ಸಮರದೊಳೆಮ್ಮ ಬದುಕು !!

ಚಿರಕಾಲ ತುದಿಗಾಲಲಿ
ಜಾರಲು ನಿಂತ
ಇಬ್ಬನಿಗೆ ತುದಿ ತನಕ 
ಜಾಗ ಕೊಟ್ಟೆಲೆ ಬದುಕು 
ಇಬ್ಬನಿಯ ಸೇರಲು 
ಮುಪ್ಪಾಗ ಬೇಕು 
ಮಣ್ಣ ಮಡಿಲಲಿ ತನ್ನ 
ಹುಡುಕಾಡ ಬೇಕು 

ಕೊರವಂಜಿ ಹಿಡಿಗೋಲು 
ದವಸದ ಬುಟ್ಟಿ 
ಕಣಿಯ ಇಂಪು ಕಿವಿ- 
ಮನಸ ತಣಿಸಿದರೇನು 
ಇದ್ದಂತೆ ನುಡಿವಾಕೆ 
ಇರದುದ್ದ ನುಡಿದರೂ 
ಮುಂಬರುವ ದಿನಗಳಿಗೆ 
ತಲೆ ಬಾಗಬೇಕು 
 
ಹಚ್ಚಿದ ಹರಿಶಿನ 
ಮೈಯ್ಯ ಹಿಡಿಯದೆ ಸೋತು 
ಇಟ್ಟ ಕುಂಕುಮ ಧೂಳು 
ಹಣೆಯ ಮೇಲ್ಗಡೆ ಜೋತು 
ಮುತ್ತೈದೆ ಅನಿಸಿ-
-ಕೊಂಡಿದ್ದರೇನು ಆಕೆ 
ಎರಚಿದ ನೀರಿಗವು 
ಕರಗಲೇ ಬೇಕು 

ಪತಿಯ ತತ್ವಗಳಲ್ಲಿ 
ತನ್ನ ಮುಕ್ತಿಯ ಕಂಡು 
ಕಳೆದ ಶಕ್ತಿಗಳಲ್ಲಿ 
ಹೊಸತು ಜನ್ಮವನಿತ್ತ 
ಪತಿತೆ ಅನಿಸದೆ ಕಳೆವೆ 
ಶೀಲದಲಿ ತಾನುಳಿದು 
ಮಡಿಲು ಕಂದನ ನಗೆಯ 
ಸಾಕ್ಷಿಯಾಗಲೇ ಬೇಕು 

ತವರು ತಂತಿಯ ಮೀಟಿ 
ಹರಿದ ಶೃತಿಯಲಿ ತಾನು 
ಹೊಸೆದ ಜೀವನ ಗಾನ 
ತಾಳ ತಪ್ಪಿದರೇನು 
ಮುಂದುವರಿಸುತ ಮುಂದೊಂದು 
ದಿನ ಶುಭ್ರತೆಯ 
ಕಾಯ್ದಿರಿಸಿ ಹಾಡುಲು 
ಪಳಗಿ ಗೆಲ್ಲಲೇ ಬೇಕು 

ಬಾಕು ಹಿಡಿದ ಆತ 
ತೀಕ್ಷ್ಣದೆತ್ತರ ಆಕೆ 
ಕೂಡಬೇಕು ಗೆಲ್ಲೆ 
ನೂರು ಜವರ 
ಜೊತೆಗೂಡಿ ಸೆಣಸಿದರೆ 
ಸುಲಭವಾಗಲು ಬಹುದು 
ಎದುರಾದರೇನಂತೆ 
ಸೂಕ್ಷ್ಮ ಸಮರ 

              -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩