ಇತಿಹಾಸದ ಅಬಲೆಯರ ಸುತ್ತ, ಒಂದು ಸುತ್ತು

ಬೆಂಕಿಯಿಂದುದ್ಭವಿಸಿದ 
ಆ ಹೆಣ್ಣಿನ ಸೆರಗೂ 
ತಣ್ಣಗಿತ್ತೇ?
 
ಕೀಚಕ ಅಟ್ಟಹಾಸ ಮೆರೆದಾಗ
ನಾಲ್ಕು ತೊಟ್ಟು ಕಂಬನಿ
ಜಾರಿಸಲೇ ಬೇಕಾಯ್ತೇ 
ಗೊಲ್ಲನ ನಿದ್ದೆಯಿಂದೆಚ್ಚರಿಸಲು?
 
ಸುಧರ್ಷನ ಪ್ರಯೋಗ
ಪ್ರಚೋದನೆಗೆ ಸಾಲದಾಗಿತ್ತೇ 
ಆ ಅಮಾನುಷ ಕೃತ್ಯ?
 
ದೃಷ್ಟಿಯಿದ್ದೂ 
ಲೋಕದ ಪಾಲಿಗೆ ಅಂಧವಾಗಿಸಿ 
ಆ ತಾಯಿಯ 
ಪುತ್ರ ಶೋಕಕ್ಕೆ ನೂಕಿದ 
ಪುಟಗಳಿಗೆ 
ಕಿಂಚಿಷ್ಟೂ ಇರಲಿಲ್ಲವೇ 
ಕರುಣೆ, ಕಾರ್ಪಣ್ಯ?
 
ಲಂಕೆಯ ಶಾಪವೋ ಎಂಬಂತೆ 
ದೇವತಾ ರೂಪಿಗೇ 
ಅಗ್ನಿ ಪರೀಕ್ಷೆ!!
 
"ಹೆಣ್ಣು ಬೆಂಕಿಯವತಾರ 
ಪರ ಪುರುಷನ ಪಾಲಿಗೆ"
ಇದ ನಿರೂಪಿಸಿಕೊಳ್ಳಲು 
ದೇವ ಪುರುಷನಿಗೂ ಬೇಕಾಯ್ತೆ ಪ್ರಯೋಗ?
 
ಅಪವಿತ್ರ ಕಾಯಕ್ಕೆ 
ಘೋರ ಶಿಕ್ಷೆ?!!
ಆ ದೇವನಲ್ಲಿತ್ತೇ ಪಾವಿತ್ರ್ಯತೆ?
 
ಹೆಣ್ಣಿನ ಕಾಮನೆಯ ಕೆಣಕಿದ 
ದೇವ ಸಹೋದರನ
ಅಸ್ತ್ರ 
ಅಸುರ ಹೆಣ್ಣಿನ
ನಾಸಿಕವ ಸೀಳಿತಲ್ಲ!!

ಆ ಕಣ್ಣೀರ ಬೆಲೆಗೆ ದಕ್ಕಿದ್ದೇನು?
ದಶಾಸುರನ ತಲೆ ದಂಡ?!!
ಅಪ್ಪಟ ಶಿವ ಭಕ್ತನಿಗೆ 
ನೀಚ ಪಟ್ಟ?!!
 
ಏನೂ ಪಾಪವನ್ನೆಸಗದವಳಿಗೆ 
ಶಾಪವೆಂಬಂತೆ 
ಹದಿನಾಲ್ಕು ವರ್ಷ 
ವಿರಹದ ನೋವು?

ಅಬಲೆಯ ಅಸಹಾಯಕತೆಯೇ 
ಇತಿಹಾಸದ ಮೂಲ 
ಅಂದಿನಿಂದಿಂದಿಗೂ 
ಮುಂದೆ, ಎಂದೆಂದಿಗೂ 

ಗಂಡು ತನ್ನಿಷ್ಟಕ್ಕೆ 
ಉಳಿ-ಸುತ್ತಿಗೆ 
ಬಡಿದುಕೊಳುವ ಬಡಗಿ 
ಶಿಲೆಗಳು ಉಳಿದು-
-ಬಿಡುತ್ತವೆ ಯುಗಗಳಾಚೆ 
ಇದ್ದಲ್ಲೇ ಮರುಗಿ.. 

                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩