ಕೈಯ್ಯ ಹಿಡಿದ ದೇವತೆ

ರಾತ್ರಿಯಿಡಿ ಕೆಮ್ಮುತ್ತಿದ್ದ
ಪಾಪುವಿನ ಎದೆಗೆ
ನೀವಿದ ತೈಲದ ಘಮಲು
ಆ ತಾಯಿಯ ಕೈಯ್ಯಿಗೆ
ಅಂಟಿಯೇ ಇತ್ತು
ಕೆಮ್ಮು ನಿವಾರಣೆ ಆಗುವನಕ

ಜಾರಿದ ಸಿಂಬಳವ ತಡೆದು
ಒರೆಸಿದ ಸೆರಗಿನ
ಅಂಚಿನ ಸುಕ್ಕನು
ಬಿಡಿಸುವ ಮುನ್ನ
ಮತ್ತೆ ಒದ್ದೆ ...
ತಾಯಿಯ ಚಿಂತೆ, ಮಗುವಿನದ್ದೇ

ಹಣೆಯ ಮುದ್ದಿಸುವ ಸರದಿಯಲಿ
ಕೈ ಬೆರಳ ಸೋಕಿಗೆ
ಬಿಸಿ ಸ್ಪರ್ಶವಿತ್ತ ಜ್ವರಕೆ
ತಾಯಿಯ
ಎದೆ ಬಿಸಿಯೇ
ಸರಿ ಮದ್ದು

ಹೊತ್ತ ಹರಕೆಗೆ
ಚಿನ್ನದ ಮೂಗುತ್ತಿಯನೂ ಬಿಡದೆ
ದಾನವನಿತ್ತಳು
ಒಂದೊತ್ತಲೇ
ತಿಂಗಳೆಲ್ಲ ಕಳೆದು

ರಾತ್ರಿಯ ಹಗಲಿಗೆ
ಪರಿಚಯಿಸಿದಳು
ಆರಿಸದೆ ಬುಡ್ಡಿ ದೀಪದ ಬೆಳಕ
ಬೆಳಕು ಹರಿದ ಪರಿವೇ ಇಲ್ಲದೆ
ಎಚ್ಚರವಿದ್ದಳು
ರಾತ್ರಿ ತನಕ

ಜೊತೆಗೇ ಇರುವ
ದೇವಸ್ಥಾನ
ಬಿಡದೆ ಕೈಯ್ಯ
ಹಿಡಿದ ದೇವತೆ
ತಾಯಿ ಇರಲು
ಕಂದನ ಜೊತೆಗೆ 
ನಿದ್ದೆಗೂ ಕೂಡ
ನಿಶ್ಚಿಂತೆ !!

          -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩