ನನ್ನ ನಿನ್ನ ಕವನ

ನಿನ್ನ ನಗುವಿನೊಳಗೊಂದು ಸಾಗರ 
ಈಜಿ ಬರುವುದೇ ಸಾಹಸವು 
ನಿನ್ನ ಅಧರದಲಿ ಜೇನ ಬುತ್ತಿಯಿದೆ 
ನನ್ನ ಅಧರಕೀಗ ಹಸಿವು 

ನಿನ್ನ ಕರಗಳಲಿ ಬಂದಿ ಮೆಹೆಂದಿಯ 
ಒಂದು ರೇಖೆ ನಾನಾಗಿರುವೆ 
ಕಣ್ಣು ಜಾರಿಸುವ ಹನಿಯ ಗುರುತುಗಳ 
ಚಾಚು ತಪ್ಪದೆ ಪಾಲಿಸುವೆ 

ನಿನ್ನ ಮುಂಗುರಳ ರಿಂಗಣದ ಸಾಲು 
ಮತ್ತು ಬಡಿಸಿಕೊಳ್ಳುವ ಕೆನ್ನೆ
ಮೆಲ್ಲ ಪಿಸು ಮಾತನೊಂದ ನುಡಿವಾಗ 
ಕಿವಿಯ ಮರೆಗೆ ಸಿಕ್ಕಿಸಲೇನೆ?

ಕತ್ತಲ ಕೆಣಕಿ ಉರಿದ ಹಣತೆಯಲಿ 
ಸೊಕ್ಕು ತುಂಬಿದ ಮೌನವಿದೆ 
ಗುಟ್ಟುಗಳ ಹೊತ್ತು ದಿಕ್ಕಿನಲಿ ನಿಂತು 
ಮಿಥುನ ದೀಕ್ಷೆಗೆ ಬೇಡುವುದೇ?

ಈ ಭಯ ಸಹಜ, ಮೀರಿದ ಬಳಿಕ 
ನೀನಿದ ಆಟವೆಂದರಿವೆ 
ಅಂಗವ ದಾಟಿ ಸಂಗವ ಕಟ್ಟಿ 
ಅಂತರಂಗವ ಸಂದಿಸುವೆ 

ಮಾತಲಿ ಮರುಗಿ, ಕೂತಲೇ ಕೊರಗಿ- 
ಉಳಿದಲ್ಲಿ ಸಾಧ್ಯವೇ ಮಿಲನ 
ನನ್ನ ಬೆನ್ನ ಹಿಂದೆಯೇ ನಿನ್ನ 
ಸಾಲೊಂದು ಸಿಕ್ಕರದುವೇ ಕವನ!!

                                 -- ರತ್ನಸುತ   

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩