ಯಮ ಯಾತನೆ 
ಅಂತೆಯೇ 
ಮನಸಿಗೆ  ಅವಳ ನೆಪದ ನೈವೇದ್ಯ 
ಒಡಲಿಗೆ ಒದ್ದಾಟ;
ಇದು ಬಗೆಹರಿಯದ ಪೀಕಲಾಟ 

ಗುರುತಿಗಾಗಿ 
ಇದ್ದ ಕಲ್ಲುಗಳನ್ನೆಲ್ಲವ ಕೆತ್ತಿ,
ಕೊರೆದು ದಿನಗಳುರುಳಿವೆ 
ನನಗೆ ಶಿಲ್ಪಿ ಪಟ್ಟ ಕಟ್ಟಿ. 
ಅವಳಿದ್ದೆಡೆಯಲ್ಲೂ
ಶಿಲ್ಪ ಕಲಾಕೃತಿಗಳು 
ರಾರಾಜಿಸುತ್ತಿರಬೇಕು
ಐಕ್ಯಕ್ಕಾಗಿ ಹಪ ಹಪಿಸಿ

ದಿನವೂ 
ವಿನೂತನ ಕನಸುಗಳಲ್ಲಿ 
ಇಬ್ಬರೂ ಒಂದಾದ 
ಸಂಗತಿಗಳ ಬಿಚ್ಚಿಡುವ ಆಸೆಯಲ್ಲೆ 
ಎಷ್ಟೋ ಕನಸುಗಳು 
ಬಂಗವಾಗಿದ್ದುಂಟು 
ಆಕೆಗೂ ಆಗಿರಬೇಕು 
ಹೀಗೆಯೇ?

ಏನಾದರೇನಂತೆ 
ಕೈಗೂಡದ ಆ ಕ್ಷಣದಿಂದ 
ನಮ್ಮ ನಡುವೆ 
ಈ ಅಂತರ 
ನಾನಿನ್ನೂ ಇಲ್ಲೇ 
ಆಕೆಯಿನ್ನೂ ಅಲ್ಲೇ 
ಇಬ್ಬರೂ ಒಬ್ಬರಿಗೊಬ್ಬರು 
ಚಾತಕ ಪಕ್ಷಿಗಳೇ !!

                      -- ರತ್ನಸುತ

ಪಾಪಾತ್ಮ !!

ಶಾಂತಿ ಕಾಯ್ದುಕೊಂಡ ಆತ್ಮದೊಳಗೆ 
ನಿಲ್ಲದ ಸಮರ 
ತನ್ನ ವಿರುದ್ಧ ತಾನೇ 
ದಂಡೆತ್ತಿ ಕೊಲ್ಲುವುದ ತಡೆಯದ ತಾನು 
ಒಂದೆಡೆ ಇನ್ನೂ ಕಣ್ಣು ಬಿಡದ ಶಿಶು 
ಮತ್ತೊಂದೆಡೆ ಕಪಟ ತುಂಬಿದ ಅತಿಶಯ ಶಕ್ತಿ

ಗೆದ್ದರೂ ಸೋತಂತೆ 
ಸೋತರೂ ಗೆದ್ದಂತೆ 
ಮಾನದಂಡಗಳ ಗಾಳಿಗೆ ತೂರಿದರೂ 
ತನ್ನ ಮೇಲೆ ತಾನೇ ದೂರುವ ಅಸಹಾಯಕತೆ 

ಹೊರಗೆ ಪ್ರಶಾಂತ ಕೊಳದಲ್ಲಿ 
ವಿಹರಿಸಿದ ಹಂಸ 
ಒಳಗೊಳಗೆ ಯಾರೋ
ಅದರ ಕಾಲೆಳೆಯುತ್ತಿರುವ ಕಿರಾತಕರು;
ಆದರೂ ಮಾಸದ ನಗೆಯ ಹೊತ್ತು 
ಎಬ್ಬಿಸಿ ಸಾಗಿತ್ತು 
ಏನೂ ಸೂಚಿಸದ 
ಸಣ್ಣ ಪ್ರಮಾಣದ ರಿಂಗಣಗಳ

ಆತ್ಮ ವಂಚನೆ,
ಆತ್ಮ ಸಂತೃಪ್ತಿ,
ಆತ್ಮಾವಲೋಕನ,
ಆತ್ಮಾನುಸಂಧಾನ
ನಿಜದಿ ಆತ್ಮವೆಲ್ಲಿ?
ತನ್ನ ತಾನೇ ಬಂಧಿಸಿಕೊಂಡಿದೆ 
ಕಣ್ಣು, ಕಿವಿ, ಬಾಯಿ 
ಎಲ್ಲವನ್ನೂ ಮುಚ್ಚಿಕೊಂಡು 
ಥೇಟು ಮುಕ್ಕೋತಿಗಳಂತೆ !!

ಸಿಡಿ ಗುಂಡಿನ ಸದ್ದ 
ಒಳಗೇ ಅದಿಮಿಟ್ಟು 
ಕ್ಷಿಪಣಿಗಳ ಒಂದೊಂದೇ 
ಸಾಲಾಗಿ ಗುರಿಯಿಟ್ಟು 
ಸತ್ತ ಆತ್ಮಕೆ ಮುಕುತಿ 
ದೇಹ ತೊರೆದಾಗಲೇ 

ಅಲ್ಲಿ ವರೆಗೆ ರಂಗ 
ರಣ ಕಹಳೆ ಹೊರತಾಗಿ 
ಮೌನವನು ಸವಿವುದು 
ಬಯಲ ದೀಪ ತಾನು 
ಬೆಳಕ ಹೊರ ಸೂಸಿ 
ಕತ್ತಲ ಗೆದ್ದಂತೆ !!

            -- ರತ್ನಸುತ

ಅಟ್ಟದ ಗೊಂಬೆಗಳು ಹಿಂದೊಮ್ಮೆ ನಕ್ಕಾವೆ !!

ಚೆಲ್ಲಾಪಿಲ್ಲಿ ಆಟಿಕೆಗಳು, ವರಾಂಡದ ಅಂಗಳದಿ
ಕೆಲವೊಂದು ಉರುಳಿ ಮೂಲೆ ಅಪ್ಪಿತ್ತು 
ಇನ್ನ್ಕೆಲವು ಕಾಲ್ಮುರಿದು ಮಕಾಡೆ ಮಲಗಿತ್ತು 
ಬೇಲಿ ಹಾರಿ ಕೆಲವು ನಾಯಿ ಪಾಲಾಯ್ತು  

ಕೀಲಿ ಕಳೆದು ಒಂದು ಕುಣಿಯುತ್ತಲಿಲ್ಲ 
ಕೆಲವುಕ್ಕೆ ಕೈಯ್ಯಿಲ್ಲ, ಕೆಲವುಕ್ಕೆ ಕಣ್ಣಿಲ್ಲ 
ಇನ್ನೂ ಕೆಲವುಕ್ಕೆ ಆಕಾರವಿಲ್ಲ 
ಆದರೂ ಮಗು ಎಲ್ಲೂ ಭೇದ ಮಾಡಿಲ್ಲ

ಹೊಸತಾಗಿ ತಂದವು ಬಹಳ ಸಮಯದ ವರೆಗೆ 
ಹೊಸತಾಗಿ ಉಳಿಯದೆ ಗುಂಪು ಸೇರಿದವು 
ಅಡುಗೆ ಮನೆ ಪಾತ್ರೆ ಪಗಡೆ ಆಟದಲಿ ಕೂಡಿ
ಇದ್ದ ಸದ್ದನು ಮೆಟ್ಟಿ ಹದ್ದು ಮೀರಿದವು

ರದ್ದಿ ಆದವು ಗಿಲಕಿ, ಬುದ್ಧಿ ಇಲ್ಲದ ಕಿಟಕಿ 
ಇನ್ನೂ ಬೀರಿದೆ ಬೆಳಕ ನೆರಳ ಹಚ್ಚೆಯಲಿ
ಗುಮ್ಮನೆಂದು ಕೂಸು ಇನ್ನೆಷ್ಟು ಬಿಚ್ಚೀತು 
ಒದ್ದೆ ಮಾಡಿತು ನಕ್ಕು ತನ್ನ ಉಚ್ಚೆಯಲಿ

ಮೊಣಕಾಲು ಬಲಿತಿರಲು ಮನೆ ಆಟ ಸಾಕಾಗಿ 
ಬೆಟ್ಟು ಚಾಚಿತು ಬಾಗಿಲ ಹೊರ ನೂಕಲು 
ಎಡವಿ ಪೆಟ್ಟಾದದ್ದು ಅದೆಷ್ಟೋ ಬಾರಿ 
ಎಲ್ಲಕ್ಕೂ ಜೊತೆಗೊಂದು ನೆನಪಿನ ಕಾವಲು 

ಗರ್ಭಕ್ಕೆ ತೊಟ್ಟಿಲು ಬ್ರಹ್ಮಾಂಡವನಿಸಿತ್ತು 
ತೊಟ್ಟಿಲಿಗೆ ಮನೆಯೇ ಲೋಕವಾಗಿತ್ತು 
ಮನೆಗೆ ತನ್ನ ಹೊರಗಿನದ್ದೇ ಪರ್ಪಂಚ 
ಆಸೆ ಅಲ್ಲಿಗೆ ಕೊನೆಗಾಣದಾಗಿತ್ತು 

ಪುಟ್ಟ ಕಣ್ಣುಗಳೀಗ ಆಗಸವ ನೋಡುತಿವೆ 
ದಿಗಂತ ಅದೂ ತಮ್ಮಂತೆಯೇ 
ಅಟ್ಟದ ಗೊಂಬೆಗಳು ಮುಂದೊಮ್ಮೆ ನಗುತಾವೆ 
ಈಗ ಕೆಲಸಕೆ ಬಾರದಿದ್ದರೇನಂತೆ !!

                                           -- ರತ್ನಸುತ

Monday, 27 January 2014

ಗುರು ಪ್ರಣಾಮ !!

"ಕೈ ಮುಗಿವೆ ಗುರುವೈಯ್ಯ 
ಆಕಾಶ ನೀನಯ್ಯ
ದಿಗಂತ ನಿನ್ನ ಮನ
ಅನಂತ ನಿನ್ನ ಜ್ಞಾನ
ನಾ ನಿನ್ನ ಕಾಲಡಿಯ
ಧೂಳು ಕಾಣಯ್ಯ"

ಗುರು ಮೆದು ದನಿಯಲ್ಲಿ
"ನೀ ಧೂಳು
ನಿಜ ಕಂದ
ನಾ ಸ್ಥಾವರ
ನೀ ಜಂಗಮ
ನೀ ಒಬ್ಬರಿಗಾದರೂ
ಎಟಕುವ ಸಿಹಿ ನೀರು
ನಾ ಆಳದ ಎಟುಕದ
ಕಟು ಬೇರು"

ನಾನಂದೆ 
"ಗುರುವಾಗಿ ನೀ ನುಡಿದೆ
ನನಗಿಲ್ಲವಯ್ಯ
ಜರಿವ ಹಕ್ಕು;
ನೀನೋ ಶ್ರೇಷ್ಠನು
ನಾನೋ ಕನಿಷ್ಠನು
ನಾ ಕೇವಲ ನಾರು
ನೀ ನನ್ನ ಹೂವು
ನೀ ಕಡಲು 
ನಾ ಮುತ್ತ ಹೊರತು ಚಿಪ್ಪು"

ಗುರು ಅಂದ 
"ನಾ ಕಡಲು 
ನನ್ನೊಡಲ ಒಳಗೆ 
ಭೂ ಕಂಪ, ಜ್ವಾಲಾಮುಖಿ
ಮುನಿದೊಡೆ ಪ್ರಳಯ. 
ನೀ ನಿಸ್ವಾರ್ಥಿ
ಮುತ್ತೊಬ್ಬರ ಪಾಲು 
ಚಿಪ್ಪೊಬ್ಬರ ಪಾಲು 
ನೀ ಉತ್ತಮರ ಸಾಲ 
ಮೊದಲಿಗ ಕಾಣೋ"

ನಾನಂದೆ 
"ನನ್ನೊಳಗೆ ನನ್ನಿರಿಸಿ 
ನನ್ನ ನಿಯಂತ್ರಿಸಿದೆ 
ಅಜ್ಞಾನವ ಚಿವುಟಿ 
ಸುಜ್ಞಾನ ಬಿಂಬಿಸಿದೆ 
ನನ್ನೊಳಗೆ "ನಾ" ಇರದೆ  
ನಿನ್ನ ಕಾಣೋ ನಾನು 
ನಿನ್ನವನೈಯ್ಯ,
ನಿನ್ನೊಳಗೊಬ್ಬನಯ್ಯ 
ಆದರೂ ನೀ ಎನ್ನ 
ಅಂತರ್ಯಾಮಿ"

ಗುರು ಅಂದ
"ನಿನ್ನ ನೀ ಅರಿತದ್ದು 
ನಿನ್ನ ಕೌಶಲ್ಯ 
ನಾ ಕೇವಲ ನಿನ್ನ 
ನೆರಳಾಗಿ ಉಳಿದೆ 
ನೀ ನಡೆದದೇ ದಾರಿ 
ನೀ ತಲುದ್ದೇ ಗುರಿ

ನಾನಿರುವೆ ಎಂಬ 
ಭಕ್ತಿ ನಿನ್ನಲಿ 
ನೀನಿರುವೆ ಎಂಬ 
ಶಕ್ತಿ ನನ್ನಲಿ"

ಕಡೆಗೂ 
ಗುರು ಆಕಾಶವಾದ 
ನಾ ಅವನಾಜ್ಞೆಯ ಧೂಳಾಗಿ ಉಳಿದೆ 
ನನ್ನ ಚಿತ್ತದನುಸಾರ !!

ಅಲ್ಲಗೈಯ್ಯುವುದು 
ಗುರುವಿನ ಹಿರಿಮೆ 
ಹೌದೆಂದು ಪಾಲಿಪುದು 
ಶಿಷ್ಯ ಧರ್ಮ 
   
               -- ರತ್ನಸುತ

ಪಂಚಪ್ರಾಣ ತೆಕ್ಕೆಗೆ !!

ಹಾಲಿಗೊಂದು ತೊಟ್ಟು ಮೊಸರು 
ಪೂರ್ತಿ ಹೆಪ್ಪುಗಟ್ಟಲು 
ದಾರಕೊಂದು ಸಣ್ಣ ಸೂಜಿ
ಎರಡ ಕೂಡಿ ಬೆಸೆಯಲು  
ಮಾತಿಗೊಂದು ಚಂದ ರಾಗ 
ಹಾಡು ಮೂಡಿ ಹೊಮ್ಮಲು 
ಕಣಕ ಹೂರಣಕ್ಕೆ ಹೊದಿಸಿ 
ಬಾಳು ಸಿಹಿಯ ಹಂಪಲು

ತೊರೆ  ತೊರೆಯ ಹರಿವುಗಳು 
ಕಡಲ ಸೇರಬೇಕಿದೆ 
ಎಲೆ ಮರೆಯ ಹೂ ಚಿಗುರು 
ವಸಂತಕಾಗಿ ಕಾಯದೆ  
ರೆಕ್ಕೆಗೊಂದು ಎತ್ತರವಿದೆ
ಜೋಡಿ ಹಕ್ಕಿಗಾಗಸ
ಮುದ್ದೆ ಬೆಲ್ಲ ಕರಗಲಿಕ್ಕೆ
ನಾಂದಿಯಾದ ಪಾಯಸ 

ದೂರ ಚುಕ್ಕಿಗೊಂದು ಹೆಸರು 
ದಿನವೂ ಬದಲಿಸುತ್ತಲಿ 
ತಾಜ ಮಹಲ ಕಟ್ಟಿಕೊಂಡು 
ಆಡಿಕೊಂಡ ಮಾತಲಿ 
ಸುತ್ತ ಮುತ್ತ ಮೌನವನ್ನು 
ಸವಿದು ಸುಮ್ಮನಾಗಲು 
ನೋಟವನ್ನು ಪೋಣಿಸೋಣ 
ಒಂದು ಕಾವ್ಯ ಹೊಸೆಯಲು 

ಏಳು ಬಣ್ಣ ಸಾಲದಾಗಿ 
ವರ್ಣ ಕ್ರಾಂತಿ ಆಯಿತು 
ಬಿಳಿಯು ತಾನು ಎದೆಯ ಸೀಳಿ 
ಸಾಲು ಸಾಲು ಕಟ್ಟಿತು 
ಕೋಪಗೊಂಡ ಕೆನ್ನೆ ರಂಗು 
ಯಾವ ಮೂಲ ಅದರದು?
ನಾಚುಗಣ್ಣಿನೊಳಗೆ ರಂಗವಲ್ಲಿ
ಅಳಿಸಲಾಗದು 

ಹೊಸತು ಎಲ್ಲ ಮೊದಲ ಬಾರಿ 
ಅಪರಿಚಿತ ಎಲ್ಲವೂ 
ಸಾಗಿ ಬೆಳೆದ ಪರಿಚಯಕ್ಕೆ 
ಹೀಗ್ಯಾವೂ ಅನಿಸವು 
ಕಿರು ಬೆರಳ ಕೊಕ್ಕಿ ಹಿಡಿದು 
ಸಿಕ್ಕಿ ಬಿದ್ದ ಕೊಕ್ಕಿಗೆ 
ಹಂಚಿ ತಿಂದ ಗುಟುಕ ಜೊತೆಗೆ 
ಪಂಚಪ್ರಾಣ ತೆಕ್ಕೆಗೆ !!

                   -- ರತ್ನಸುತ

Saturday, 25 January 2014

ಒಂದಿರುಳ ಕನಸಿನಲಿ !!

ಬಾಗಿಲಲಿ ಸೇರಿಟ್ಟು 
ಬೆಲ್ಲದಚ್ಚನೂ ಇಟ್ಟೆ
ಬೇಗ ಒದ್ದು ಬಂದು
ಒಲೆಯ ಹಚ್ಚೆ 

ಅಕ್ಕಿ ಬೇಯಿಸಿ ಗಂಜಿ-
-ಯೊಟ್ಟಿಗೆ ಬೆಲ್ಲವನು
ಬೆರೆಸಿ ಉಣಿಸು
ಬಳಿಕ ನಮಗೆ ಸ್ವೇಚ್ಛೆ 

ಹಚ್ಚು ದೀಪಕೆ ಏಕೆ
ಅಷ್ಟು ಏರಿದ ಬತ್ತಿ
ಕಷ್ಟವಾಗಲುಬಹುದು
ನಿರ್ಲಕ್ಷಕೆ 

ನೆರಳು ನಾಚಲು ನಾವೂ
ನಾಚದೆ ವಿಧಿಯಿಲ್ಲ 
ಒಮ್ಮತವಿದೆ 
ಕತ್ತಲ ಪಕ್ಷಕೆ 

ಕಂಬಳಿಯು ನೆಲಕಚ್ಚಿ 
ದಿಂಬುಗಳು ತುಸು ಬೆಚ್ಚಿ
ಮಂಗಳಕೆ ನಾಂದಿಯ 
ಹಾಡಬೇಕು 

ಒಂದಿರುಳು ಹೀಗಿತ್ತು
ಮರೆಯಲಾರದ ಹಾಗೆ 
ಅನಿಸುವಷ್ಟರ ಮಟ್ಟ 
ತಲುಪಬೇಕು

ಹೊಸತಾದ ಅಲೆಯನ್ನು
ಎಬ್ಬಿಸಿದ ಕಡಲಲ್ಲಿ 
ಮಿಂದು ಏಳುವ ಒಮ್ಮೆ 
ಮಿಲನದಲ್ಲಿ 

ನೂರೆಂಟು ವಿಷಯಗಳ 
ವಿನಿಮಯ ನಡೆಸೋಣ
ಪರಸ್ಪರ ಮೌನದ
ಸ್ಖಲನದಲ್ಲಿ 

                   -- ರತ್ನಸುತ 

Friday, 24 January 2014

ನವಿಲುಗರಿಯ ಹಾಡು

ನವಿಲುಗರಿಯೊಂದು 
ನಾಚಿದಂತನಿಸಿತು 
ನಿನ್ನ ಮುಖ ನೋಡಿ 
ಗಂಧರ್ವ ಲೋಕ
ನೆನಪಾಯಿತು ನಿನ್ನ 
ಹಾಡನ್ನು ಹಾಡಿ 

ಮನಸಲ್ಲಿ ಒಂದು 
ಸಣ್ಣ ಮನೆ ಮಾಡಿ 
ನಿನ್ನ ಹೆಜ್ಜೆ ಗುರುತ 
ಇರಿಸಲೇನು 
ಎಷ್ಟೆಲ್ಲಾ ಆಸೆ 
ಬಚ್ಚಿಟ್ಟುಕೊಂಡಿರುವೆ 
ಒಂದೊಂದೇ ಮೆಲ್ಲ
ಹೇಳಲೇನು?                                [೧]

ಕನಸುಗಳು ನಿನ್ನ ಕನವರಿಸಿವೆ 
ಕವನಗಳ ಬರೆದು ಕಾದಿರಿಸಿವೆ 
ಕಳವಳಕೆ ನೂರು ಕಾರಣವಿದೆ 
ಕರೆಯೋಲೆಗೆ ನೀ ಉತ್ತರಿಸದೆ 

ಮುತ್ತೊಂದ ನೀಡುವೆ 
ಬಳಿಗೆ ಬರಲು 
ಮಗುವಂತೆ ನಾ 
ನಿನ್ನ ಮಡಿಲು ಸಿಗಲು....               [೨]

ನವಿಲುಗರಿಯೊಂದು ....... 

ಅನುರಾಗ ಅರಳಿ ಹಾಡಾಯಿತು 
ಅನುಗಾಲ ನಿನ್ನ ಜಪವಾಯಿತು 
ಅನುಮಾನವೇಕೆ ಅಭಿಸಾರಿಕೆ 
ಅಭಿಮಾನಿ ನಾನು ನಿನ್ನಂದಕೆ 

ಅತ್ತಾಗ ಬರುವೆ 
ಮುತ್ತ ಸರಿಸಿ 
ನಿನ್ನೆದೆಗೆ ನನ್ನ 
ಉಸಿರು ಬೆರೆಸಿ .....            [೩]

ನವಿಲುಗರಿಯೊಂದು ....... 

                             -- ರತ್ನಸುತ 

Thursday, 23 January 2014

ಉತ್ತರವ ಅರಸುತ್ತ ಹೋದಂತೆ !!

ಪ್ರಣವ ಪ್ರಾಣವ ಕಾಯೋ 
ಆತ್ಮ ಪ್ರಣತಿ ನೀನು 
ಪ್ರಾರ್ಥಿಸಲು ಪವಡಿಸುವೆ ಭಕುತರಲ್ಲಿ 
ನಿನ್ನ ಪಾದದ ಧೂಳ 
ಲೆಕ್ಕಿಸದೆ ಹೋದರೆ 
ನಂಬಿದವರಿಗೆ ಸೋಲು ಖಚಿತ ಇಲ್ಲಿ 

ಹಸಿವು ಒಬ್ಬರ ಆಸ್ತಿ 
ಅನ್ನ ಮತ್ತೊಬ್ಬರದು 
ಇಬ್ಬರ ಜೂಟಾಟ ಮುಗಿಸು ಬೇಗ  
ಢಮರುಗದ ಗದ್ದಲವ  
ಕಣ್ಣೀರು ಮೀರಿಸಿದೆ 
ನಿನ್ನ ಕರಗಳ ಒಡ್ಡಿ ಕ್ರಮಿಸು ಈಗ 

ವಾಯುಭಾರದ ಕುಸಿತ 
ಎದೆಯಲ್ಲಿ ಅನವರತ 
ಸಾವಲ್ಲೂ ಮೂಡದ ಮಂದಹಾಸ 
ನಿನ್ನ ಸ್ಮರಣೆಗಳೆಲ್ಲ  
ವ್ಯರ್ಥವೆಂದು ಅನಿಸಿ 
ನಾಲಿಗೆ ಮರೆತಿದೆ ಸುಪ್ರಭಾತ 

ನೀರು ಅಮೃತವಲ್ಲ 
ಮಣ್ಣು ಚಿಗುರಿಸುತಿಲ್ಲ 
ಪಂಚಭೂತಗಳಲ್ಲಿ ಶಕ್ತಿಯಿಲ್ಲ 
ಕಲ್ಪವೃಕ್ಷವೂ ತಾನು 
ಮೋಸ ಮಾಡುವ ವೇಳೆ 
"ದೇವರೇ" ಅನ್ನುವವರಾರೂ ಇಲ್ಲ 

ತಿಲಕವಿಟ್ಟರೆ ತುರಿಕೆ 
ಮಂತ್ರ ಪಟಿಸುವ ಮನಕೆ 
ಮುಕ್ತಿ ಮಾರ್ಗವು ಇನ್ನು ದೊರೆವುದೆಲ್ಲಿ 
ಎದ್ದ ಪ್ರಶ್ನೆಗಳೆಲ್ಲ 
ತೆರೆದುಕೊಂಡಿವೆ ಮುಂದೆ 
ಉತ್ತರಕೆ ಕಾಯಿಸುವೆ ಮೌನ ತಾಳಿ 

                                 -- ರತ್ನಸುತ 

ಚೆಲ್ಲಾಪಿಲ್ಲಿ ಹನಿಗಳ ಗುಡ್ಡೆ !!

ನೂರು ಸುಳ್ಳಿಗೆ 
ನನ್ನ ಇಷ್ಟ ಪಟ್ಟವಳು 
ಒಂದು ನಿಜಕೆ 
ಬಿಟ್ಟು ಹೋದಳು !!


***

ಪ್ರತೀ ಗಳಿಗೆ 
ನನ್ನೊಡನೆ 
ನನ್ನ ಸೆಣಸು 

ಗೆಲ್ಲುವ ಬಲದಲ್ಲಿ 
ನನ್ನ ಸೋಲು 

ಸೋಲುವ ಪಥದಲ್ಲಿ 
ನನ್ನ ಗೆಲುವು !!


***

ಹಾಲು ಮೊದ್ಲಿಗೆ ಸಪ್ಪೆ ಹೊಡೆದ್ರೆ 
ಕೊನೆ ಕೊನೆಗೆ ರುಚಿ ಹೆಚ್ತದೆ 
ತಳ್ದಲ್ಲಿ ಸಕ್ರೆ ಸಿಕ್ತದೆ !!

ಹಾಲು ಕುಡಿಯೋ ಮುಂಚೆ 
ಒಂದ್ಸಾರಿ ಕಲ್ಸಿದ್ರೆ 
ಮೊದ್ಲು, ಕೊನೆ, ನಡ್ವಿನ್ ಗುಟ್ಕು 
ಒಂದೇ ಆಯ್ತದೆ !!


***

ಖಾಲಿ 
ಹಾಳೆಗಳೆಂದು 
ಸುಮ್ಮನೆ 
ಹೊರಳಿಸದಿರು 

ಆ ಸುಕ್ಕು 
ನನ್ನ ಕಂಬನಿ ಗೀಚಿದ 
ತೊದಲು ಪದ್ಯ 
ಗಮನಿಸು ಚೂರು !!


***

ಗುಟ್ಟು 
ಹಂಚ್ಕೊಡ್ 
ಕೂತ್ಹಕ್ಕಿಗಳು 

ಗುಟ್ಕು 
ತರೋದೇ 
ಮರ್ತ್ವಂತೆ !!


***

ಕಾಲ ಕೆಳಗೆ 
ಹೊಸಕಿದ ಬೀಡಿ ತುಂಡು 
ಅದಕ್ಕೂ ಮುಂಚೆ 
ತುಟಿ ತುದಿಯಲ್ಲಿ 
ರಾರಾಜಿಸುತ್ತಿತ್ತು !!

"ಎಲ್ರೂ 
ಎಲ್ಲಾ ಕಾಲಕ್ಕೂ 
ಇದ್ದಲ್ಲೇ 
ಇದ್ದಂಗೇ 
ಇರೋದಿಲ್ಲ ಅಲ್ವೇ ??!!"


***

ಒಂದು ಮೊಳ ಹೂವಿಗೆ 
ನಿನ್ನ ಸಮಾದಾನ ಪಡಿಸಬಹುದಾದರೆ 

ದಿನಾಲೂ ಜಗಳವಾಡೋಣ !!


***

ನಿನ್ನ 
ಕೈ ಬೆರಳ 
ಆಸರೆ ತೊರೆದ 
ನಾನು 
ಶಾಕುಂತಲೆ
ಕಳೆದ 
ಉಂಗುರದಂತೆ !!


***

ಮಾಗಿ ಗೂಡು ಕಟ್ತಾವೆ 
ರೇಷ್ಮೆ ಹುಳ 
ಒಳ್ಳೆ ಇಳುವರಿ ರೇಟು ಸಿಕ್ರೆ 
ತೀರ್ತೈತೆ ಸಾಲ !!


***

ಉಪಾಯವಾಗಿ
ನೆರಳು ಜಾರಿಕೊಳ್ಳುವುದು
ಗೊತ್ತೇ ಆಗೊಲ್ಲ ನೊಡಿ

ಒಡಲು ಮಣ್ಣ ಪಾಲು
ಉಸಿರು ನೀರ ಪಾಲು
ಹೆಸರು ಗೋಡೆ ಪಾಲು!!
 


***

ಪತ್ರ ಮುಖೇನ 
ಬರೆದು ಕಳಿಸಲು 
ಇದೇನು ತೊಂಬತ್ತರ ದಶಕವಲ್ಲ 

ಪೆಪ್ಪರ್ ಮಿಂಟಿಗೆ 
ಆಸೆ ಪಟ್ಟು 
ನಿನ್ನ ಹಿಂದೆ ಬಂದವನಲ್ಲ 

ಬದಲಾಗಿರುವೆ 
ನಾನೂ ಕೂಡ 
ಕಷ್ಟ ಪಟ್ಟು, ಸುಮ್ನೆ ಅಲ್ಲ

ನನ್ ಹೆಸರು
ಸ್ವಲ್ಪ ಉದ್ದ
ಮುದ್ದಾಗ್ ತುಂಡ್ಮಾದು ಪರ್ವಾಗಿಲ್ಲ !!


***

ಸುಳುವು ನೀಡದೆ 
ಜಾರಿಕೊಳ್ಳುವಾಕೆ 
ಮತ್ಸಕನ್ಯೆ 

ಅವಳಾಗೇ 
ನನ್ನ ತೆಕ್ಕೆಗೆ 
ಬೀಳಬೇಕೇ ವಿನಃ 

ಬೀಳಿಸುವಷ್ಟು 
ದೊಡ್ಡ ಹೃದಯ 
ಇನ್ನಿತರೆ ಸವಲತ್ತು 
ನನ್ನಲ್ಲಿಲ್ಲ !!


***

ಆರಿಸಿಕೊಂಡ 
ದಾರಿಯ ಪೂರ 
ಪಶ್ಚಾತಾಪದ ನೆರಳು 

ಬೇಡದೆ ಬಿಟ್ಟ 
ದಾರಿಗಳಂತೂ 
ಆಳ ಅರಿಯದ ಕಡಲು 

ಅನುಕಂಪದ ಆದಿ 
ಅನುಮಾನದ ಅಂತ್ಯ 
ಅನುಸರಿಕೆಯ ಪಯಣ !!


***

ತಪಸ್ಸಿಗೆ ಕುಳಿತ 
ಅದೆಷ್ಟೋ ಹೆಣ್ಣು ಜೀವಗಳು 
ಕಲ್ಲಾಗಿ ಬಿಡುವರು 
ಕರಗಿಸುವ ಕೈ 
ಮೈಯ್ಯ ಬಳಸುವನಕ 

ಅಂತೆಯೇ 

ಕಲ್ಲುಗಳು ಗೈದ ತಪಸ್ಸಿಗೆ 
ಹೆಣ್ಣಿನಾಕಾರ ಕೊಡುವ 
ವರದ ಕೈ ಸಿಕ್ಕಿದ್ದರೆ
ಮತ್ತೆ ಕಲ್ಲಾಗಿಸುವ ಮನಸುಗಳನ್ನೂ
ಕರಗಿಸಬಹುದಿತ್ತು !!


***

ಹಬ್ಬವೆಲ್ಲ ಮುಗಿದ ಬಳಿಕ 
ಎಳ್ಳು ಬೇರೆ 
ಬೆಲ್ಲ ಬೇರೆ ಡಬ್ಬಿಯೊಳಗೆ 
ಕಾಯಬೇಕು 
ಮರಳಿ ಕ್ರಾಂತಿಯಾಗಲು 
ಸಂಕ್ರಾಂತಿಯಾಗಲು !!


***

ಆ ಕೆರೆ 
ಈ ಕೆರೆ 
ಏಳ್ಕೆರೆ ನೀರಿಗೆ 
ಗಂಟಲು ಒಗ್ಗಿ 
ಹೋಗಿರಲು 

ತೀರ್ಥಕೆ 
ಎಂಥಕೆನಗೆ 
ದಿಗಿಲು? :p 


***

ಈ 
ಇರುಳ ಎಕಾಂತದಿ 
ಬೀಳುವ 
ಬೀಕರ 
ಕನಸುಗಳ ಪಾಲಿಗೆ 
ನಾ 
ಕಂಪಿಸದೆ 
ಕೆಂಪಿರುವೆಯ 
ಹಿಡಿಯೆ ಹೊರಟ 
ಮಗುವಂತಾಗಬೇಕಿದೆ !!


***

ಮಗು 
ಒಂದನ್ನೂ ಮುಟ್ಟದೆ 
ಮನೆ ತುಂಬ
ಇಟ್ಟಾಡಿಸಿದ ಆಟಿಕೆಗಳಲ್ಲಿ 
ಒಂದು ನಿರ್ಲಿಪ್ತ ಭಾವ 

ಮೊಣಕಾಲು ಬಲಿತು 
ನಡೆವಂತಾದ ಮೇಲೆ 
ಇನ್ನೇನಿದ್ದರೂ ಅವು 
ಅಟ್ಟದ ಪಾಲು !!


***

ಯಾರೆಷ್ಟೇ 
ಕೂಗಿ ಹೇಳಿದರೂ 
ಮನಸಿನ ಕಿವಿಗೆ
ಕೇಳುವುದು 
ಮೆಲ್ಲ ಪಿಸು ಮಾತು 
ಅದಕಾಗಿಯೇ
ನೀ ಎಲ್ಲಕ್ಕೂ ಹೆಚ್ಚು 
ಪರಿಣಾಮಕಾರಿ 
ಅಪಾಯಕಾರಿ ಆಯಸ್ಕಾಂತ !!


***

ಬರಿಗಾಲಲಿ ನಿನ್ನ ಸೇರುವಾಸೆ 
ಪಾದ ರಕ್ಷೆಗಳಿಗೇಕೆ 
ಹೆಗ್ಗಳಿಕೆ ಪಾಲು !!
ನೆತ್ತರು ಹರಿದಾಗ
ಅದಕ್ಕೂ ಸಿಗಲಿ ಬಿಡು 
ಪಶ್ಚಾತಾಪದ ನಿಟ್ಟುಸಿರು !!


***

ತುಟಿ ಜಗ್ಗುವ ಮೊದಲೇ 
ನಗು ಮಾಸುವ ಮುನ್ನ 
ಒಮ್ಮೆ ತಿರುಗಿ ನೋಡೆನ್ನ

ಮತ್ತೆ ನಾ ನಕ್ಕು ಮೆಚ್ಚುಗೆಯಾಗಲು
ಮತ್ತೊಂದು ಸಂವತ್ಸರವೇ 
ಬೆಕಾಗಬಹುದು !!

ನೀ ನನಗೆ 
ಮೊದಲ ವರ್ಷದಷ್ಟೇ ವಿಶೇಷ 
ಸೊಬಗು
ನಾನ್ಯಾರೆಂಬುದೇ
ನನಗೂ ಕಾಡುತ್ತಿರುವ ಪ್ರಶ್ನೆ !!


***

ಸಾಮಾನ್ಯ ಜನತೆ 
ತನ್ನಿಷ್ಟಕ್ಕೆ ಪಾರ್ಟಿ ಮಾಡಿದರೆ 
ಪಳ್ಟಿ ಹೊಡೆವುದು ಗ್ಯಾರಂಟೀ 

ಬದಲಾವಣೆಗೆ ದೇಶ 
ದೇಶಕ್ಕಾಗಿ ಬದಲಾವಣೆ 
ಎಂದಿಗೂ ಆಗಿ ಬರಲ್ಲ 

ಭಾರತಕ್ಕೆ ಏಲಿಯನ್ಗಳ ದೃಷ್ಟಿ ತಾಕಿರ್ಬೇಕು !!


***

ನಾ ನಟಿಸುವಾಗ 
ಸಿಕ್ಕಿ ಬೀಳುವುದು 
ನಿನ್ನ ಅಮಾಯಕ 
ಅಸಹಜ ನಟನೆಗೆ 

ನೀನೂ ನಟಿಸುವುದ 
ಕಲಿತ ಮೇಲೆ 
ಒಲವೆಂಬ ನಾಟಕವ
ಮುಂದುವರಿಸುವ !!


***

ಮೈ ಮರೆತು ಬರೆದ 
ಅದೆಷ್ಟೋ ಸಾಲುಗಳು 
ಆ ಬಳಿಕ 
ಸಪ್ಪೆ ಅನಿಸಿದ್ದು 
ನಿನ್ನ ಅನುಪಸ್ಥಿತಿಯಲ್ಲಿ 

ಬಾ 
ಓದಬೇಕವುಗಳ
ನಿನ್ನಿರುವಿಕೆಯಲ್ಲೇ 
ಮತ್ತೆ ಮೈ ಮರೆತು !!


***

ಮುಲಾಜಿಲ್ಲದೆ 
ಬಂದು ಬಿಡುವೆ 
ಕನಸೊಳಗೆ 

ಚೂರು ಸತ್ಕರಿಸು 
ಪರಿಚಿತಳಂತೆ 

ಕತ್ತಲ ದಾರಿಯಲಿ 
ಜೊನ್ನ ದೀಪವ ಹಿಡಿದು 
ನಿಲ್ಲೆಲೇ ಚಂದ್ರ ಕಾಂತೆ 
ದಾರಿ ತಪ್ಪಿಸದಂತೆ !!


***

ನಾ ನಡೆವುದ ಕಲೆತದ್ದೇ 
ನಿನ್ನ ಒಲವಲ್ಲಿ 
ನಿನ್ನಿಂದ, ನಿನಗಾಗಿ 

ಈಗ ಅದೇ ನಡಿಗೆ 
ನಿನ್ನಿಂದ ದೂರಾಗಿಸುತಿದೆ 
ದೂರಬೇಡ ನನ್ನ !!


***

ರಾತ್ರಿ ಕಣ್ಣುಗಳಿಗೆ 
ಕಾವಲಿರಿಸಲಾಗಿದೆ;
ಯಾರೂ ಅಪ್ಪಣೆ ಇಲ್ಲದೆ 
ಒಳ ನುಗ್ಗದಂತೆ 

ಒಳಗೆ ಕನಸುಗಳ ಅಟ್ಟಹಾಸ 
ಹೊರಗೆ ನಿದ್ದೆಗೆ ನವಮಾಸ !!


***

ನೀ ನೆಟ್ಟು 
ಬೆಳೆಸಿ ಹೋದ ಬಳ್ಳಿ 
ಇನ್ನೂ ಹೂ ಬಿಟ್ಟಿಲ್ಲ 
ನನ್ನ ಪ್ರಕಾರ

ಬಿಟ್ಟವುಗಳೆಲ್ಲ 
ಉದುರಿ 
ಬೇರಿಗಾಹಾರವಾದವಷ್ಟೇ

ನಿನ್ನಂತೆ ಚಿರ ಮುಗುಳು 
ಈವರೆಗೂ ಕಾಣದೆ
ನಾ ಮಂಡಿಪ ತರ್ಕವಿದು !!


***

ಹೃದಯದ ಮಗ್ಗಲಿನಲಿ 
ಒಂದು ಸಣ್ಣ ರೆಡಿಯೋ ಪೆಟ್ಟಿಗೆ 

ಅಲ್ಲಿ ಕನ್ನಡ ಕಾಮನಬಿಲ್ಲು 
ನಿತ್ಯ ಅಡಚಣೆರಹಿತ 

ಹಾಡುಗಳೋ ಬೇಜಾರು 
ನಿನ್ನ ನಿರೂಪಣೆಯದ್ದೇ ಖದರ್ರು !!


***

ಕತ್ತಲೂ ನಮ್ಮೊಲವಂತೆ;
ಏನೂ ಇಲ್ಲದಂತಿದ್ದು 
ಎಲ್ಲವನ್ನೂ ಇರಿಸಿಕೊಂಡಿದೆ ತನ್ನೊಳಗೆ

ಅಡಗಿದವು ಕಣ್ಣಿಗೆ ಬೀಳಲು
ಹೊತ್ತಿಸಬೇಕಷ್ಟೇ ಸಣ್ಣ ಕಿಚ್ಚು 
ಅದ ಉತ್ಪತ್ತಿಸುವ ಸಾಧನ ನಮ್ಮಲ್ಲೇ ಇದೆ !!


***

ನಮ್ಮಿಬ್ಬರ ಸಾಂಗತ್ಯದಲ್ಲಿ 
ಹರಿದ ಬೆವರಿನಲ್ಲಿ 
ನನ್ನದು, ನಿನ್ನದು ಎಂಬ ವಿಂಗಡನೆ ಇಲ್ಲ.

ಹೂ ಕಟ್ಟಿದ ಕೈಗಳಿಗೆ 
ಮೆತ್ತಿದ ಗಂಧದಷ್ಟೇ ಪ್ರಮಾಣದಲ್ಲಿ 
ಹೂವಿಗೂ ಕೈಯ್ಯ ಪರಿಚಯ ಬೆಳೆದಿರಬಹುದು 

ಒಮ್ಮತದ ಮೈಥುನದಲ್ಲಿ 
ತೀರ್ಮಾನಗಳು 
ಕಾಲಹರಣದ ಕಸುಬುಗಳಷ್ಟೇ !!


***

ಸಿಕ್ಕಷ್ಟೂ ಸಿಗಲಿ ನೋವುಗಳು 
ಉಂಡು 
ಸಂತೃಪ್ತರಾಗೋಣ ಇಂದಿಗೆ 

ನಾಳೆಗೆ 
ನಾ ಕಣಕ 
ನೀ ಹೂರಣ 
ಕಹಿಯ ನಂತರದ ಸಿಹಿ
ನಲಿಗೆಗೂ ಪ್ರೀತಿ !!


***

ಜೀವನ ಪಾಠದ ಮುನ್ನೋಟಕೆ 
ಯಾವುದೇ ಸಿಲಬಸ್ಸುಗಳಿಲ್ಲ 
ಬಯಸಿದ ಗುರಿ ಮುಟ್ಟಿಸಲು ಇಲ್ಲಿ 
ಸಮಯಕೆ ಬರುವ ಬಸ್ಸುಗಳಿಲ್ಲ !!


***

ಅಪರೂಪಕೆ ಅಜ್ಜ 
ಮಗನ ನೋಡಲು ಬರುವ 
ಮೊಮ್ಮಗ ಕೇಳುವನು 
"ಎಷ್ಟು ದಿನ ಇರ್ತೀ?"

ಸೊಸೆ ಚುಚ್ಚಿ ಗಂಡನನ್ನ
ದೂಡುವಳು ಕೇಳಲು
"ತ್ವಾಟ ನೋಡುವವರಿಲ್ಲ 
ಯಾವಾಗ ಹೋಗ್ತೀ?"

ಮೊಮ್ಮಗ ಅಳುತಾನೆ
ತಾತನ ಕೈ ಹಿಡಿದು
ಸೊಸೆ ತಡೆದು ನೀಡುವಳು
ಚಾಕ್ಲೇಟು, ಕೇಕು

ಮಗನತ್ತ ನೋಡಿದಜ್ಜ
ಮೆಲ್ಲ ಕೇಳಿಕೊಳ್ಳುತಾನೆ
"ಅವ್ಳು ಆಗಾಗ್ ಕೇಳ್ತಿರ್ತಾಳೆ
ತಿಂಗ್ಳಿಗೊಮ್ಮೆ ಬಾಪ್ಪ ಸಾಕು"


***

ನಮ್ಮ ಜಗಳ ಕೊನೆಗಾಣಲು ಬೇಕಿರುವುದು
ನಾಲ್ಕು ತೊಟ್ಟು ಕಣ್ಣೀರು 
ಹಿಡಿ ತುಂಬ ಮುನಿಸು
ಒಂದಿರುಳ ಮೌನ 
ಮರು ದಿನದ ಸಂತೈಸುವಿಕೆ 
ಒಂದು ಆಲಿಂಗನ 
ಸಿಹಿ ಚುಂಬನ 
ಒಂದೆರಡು ಚಂದ ಸುಳ್ಳು 
ಮತ್ತೊಂದು ಸಣ್ಣ ಜಗಳ !!


***

ಆಗಷ್ಟೇ ಕಣ್ದೆರೆದ
ಕೂಸು ಕಂಡದ್ದು 
ಅಮ್ಮಳ ನೋವು 
ಅಪ್ಪನ ಬೆವರು 
ಗ್ಲೂಕೋಸು ಖಾಲಿಯಾದರೂ 
ಕ್ಯಾರೇ ಅನ್ನದ ಆಸ್ಪತ್ರೆ 
ಬಿಲ್ಲಿನಡಿ ಅಡಗಿದ 
ಬಾಕಿ ಮೊತ್ತ
ನೊಣಗಳೇ ಮುತ್ತಿದ 
ನಾರ್ಮಲ್ ಬ್ರೆಡ್ಡು 
ಡಿಷ್ಚಾರ್ಜಿಗೆ ಸಜ್ಜಾಗಿ
ಕಾಯ್ದಿರಿಸಿದ್ದ ಆಟೊ ಸದ್ದು

ಬಡತನದ ಮೊದಲ ದರ್ಶನ
ಆಗಿಯೇ ಹೋಯ್ತು
ಕೊನೆಗೂ;
ಅಲ್ಲಲ್ಲ ಮೊದಲಿಗೇ !!


***

ಸತ್ಕಾರಕ್ಕೆ ನಾ ಅರ್ಹನಲ್ಲ;
ಹೀಗಿದ್ದೂ ನನ್ನ ಸತ್ಕರಿಸಿದವರು 
ಎಣ್ಣೆ ಶೀಗೆ ಬೆರೆಸಿ ನೆನೆಸಿದಂತೆ 
ಸತ್ತ ನನ್ನ ಹೊತ್ತು ಮೆರೆಸಿದಂತೆ


                    -- ರತ್ನಸುತ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...