ಹುಚ್ಚು ಕುದುರೆ ಮನಸು

ಸೇಡಿನಲ್ಲಿ ಸುಖಿಸುವ ಮನ 
ಸುಡುಗಾಡನು ಕಡೆಗಣಿಸಿ 
ಗೋರಿಗಳ ಗದ್ದಿಗೆ ಮೇಲೆ 
ಸತ್ತವರ ಎದೆಯಿಂದ
ಚಿಗುರಿ ಬೆಳೆದ ತುಳಸಿ ತುದಿಯ 
ಚಿವುಟುವಾಗಿನೋವ ಕಂಡು 
ಕೇಕೆ ಹಾಕಿ ನಗುವ ಮುನ್ನ 
ತಾ ಸತ್ತ ಸತ್ಯ ಮರೆತಿತ್ತು 
 
ಕಂಡದ್ದೆಲ್ಲವ ತಾನು 
ತನದಾಗಿಸಿಕೊಳ್ಳುವ ಹಠ 
ಬಿಡಲೊಲ್ಲದ ಕೂಸು ಮನ 
ಹಸಿವಿನ ಸಾಗರದಲ್ಲಿ 
ಈಜಲಾರದೆ ಸೋತಾಗ 
ಅಲೆಗಳೇ ದಡ ಸೇರಿಸಿ-
-ದಂಶವ ಮೂಲೆಗಿರಿಸಿ 
ಸಾಗರವನೇ ಮಥಿಸಿತ್ತು 

ದಿಕ್ಕು ತೋಚದ ಬಯಲ 
ಗುರುತು ನೀಡದ ದಾರಿಯ 
ಅಂಗಲಾಚಿಕೊಂಡ ನೆನಪ 
ಸಲೀಸಾಗಿ ಅಳಿಸಿ ಹಾಕಿ 
ಬಯಲ ಸುಟ್ಟು, ಬೇಲಿ ನೆಟ್ಟು
ದಕ್ಕಿದಕ್ಕೂ ಮೂರು ಪಟ್ಟು 
ಆಸೆ ಪಟ್ಟ ಹುಚ್ಚುತನವ 
ಸಮರ್ಥಿಸಿಕೊಂಡಿತ್ತು 

ಬೆಂಬಲದ ಬುಡವ ಬಿಟ್ಟು 
ಹಂಬಲದ ಗರಿಗಳೆಡೆಗೆ 
ನಾಳೆಗಳ ಬಿಂಬಿಸುತ್ತ  
ಹಾರಹೊರಟ ಹುಂಬ ಮನ 
ಕುಂಬಾರನ ಒಲೆಯಲ್ಲಿ 
ಬೇಯದ ಮಣ್ಣಿನ ಮುದ್ದೆಯ 
ನಿರಾಕರಣೆಯ ನಡುವೆಯೂ 
ಗಡಿಗೆಯೆಂದು ಕರೆದಿತ್ತು 

ಮಡಿವಂತಿಕೆಯ ಮರೆತು 
ತನ್ನ ನೇಮದಲ್ಲಿ ತಾನು 
ನಿರ್ನಾಮದ ಹಾದಿಯಲ್ಲಿ 
ಬೆಳೆಸಿದ ಪಯಣದ ಕುರಿತು 
ಉಕ್ಕು ನುಡಿ, ಸೊಕ್ಕು ನಡೆಯ 
ಪ್ರದರ್ಶಿಸುವ ಯತ್ನದಲ್ಲಿ 
ತನ್ನರಿವಿಗೆ ಬಾರದಂತೆ 
ಹಲವು ಬಾರಿ ತೊಡರಿತ್ತು 

ತಿದ್ದ ಹೊರಟ ಕೈಯ್ಯ ಕಡಿದು 
ಗೆದ್ದೆನೆಂಬ ಭ್ರಮೆಯ ತಾಳಿ 
ಅಲ್ಲದ ಮುಖವನ್ನು ಮರೆಸೆ 
ಮುಖವಾಡದ ಮೊರೆ ಹೋಗಿ 
ಇದ್ದ ಅಸಲಿತನವ ಮರೆತು
ಹೆಸರ ಮಸಿಯ ಮಡಿಲಲಿಟ್ಟು 
ಚಂದ ಬದುಕ ತಿರುಚಿ ತಾನು 
ಮರುಕ ಪಡುತ ಬಿಕ್ಕಿತ್ತು  

                     -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩