Friday, 31 January 2014

ಸಣ್ಣ ಬಿನ್ನಹ !!

ಬರೆಯೋಕೂ ಮುನ್ನ ಬಿಡಬೇಕು ನೀನು 
ಒಮ್ಮೆಯಾದರು ನನ್ನ ಬೆರಳ ಸೋಕಿ
ಹರಿಯೋಕೂ ಮುನ್ನ ಅಳಬೇಕು ನಾನು 
ನೀನು ಬಂದು ತಡೆವುದೊಂದೇ ಬಾಕಿ 

ಮಲಗೋಕೂ ಮುನ್ನ ಜ್ವರವೊಂದು ಬರಲಿ 
ನೀ ನೀಡುವ ಕನಸ ಗುಳಿಗೆಗಾಗಿ
ಮುಗಿಲಾಚೆ ಸಣ್ಣ ಮನೆ ಕಟ್ಟಿ ಇಡುವೆ 
ಹಾರಾಡಿದ ಬಳಿಕ ಉಳಿವಿಗಾಗಿ 

ಮರುವಲ್ಲಿ ಒಂದು ಸುಳುವಾಗಿ ನಿಲ್ಲು 
ಮರೆತಲ್ಲೂ ನಿನ್ನ ನೆನೆಯುವಂತೆ 
ಕತ್ತಲೆಯ ದಾರಿ, ನೀ ಪ್ರಣತಿಯಾಗು 
ಪಯಣದಲ್ಲಿ ಬಾರದಂತೆ ಚಿಂತೆ 

ಕಥೆಯಲ್ಲಿ ಒಂದು ತಿರುವಾಗಿ ಬಂದು 
ಕಥೆಗಾರನ ನಿದ್ದೆ ಕೆಡಿಸು ಈಗ 
ಹಲವಾರು ಸಾಲ ಹಾಡೊಂದ ಬರೆವೆ 
ಕೆಲವೊಂದ ಹೆಕ್ಕಿ ಹಾಡು ಬೇಗ

ಎದೆಗೊಂದು ಕಿವಿಯ ಇಟ್ಟಾರ ಕೇಳು 
ಹೃದಯಕ್ಕೆ ಚೂರು ಪೆಟ್ಟಾಗಿದೆ 
ಕಡೆಗೊಂದು ಮುತ್ತು ಕೊಟ್ಟಾರ ಹೇಳು 
ಯಾವೊಂದು ಮಾತ ಮುಚ್ಚಿ ಇಡದೆ !!


                                -- ರತ್ನಸುತ

1 comment:

  1. ನಮ್ಮೆಲ್ಲರ ಯವ್ವನದ ದಿನಗಳ ಭಾವ ತೀವ್ರತೆಯನ್ನು ಭರತ ಮುನಿಗಳು ಮರಳಿ ಕಟ್ಟಿಕೊಟ್ಟಿದ್ದಾರೆ.

    ReplyDelete

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...