ಸಾಸಿವೆ ಖಾಲಿ ಆದಾಗ !!

ಸಾವಿನ ಮನೆಯಲಿ ಸೊಳ್ಳೆಯು ತಾನು 
ರಕುತ ಹೀರುವುದ ಬಿಟ್ಟಿಲ್ಲ 
ಉಸಿರ ಜೊತೆಗೆ ಅಳಿದ ಹೆಸರು
ಒಂಟಿ ವಸ್ತ್ರವೇ ಹೆಣಕೆಲ್ಲ 
 
ಹೂವಿನ ಒಳಗೆ ಮಕರಂದವನು 
ದುಂಬಿ ಹೀರಿತು ಸುಳ್ಳಲ್ಲ 
ಎದೆಗೆ ಕಟ್ಟಿದ ಎರಡೂ ಕೈಗಳು 
ಕಾವಲು ಕಾಯಲು ತರವಲ್ಲ 
 
ಧೂಪದ ಘಮಲಿಗೆ ದೀಪದ-
ಉರಿ ಎಣ್ಣೆಗೆ ಕೊಸರುವುದು ಬೇಕಿಲ್ಲ 
ಗೂಟಕೆ ಜೋತ ಹೆಣದ ಶರಾಯಿ-
ಹೊತ್ತ ಚಿಲ್ಲರೆ ಇಹುದಲ್ಲ!!
 
ಅಂತಿಮ ತೇರನು ಕಟ್ಟಿದ ಹುರಿಯಲಿ 
ಹೆಣವ ಹೊರುವ ಹುರುಳಿಲ್ಲ 
ಹೆಣಕ್ಕಷ್ಟೇ ಗೊತ್ತಿರುವ ಸಂಗತಿ 
ಮಿಕ್ಕವರಿಗೆ ಮಾಹಿತಿ ಇಲ್ಲ 
 
ಮಂಡಕ್ಕಿಯ ಕಾಳೊಂದು ತುಟಿಯ-
ಬಾಗಿಲ ಕಾಯುತಲಿದೆಯಲ್ಲ 
ಜೊತೆಗೆ ಎರಚಿದ ಬಿಲ್ಲೆಯು ಹಣೆಯ-
ಬರಹಕೆ ಚುಕ್ಕಿಯಿಟ್ಟಿಹುದಲ್ಲ!! 
 
ಮಣ್ಣ ಹಂಬಲಿಸುತ್ತಿತ್ತು ಮನ
ಒಡಲೀಗ ಮಣ್ಣ ಮಡಿ ಬೆಲ್ಲ 
ಮದವೇರಿದ ಎದೆ ಮುಚ್ಚಿದ ಹಿಡಿ-
ಮಣ್ಣಿನ ಲೆಕ್ಕವ ಹಾಕುವರಿಲ್ಲ 

ಉಳಿದಾಗ ಕಟ್ಟಿ ಬೆಳೆಸಿದ ಗೋಡೆ 
ಮೊಳೆ ಹೊಡೆತಕೆ ಬಿಕ್ಕಿ ಅಳಲಿಲ್ಲ 
ಪಟ ಅಲ್ಲಿ ಯಾವ ಕಥೆ ಹೇಳಲಿಲ್ಲ 
ಉಳಿದವರು ಹುಟ್ಟಿಸುವುದೆಲ್ಲ!! 
 
                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩