ಹೂ, ಬಿಲ್ವಪತ್ರೆ !!

ಕಣ್ಣಿನಲಿ ಧೂಳಾಗಿ 
ನಾ ಹಾರಿ ಬಂದಾಗ 
ಬಡಿ ಬಡಿದ ರೆಪ್ಪೆ 
ಸಪ್ಪಳ ನನಗೆ ಕೇಳಲಿ 
ಮರುಭೂಮಿ ಅಲೆಮಾರಿ 
ಬಾಯಾರಿ ನಿಂತಾಗ 
ನಯನಾಮೃತದ ಕುಂಬ 
ಬೊಗಸೆಯನು ತುಂಬಲಿ 
 
ಗುಳಿ ಕೆನ್ನೆಯೋಳಗಿಂದ 
ನುಸುಳಿ ಬರುವ ಗಾಳಿ 
ಬಡ ಕಿವಿಗಳಿಗೆ ಚೂರು 
ಚೈತನ್ಯವಾಗಲಿ 
ನೊಣವಾಗಿ ನಾ ಹಾರಿ 
ಗುಲ್ಕನ್ನಿನ ಅಧರ-
ಪಾತ್ರೆಯಲಿ ಸಿಲುಕಲು 
ಸಾವು ಸಂಭವಿಸಲಿ 
 
ಕೊಂಡಿಯಲಿ ಕುತ್ತಿಗೆಯ 
ನಂಬಿರುವ ಮಣಿ ಮಾಲೆ 
ನನ್ನದೊಂದು ಮುತ್ತ
ಪೋಣಿಸಿಕೊಳ್ಳಲಿ
ತುಂಡಾಗುವ ವೇಳೆ 
ಎಲ್ಲ ಚೆಲ್ಲಾಪಿಲ್ಲಿ 
ನನ್ನ ಮುತ್ತಿಗೆ ಆ 
ಎದೆಗೂಡು ಒದಗಲಿ 

ಒಡ್ಯಾಣವಾಗಿ ನಾ 
ನಡುವನ್ನು ಬಳಸಿರಲು 
ನಾಭಿಯ ನಾಚಿಕೆ 
ನನಗಷ್ಟೇ ಕಾಣಲಿ 
ಮೃದುವಾದ ಕೈ ಬೆರಳು 
ಚೂರು ಸಡಿಲಿಸಿಕೊಳಲು 
ಗೋರಂಟಿಯ ಘಮಲು 
ನಾಸಿಕವ ಮುತ್ತಲಿ 

ಬೈತಲೆಯ ಬೊಟ್ಟಿಗೂ 
ನೀಳ ಜಡೆ ಕುಚ್ಚಿಗೂ 
ನನ್ನ ಪರಿಚಯದಲ್ಲಿ 
ಪ್ರಾಶಸ್ತ್ಯ ದೊರಕಲಿ 
ನೀ ಗೀಚಿದ ಕಾಲ-
ಬೆರಳ ತುದಿಯ ರೇಖೆ 
ನನ್ನ ಗುಣಗಾನದ 
ಹಾಡೊಂದ ಹೊಸೆಯಲಿ 

ಕಾಡಿಗೆಯ ಕಾಡಿಸುತ 
ಕರಗಿಸುವ ಕಿಡಿಗೆಡಿ-
-ತನವೊಂದು ತಾನಾಗಿ 
ನನಗೊಲಿದು ಬರಲಿ 
ನಿನ್ನೊಡನೆ ಈ ನನ್ನ 
ಜೀವನ ಚಿರಕಾಲ 
ಹೂವೊಡನೆ ಬಿಲ್ವಪತ್ರೆಯ 
ಹಾಗೆ ಕೂಡಲಿ 

             -- ರತ್ನಸುತ

Comments

  1. ಕವನದ ಹೂರಣ ಮತ್ತು ಆಂತರ್ಯದ ಮಿಡಿತ ಈ ಮೂಲಕ ಸಂಬಂಧಪಟ್ಟವರಿಗೆ ತಲುಪಿಸುತ್ತೀವಿರಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩