ನಾನು, ನೀನು, ನಮ್ಮಿಬ್ಬರ ಏಕಾಂತ !!

ತಣ್ಣಗೆ ಕೊರೆವ ಕೊಳ
ವಿರಹಿ ಮಂಡೂಕಕೆ
ಉಪಶಮನದ ಮದ್ದು

ವಾ"ನರ"ರಿಗೂ ಬೇಕನಿಸದ
ಇದ್ದಿಲೊಡಲ ಜೋಳ
ಸೀದು ಕಪ್ಪು

ಜಲ್ಲೆಯ ಸ್ಖಲನಕೆ 
ಸಿಪ್ಪೆಯ ಹೊರ ಚೆಲ್ಲಿದ 
ಕಬ್ಬಿನ್ಹಾಲ ಬಂಡಿ 

ಬೋಳು ಮರದ ಕೆಳಗೆ 
ರೆಂಬೆ ನೆರಳ ಹೊದ್ದು 
ಸತ್ತು ಬಿದ್ದ ಎಲೆಗಳು 

ತಂಗಾಳಿಗೆ ಮೈಯ್ಯೊಡ್ಡಿ 
ಇನಿಯರ ದಾರಿ ಕಾದು 
ಶಿಲೆಯಾದ ಅಹಲ್ಯೆಯರು 

ಚಂದಿರನ ಏಕಾಂತ 
ಮುಸ್ಸಂಜೆಯ ವ್ಯಂಗ್ಯ 
ಮುನಿದ ಬಾನು 

ಬಾಡಿದ ಮೊಳ ಹೂ 
ಬೇಡವಾಗಿಸಿದ ಕೈ 
ಅತ್ತ ಕುರುಳು 

ಮರುಗಿದ ಗಡಿಯಾರ 
ಗುಡುಗಿದ ಮನಸು 
ಕೆನ್ನೆಗೆ ಚಿಟ-ಪಟ 

ಕದಲದ ಅಧರ 
ಹೊರಡದ ಮಾತು 
ಮೌನ ನೈವೇದ್ಯ 

ಹದಿನಾರರ ತುಂಟ 
ಹದಿನೈದರ ತುಂಟಿ 
ಪದ ನೂರು, ಹದವಲ್ಲ

ಮತ್ತೀ ಗೀಚುವಿಕೆ 
ಮತ್ತೊಂದು ಮತ್ತೇರಿಸದ 
ಗಾಳಿ ಮುತ್ತು 

ನಾನು,
ನೀನು,  
ನಮ್ಮಿಬ್ಬರ ಏಕಾಂತ 

ನೀನೋ?
ನಾನೋ?
ಸಾವಿಗೂ ಧಾವಂತ

               -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩