ನನ್ನ ಮರೆತ ನನ್ನೊಳಗೆ !!

ಅದೇಕೋ ಈಗೀಗ 
ಸುಮಾರು ದಿನಗಳಿಂದ 
ನಿದ್ದೆಯೇ ಏರುತ್ತಿಲ್ಲ 
ಕಣ್ಣುಗಳಿಗೆ 
ರೆಪ್ಪೆ ಅಂಚಲಿ ಉಳಿದ 
ಕಂಬನಿಯ ಹಾಗೆ 
ಮುಚ್ಚುವುದೇ ತಡ 
ಎಲ್ಲಿ ಜಾರಿ ಬಿಡುವುದೋ!!
 
ಹಗಲೆಲ್ಲ ತೂಕಡಿಕೆ 
ಇರುಳಲ್ಲಿ ಕನವರಿಕೆ 
ಧ್ಯಾನಕೆ ಕಾರಣಗಳಿಲ್ಲ 
ಮೌನಕೆ ಮುಹೂರ್ತವಿಲ್ಲ 
ಇದ್ದಲ್ಲೇ ಉಳಿದ ನೆರಳು, 
ಅಂಟಿಕೊಂಡ ಒಡಲು 
ಏನೂ ತೋಚುತ್ತಿಲ್ಲ 
ಸೂಕ್ಷ್ಮದಿ ಗಮನಿಸಿದರೂ 
 
ರಿವಾಜುಗಳಿಲ್ಲದ
ಗೋಜಲು ಮುಖಗಳು 
ನನ್ನಿರುವಿಕೆಯನ್ನೇ ಪ್ರಶ್ನಿಸುವಾಗ 
ಇಲ್ಲದ ಉತ್ತರ 
ಹೆಜ್ಜೆಗೊಂದು ಹೆಸರಿಡುತ್ತೇನೆ 
ದಾರಿಗಲ್ಲ 
ಉಸಿರಾಟವ ಬೆಳೆಸಿದ್ದೇನೆ 
ಬದುಕಿಗಲ್ಲ 
 
ಬೊಬ್ಬೆ ಮೇಲೆ 
ಮೇಣದ ಕಿಡಿ ಸುರಿದು ನಗುವೆ 
ಹಿಂದೆಯೇ ಅಳುವೆ 
ಅಳುತಲೇ ಇದ್ದೇನೆ 
ದೂರಾಗಿ ಹುಡುಕಾಡುತ್ತಿದ್ದೇನೆ 
ನನ್ನವರ 
ಇನ್ನೂ ಅರಸುತ್ತಿದ್ದೇನೆ 
ಕಾಣದ ದೇವರ 

ವ್ಯಥೆ ಸಾಗರವ ಮಥಿಸಲು 
ಒಬ್ಬಂಟಿಯಾಗಿದ್ದೇನೆ 
ಈ ಬದಿಗೆ ನಾನು 
ಆ ಬದಿಗೂ ಹಂಬಲಿಸಿದ್ದೇನೆ ನನ್ನ 
ಬೇಕನಿಸುತಿದ್ದಾನೆ 
"ನಾನು" ಎಂಬುವ ನನಗೆ 
ನನ್ನ ಗುರುತಿಗೆ 
ಆತ್ಮ ತೃಪ್ತಿಗೆ 
 
ತತ್ವಗಳ ಇರಿಗೆ
"ನನ್ನ"ನೇ ಕೊಂದ ನಾನು 
ಈಗ ನನ್ನ ಮರಳಿ 
ಬೇಡಿರುವ ಮೂಢ 
ನನ್ನ ನಾ ಬೇಟಿಯಾದ-
ದಿನದಂದೇ 
ನಿದ್ದೆ ಬೆಕನಿಸಿದ್ದು 
ಮನಸಿಗೂ ಕೂಡ ....

              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩