ಬಣ್ಣ ಮಾಸಿದ ಚಿಟ್ಟೆ !!

ನಾ ಹೆಣೆದ ಒಲುಮೆಯ ನೂಲು
ನನ್ನ ಸುತ್ತ ಕಟ್ಟಿಕೊಂಡ ಗೂಡು
ಬದುಕ ಕತ್ತಲಾಗಿಸಿತು ಬಂಧನದಲ್ಲಿ

ಬೆಳಕಿನ ಚಡಪಡಿಕೆಯ ಬೆನ್ನಲ್ಲಿ
ಪುಟಿದೆದ್ದ ರೆಕ್ಕೆ ಎಳೆಸು 
ಗೂಡಿನ ದ್ವಾರ ಮನಸಿಗಿಂತಲೂ ಉತ್ಕಟ
 
ಬಲಿತ ರೆಕ್ಕೆಯ ತೆಕ್ಕೆಯಲ್ಲಿ 
ಬೆಚ್ಚಗೆ ಮಲಗಿದ್ದು ಸಾಕಾಗಿ  
ಗೋಡೆಯ ಮೆಲ್ಲ ಮೆಲ್ಲುವ ಸಾಹಸಿ ಆಗಬೇಕನಿಸಿತ್ತು 
 
ಒಳಗೆ ಹೆಸರಿನ ಹಂಗಿರಲಿಲ್ಲ  
ಕನ್ನಡಿಯೂ ಬೇಕಿರಲಿಲ್ಲ 
ಹೊರಗೆ ಸಾವಿರ ಪ್ರಶ್ನೆಗಳ ಕಂತೆ, ಉತ್ತರಿಸುವ ಚಿಂತೆ 
 
ಮೆದು ಗೋಡೆ ಶಿಥಿಲಗೊಂಡು 
ಬೆಳಕು ಚೂರೇ ಚೂರು ಹರಿದೊಡನೆ 
ನಾ ದಿಗಂಬರನಾಗಿದ್ದ ಸತ್ಯ ನನ್ನರಿವಿಗೆ ಬಂದಿದ್ದು 
 
ಅಲ್ಲಿ ತನಕ ವಿಮುಕ್ತಿ ಬೇಡಿದ ನನ್ನಲಿ 
"ಹಾರಬಲ್ಲೆನೆ?" ಎಂಬ ಪ್ರಶ್ನೆ 
ಅಷ್ಟರೊಳಗೆ ಹಾರಲೇ ಬೇಕಾದ ಅನಿವಾರ್ಯತೆ 
 
ರೆಕ್ಕೆ ಮೈ ಮುರಿದು ಒದರಿಕೊಂಡೇಟಿಗೆ
ಭೂಮಿ ಮಣ್ಣ ಮುದ್ದೆ 
ನಾ ಮೇಲೆ ಹಾರುತಿದ್ದೆ 
 
ಹೂವು ಕಂಡರೆ ಎರಗುವ ಮನಸು 
ಮತ್ತೆ ಒಲವಾಗಿ ಬಿಡಬಹುದೇ?
ಹಸಿವ ನೀಗಿಸದ ನೂರು ಗೊಂದಲಗಳು ಹೊಟ್ಟೆಯಲ್ಲಿ!!
 
ಅಂತೂ ನಾ ಚಿಟ್ಟೆ,
ಯಾವ ಹೂವಿಗೂ ಪರಿಚಯಿಸಿಕೊಳ್ಳಲಿಚ್ಚಿಸದ 
ಹೆಜ್ಜೆ ಗುರುತುಗಳ ಬಿಡಲೊಪ್ಪದ ಬಣ್ಣ ಮಾಸಿದ ಚಿಟ್ಟೆ .... 
 
                                                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩