ನಾ ಯಾವ ಸೀಮೆ ಬಡವ ಸ್ವಾಮಿ !!

ನನ್ನ ಜೀವನದಲ್ಲಿ
ಪುರುಸೊತ್ತಿಗೂ ಪುರುಸೊತ್ತಿದೆ 
ಲಂಗು ಲಗಾಮಿಲ್ಲದ 
ಹುಚ್ಚು ಕುದುರೆ ಓಟ 
ಪರಿಪಾಟಗಳೆಲ್ಲ ಮನಸಿಚ್ಛೆಗೆ-
ತೋಚಿದ ಹಾಗೆ 
ನಾ ಸುಖಪುರುಷ 
ನನ್ನ ಅಭಿಮತದಲ್ಲಿ 

ಬೇಡುವ ಮುನ್ನವೇ 
ಬೀಳುವ ಕನಸು 
ಹಸಿವಿಗೂ ಮೊದಲೇ 
ತುಂಬುವ ಹೊಟ್ಟೆ 
ಬೆತ್ತ ಹಿಡಿದ ಗುರುಗಳು 
ಹಿಂದೆ 
ತಪ್ಪಿಸಿಕೊಳ್ಳುವ 
ದಾರಿ ಮುಂದೆ 

ಆಯ್ಕೆಗಳೋ 
ಬೆರಳಂಚಿನಲಿ ಕುಣಿದಾವೆ 
ಬೇಕುಗಳೋ 
ಮನೆ ಬಾಗಿಲಲಿ ನಿಂತಾವೆ 
ನಾ ಎಡವಿಕೊಂಡರೆ 
ಕಲ್ಲಿಗೇ ಶಿಕ್ಷೆ 
ನನ್ನ ಮನ ಕದಿಯಲು 
ಸಾಲು ಅಪೇಕ್ಷೆ 

ಅತ್ತಾಗ ಕಣ್ಣೀರು 
ಭೂಮಿನು ತಾಕಿಲ್ಲ 
ನಗುವಿಗೆ ನಾಲ್ಕಾಣಿ 
ವೆಚ್ಚವೂ ಆಗಿಲ್ಲ 
ನನ್ನ ನಡೆಗೆ 
ನನ್ನ ನೆರಳಿನ ಸಹಮತ
ಸಂಸ್ಕೃತವ ಕಲಿಸಿದವ-
-ರಿರದೆಯೇ ಪರಿಣಿತ 

ಕೈ ಮುಗಿದ ದೇವರ
ಆಸರೆ ತಲೆ ಮೇಲೆ 
ಮೈ ಮುರಿದ ಏಟಿಗೆ 
ನಿದ್ದೆಯೂ ಕಣ್ಣಲ್ಲಿ 
ನೋಟು ಬಿಟ್ಟಿರದು 
ನಾ ಬಿಟ್ಟು ಕೊಟ್ಟರೂ 
ಪ್ರಾಮಾಣಿಕತೆಗೆ 
ಸಾಲವೂ ಗಿಟ್ಟದು 

ಗುಂಡು ತೋಪಿನ ಲಲ್ಲೆ 
ದಿಂಡು ಸೂಜಿ ಮಲ್ಲೆ 
ಸುತ್ತಿಕೊಂಡ ಕೈಗೆ 
ಅಂಟಿದ ಘಮಲು 
ಗುಂಡು ಏರಿದ ಮೇಲೆ 
ಭೂಮಿ ತಿರುಗುವ ವೇಳೆ 
ಕಂಪಿಸಿತು ಪಾಪ
ಅದಕೂ ಅಮಲು 

ನಾ ಇದ್ದ ಹಾಗೆ 
ಇರದೆ ಕೊರಗಿದ ಮಂದಿ 
ತತ್ವಗಳ ಹಂಗಿನಲಿ 
ಬದುಕಿಹರು ಪಾಪ 
ನಾನಂತೂ ಅಂಥವರು 
ಎದುರು ಸಿಕ್ಕಾಗ 
ಮಾತಿನಲೆ ಸೂಚಿಸುವೆ 
ಕೊಂಕು ಸಂತಾಪ ..... 

               -- ರತ್ನಸುತ 

Comments

  1. 'ಗುಂಡು ತೋಪಿನ ಲಲ್ಲೆ ' ಅಂತ ಬರೆದು ಭಾರತ ಮುನಿಗಳೇ ನನ್ನ ಹಳ್ಳಿಯ ಬಾಲ್ಯ ಗೆಪ್ತಿ ಮಾಡ್ಬಿಟ್ರೀ. ಎಲ್ಲವ್ರೋ ಇಂದಿರಾ, ಮೀನಾ, ಪದ್ದೂ, ಲಲ್ತಾ, ಸಕ್ಕೂ, ಪಾರೂ ಮತ್ತ್ ಇನ್ನಿತರೇ!

    ಒಳ್ಳೆಯ ಶೀರ್ಷಿಕೆ 'ನಾ ಯಾವ ಸೀಮೆ ಬಡವ ಸ್ವಾಮಿ !! '

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩