Monday 27 January 2014

ಗುರು ಪ್ರಣಾಮ !!

"ಕೈ ಮುಗಿವೆ ಗುರುವೈಯ್ಯ 
ಆಕಾಶ ನೀನಯ್ಯ
ದಿಗಂತ ನಿನ್ನ ಮನ
ಅನಂತ ನಿನ್ನ ಜ್ಞಾನ
ನಾ ನಿನ್ನ ಕಾಲಡಿಯ
ಧೂಳು ಕಾಣಯ್ಯ"

ಗುರು ಮೆದು ದನಿಯಲ್ಲಿ
"ನೀ ಧೂಳು
ನಿಜ ಕಂದ
ನಾ ಸ್ಥಾವರ
ನೀ ಜಂಗಮ
ನೀ ಒಬ್ಬರಿಗಾದರೂ
ಎಟಕುವ ಸಿಹಿ ನೀರು
ನಾ ಆಳದ ಎಟುಕದ
ಕಟು ಬೇರು"

ನಾನಂದೆ 
"ಗುರುವಾಗಿ ನೀ ನುಡಿದೆ
ನನಗಿಲ್ಲವಯ್ಯ
ಜರಿವ ಹಕ್ಕು;
ನೀನೋ ಶ್ರೇಷ್ಠನು
ನಾನೋ ಕನಿಷ್ಠನು
ನಾ ಕೇವಲ ನಾರು
ನೀ ನನ್ನ ಹೂವು
ನೀ ಕಡಲು 
ನಾ ಮುತ್ತ ಹೊರತು ಚಿಪ್ಪು"

ಗುರು ಅಂದ 
"ನಾ ಕಡಲು 
ನನ್ನೊಡಲ ಒಳಗೆ 
ಭೂ ಕಂಪ, ಜ್ವಾಲಾಮುಖಿ
ಮುನಿದೊಡೆ ಪ್ರಳಯ. 
ನೀ ನಿಸ್ವಾರ್ಥಿ
ಮುತ್ತೊಬ್ಬರ ಪಾಲು 
ಚಿಪ್ಪೊಬ್ಬರ ಪಾಲು 
ನೀ ಉತ್ತಮರ ಸಾಲ 
ಮೊದಲಿಗ ಕಾಣೋ"

ನಾನಂದೆ 
"ನನ್ನೊಳಗೆ ನನ್ನಿರಿಸಿ 
ನನ್ನ ನಿಯಂತ್ರಿಸಿದೆ 
ಅಜ್ಞಾನವ ಚಿವುಟಿ 
ಸುಜ್ಞಾನ ಬಿಂಬಿಸಿದೆ 
ನನ್ನೊಳಗೆ "ನಾ" ಇರದೆ  
ನಿನ್ನ ಕಾಣೋ ನಾನು 
ನಿನ್ನವನೈಯ್ಯ,
ನಿನ್ನೊಳಗೊಬ್ಬನಯ್ಯ 
ಆದರೂ ನೀ ಎನ್ನ 
ಅಂತರ್ಯಾಮಿ"

ಗುರು ಅಂದ
"ನಿನ್ನ ನೀ ಅರಿತದ್ದು 
ನಿನ್ನ ಕೌಶಲ್ಯ 
ನಾ ಕೇವಲ ನಿನ್ನ 
ನೆರಳಾಗಿ ಉಳಿದೆ 
ನೀ ನಡೆದದೇ ದಾರಿ 
ನೀ ತಲುದ್ದೇ ಗುರಿ

ನಾನಿರುವೆ ಎಂಬ 
ಭಕ್ತಿ ನಿನ್ನಲಿ 
ನೀನಿರುವೆ ಎಂಬ 
ಶಕ್ತಿ ನನ್ನಲಿ"

ಕಡೆಗೂ 
ಗುರು ಆಕಾಶವಾದ 
ನಾ ಅವನಾಜ್ಞೆಯ ಧೂಳಾಗಿ ಉಳಿದೆ 
ನನ್ನ ಚಿತ್ತದನುಸಾರ !!

ಅಲ್ಲಗೈಯ್ಯುವುದು 
ಗುರುವಿನ ಹಿರಿಮೆ 
ಹೌದೆಂದು ಪಾಲಿಪುದು 
ಶಿಷ್ಯ ಧರ್ಮ 
   
               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...