Friday 31 January 2014

ನೀನೆ ಬರಿ ನೀನೆ !!

ನಿನ್ನ ತೋಳಲಿ ಉಳಿದ ಜೀವಕೆ 
ಅದುವೆ ನೆನಪಿನ ಶಾಲೆ
ನಿನ್ನ ಆಸರೆ ಪಡೆದ ಭಾವಕೆ 
ಸಾಕ್ಷಿಯಾದವು ಹಾಳೆ 
ನಿನ್ನ ರಕ್ಷೆಯ ಭಿಕ್ಷೆಯಿಂದಲೇ 
ಬೆಚ್ಚಗುಳಿದವು ಕನಸು 
ನಿನ್ನ ಕಣ್ಣಿನ ಅಂತರಿಕ್ಷದಿ 
ತಾರೆ ನಕ್ಷೆಯ ಸೊಗಸು 

ನಿನ್ನ ಸಮ್ಮತಿ ಸಿಕ್ಕಿದಾಗಲೇ 
ಮುಗಿಲ ಹನಿಗೆ ಬಿಡುಗಡೆ
ನಿನ್ನ ರೂಪವ ಕಂಡ ಶಿಲ್ಪಿಗೆ  
ಕೆತ್ತಲೊಂದು ಕಲ್ಪನೆ
ನಿನ್ನ ಮೌನವ ಮೀರುವಾಸೆಗೆ 
ಮರಳುಗಾಡು ನಿರ್ಲಿಪ್ತ 
ನಿನ್ನ ಸೋಕಿದ ಪುಷ್ಪ ಮಾಲಿಕೆ
ಸಾವಿನಲ್ಲೂ ಸಂತೃಪ್ತ 

ನಿನ್ನ ಮಾತಲಿ ಜೇನ ಮಾಧುರಿ  
ಸಾಲು ಸಾಲು ಸಾಹಿತ್ಯ 
ನಿನ್ನ ಹೆಜ್ಜೆಯ ಗೆಜ್ಜೆ ನಾದವು 
ಒಂದು ಲಲಿತ ರಸ ನಾಟ್ಯ 
ನಿನ್ನ ಉಸಿರಿಗೆ ಕೊಳಲು ಹಸಿದರೆ 
ಅತಿಶಯೋಕ್ತಿ ನಡೆಯಲ್ಲ
ನಿನ್ನ ಕೆನ್ನೆಯ ಗುಳಿಯ ಉಂಗುರ 
ಸೊನ್ನೆಯೆಂದು ಮರುಗಿಲ್ಲ 

ನಿನ್ನ ಉಬ್ಬನು ಅಳಿಯೆ ಹೋದರೆ 
ತಗ್ಗು ಅನಿಸಿತು ಅಂಬರ 
ನಿನ್ನ ಮೋರೆಯ ಕಂಡು ದಣಿಯಲು 
ಇಳಿದು ಬಂದನು ಚಂದಿರ 
ನಿನ್ನ ಕಾಡಿಗೆ ಅದರ ಪಾಡಿಗೆ 
ಉಳಿದರಷ್ಟೆ ನಾ ಉಳಿವೆನು 
ನಿನ್ನ ಕರಗಳ ಮೆಲ್ಲ ಚರಗಳ
ತಾಳದಲ್ಲಿ ನಾ ಕುಣಿವೆನು 

ನಿನ್ನ ಕೈ ಪಿಡಿ, ಬಾಳ ಕೈಪಿಡಿ  
ದಾರಿ ಸೂಚಕ ದೂರಕೆ 
ನಿನ್ನ ಹಸ್ತವು ಚಂದ ಕನ್ನಡಿ 
ನನ್ನ ನಾಳೆಯ ರೇಖೆಗೆ 
ನಿನ್ನ ಸಂಭ್ರಮ ಹೃದಯಂಗಮ  
ನಿತ್ಯ ನಾಕ ಪ್ರತ್ಯಕ್ಷವು 
ನಿನ್ನ ಆಧರ ಹೊನ್ನ ಸಾಗರ
ಮುಳುಗಿ ಆತ್ಮಕೆ ಮೋಕ್ಷವು 


                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...