ಜೊನ್ನ ಜೇನ ಹಾಡು

ಗರಿ ಮರೆಯ ಗೌರಮ್ಮ
ಸರಿದು ಬಾ ಚೂರಿಲ್ಲಿ
ಹರಿದು ಬಿಡಲಿ ಹಿಂದೆ
ಉಳಿದ ಬೆಳಕು
ಜೇನು ಬೆರೆಸಿದ ಹಾಲಿ-
-ನಲಿ ಬಿದ್ದ ಗೋಡಂಬಿ
ಕುಡಿಯುತ ಕಡೆಯಲ್ಲಿ
ನನ್ನ ಹುಡುಕು
 
ಹಲ್ಲಿ ಲೊಚಗುಟ್ಟಿದೆ 
ಆದರೇನಂತೆ 
ಅಂಥ ಹೊಸತನವೇನ 
ಕಂಡೆ ನೀನು?
ನಿನ್ನ ಕಣ್ಣನು ಬೇಟೆ-
-ಯಾಡ ಬಂದವ ನಾನು
ಎದುರಿದ್ದರೂ
ಕಾಣಲಿಲ್ಲವೇನು?

ಉಬ್ಬುವ ಎದೆಯೊಡ್ಡಿ
ಹಬ್ಬುವ ನಿದ್ದೆಯ
ಚೂರು ಚೂರಾಗಿಯೇ
ಶಮಿಸು ಬಾರೆ
ನಿನ್ನಾಸೆಯ
ಉತ್ತುಂಗವನು ನಾನರಿಯೆ
ಲೋಪಗಳಿಗೆ
ಶಾಪವಿಟ್ಟು ತೀರೆ 

ನಂತರದ ಹಾದಿಯದು
ಮುಳ್ಳಿಗೆ ಬಿಟ್ಟು ಬಿಡು
ಈ ಸಡಗರ ಇಮ್ಮಡಿ-
-ಗೊಳಿಸುತ
ಉನ್ಮತ್ತನಾಗಿರುವೆ
ತೇಲಿಸು ನಿನ್ನೊಲವ
ಅಲೆಯೊಂದಿಗೆ ಬರುವೆ 
ತಡವರಿಸುತ

ನಾಚಿಕೆಯ ಕಳಚಿಡು
ಆಭರಣ ಪೆಟ್ಟಿಗೆಲಿ
ಈಗ ಸಲ್ಲದು ಅದಕೆ
ಅಲ್ಲ ಸಮಯ
ನನ್ನ ನೀ, ನಿನ್ನ ನಾ
ಅರಿತುಕೊಳ್ಳುವ ವೇಳೆ
ಅರಿವಿಗೆ ಬರಬಹುದು
ಹೊಚ್ಚ ವಿಷಯ

ಮಾತಿಗೂ ಮೀರಿದ
ಮೌನವನು ಸವಿದಾಗ
ಮಾತ್ರೆಗಳ ಗುಣಿಕೆಯಲಿ
ಗುರುವಾಗುವೆ
ಅತಿಯಾದ ಮೋಹದಲಿ
ಮೆಲ್ಲ ಗಲ್ಲವ ಕಚ್ಚಿ
ನಿನ್ನ ಸಿಟ್ಟಿಗೆ ನಾ 
ಋಣಿಯಾಗುವೆ  !!

                  -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩