Sunday 27 July 2014

ಮಧ್ಯಂತರ ತಿರುವು

ನೆನಪಿಗೆ ಏಣಿ ಹಾಕುವಾಗೆಲ್ಲಾ
ಜಾರುವ ಹಸಿ ನೆಲ;
ಅಡ್ಡಗಲ್ಲಿಟ್ಟರೂ ತಡೆಯಲೊಲ್ಲ
ಏಣಿಯ ಕಾಲುಗಳಿಗೆ
ನೆಲಕುರುಳಿ ಮಕಾಡೆ ಮಲಗುವ ತೆವಲು;
ಅಟ್ಟದ ಮೇಲಿಟ್ಟ ಕಟ್ಟುಗಳ ಮೇಲೆ
ಬಹುಕಾಲ ಉದುರಿಸದ ಧೂಳು!!

ಹೆಂಚು ಜಾರಿ ತಲೆ ಒಡೆದ ಕಥೆಯ
ಉಪ್ಪರಿಗೆಗೆ ಸಾರಿ ಸಾರಿ ಹೇಳಿದರೂ
ಒಪ್ಪದಿರುವುದರಿಂದಲೇ ದೂರು ಹಿಂಪಡೆದು
ಅಂಗಳದಲ್ಲಿ ವಿರಾಗಮಾನವಾಗಿ ಕುಳಿತೆ;
ಒಡೆದ ಹೆಂಚಿಗೆ ಮಾಳಿಗೆ ಸೋರುವುದು ದಿಟ,
ಏಕಾಂತವಾಸದಲಿ ತಲೆ ಗೀರುವ ಚಟ!!

ಹಿತ್ತಲ ಬಾವಿ ಬತ್ತಿ ಹೋದದ್ದು
ಸೇದುವ ಬಿಂದಿಗೆಗೆ ಗೊತ್ತಿಲ್ಲವೇನೋ!!
ನೇಣಿಗೆ ಶರಣಾದಂತೆ ಹಗ್ಗಕ್ಕೇ ಗಂಟುಬಿದ್ದು
ಎಂದೋ ಎಸೆದ ಗಾಜಿನ 
ಶೋಕೇಸು ಗೊಂಬೆಯನ್ನ ಮೇಲೆಳೆಯಲಿಕ್ಕೆ
ತುದಿಗಾಲಿಗೆ ಬಿಡುವುಗೊಡದಂತೆ
ನಿಂತದ್ದೇ, ನಿಂತದ್ದು;
ಅಡಿಗೆ ಚೂರಾಗಿರಬಹುದೆಂಬ ಅರಿವೂ ಇಲ್ಲದೆ!!

ಗೋಡೆ ಬಿರುಕಿನ ನಡುವೆ ಇರುವೆ ಗೂಡು
ಬೆತ್ತಲು ಮರದ ಕೊಂಬೆಯಿಂದ ದುಃಖಿತ ಹಾಡು
ರಸ್ತೆ ನಡುವೆಯ ಹೊಂಡದ ಬಾಳು
ಪಕ್ಕಕೆ ಜಿಗಿದ ಉರುಟುಗಲ್ಲು
ಒಣಗಿ ರಟ್ಟಾದ ನಾಯಿ ನೆರಳು
ಉದುರಿ ಮುಪ್ಪಾದ ಎಲೆಯ ಒಡಲು
ಹಾರಿದ ಪಕಳೆ, ಚೀರಿದ ಮೌನ
ಹನಿ ಜಾರಿದ ಬಂಡೆಕಲ್ಲೊಡಲ ಬಣ್ಣ!!

ಕಣ್ಣ ಚುಚ್ಚಿದ ಸೂಜಿಯ ಮೊಂಡುತನಕೆ
ನೆತ್ತರ ಮಡುವಿನ ಗುಡ್ಡೆಯೊಳಗೆ
ನೆನ್ನೆಗಳ ನಕಾರಾತ್ಮಕ ಛಾಯೆ;
ಮುಂದೆಲ್ಲೋ ಅಕಾಲಿಕ ತಿರುವು,
ಒಂದು ಜೊತೆ ಚಪ್ಪಲಿ ಸವೆಸಿ
ಮತ್ತೊಂದ ಕೊಂಡುಕೊಳ್ಳಬೇಕನಿಸುವಾಗ
ಕಾಲಿಲ್ಲದಿರುವುದು ಅರಿವಾಯ್ತು;
ಮಧ್ಯಂತರ ಜೀವನ ಮೊದಲಾಯ್ತು!!

                                        -- ರತ್ನಸುತ

1 comment:

  1. ಹೊಸ ಚಪ್ಪಲಿ ಕೊಂಡುಕೊಳ್ಳಲು ಹೊರಟಾಗ ಕಾಲೇ ನಾಸ್ತಿಯಾದ ಅರಿವು ಮತ್ತು ನೇಣಿಗೆ ಬಿದ್ದ ಗಾಜಿನ ಪ್ರತಿಮೆಗಳು ಬಹು ಅರ್ಥಗರ್ಭಿತ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...