Wednesday, 2 January 2019

ದಿಕ್ಕು ತೋಚದ ಬಾಳ ನಾವೆಗೆ ದಾರಿ ತೋರಿದ ನಾವಿಕ

ದಿಕ್ಕು ತೋಚದ ಬಾಳ ನಾವೆಗೆ
ದಾರಿ ತೋರಿದ ನಾವಿಕ
ಕ್ರಮಿಸಬೇಕಿದೆ ಬಹಳ ದೂರ
ನಿನ್ನ ನೆರಳನು ಬೆಸೆಯುತ
ಅಲೆಗಳೆಷ್ಟೇ ದ್ಯುತಿಗೆಡಿಸಲಿ...

ನಕ್ಷತ್ರಗಳಿವೆ ನಕ್ಷೆಗೆ
ಹೆಗಲ ಮೇಲೆ ಏರಿ ನಡೆಸು
ಮಾತು ಮಾತಿಗೂ ಕಿಸಿಯುತ



ವೃಕ್ಷವೊಂದು ಎಡವಿದಾಗ
ಹಚ್ಚು ಅಲ್ಲಿ ದೀಪವ
ನಿನ್ನ ಚಿಗುರು ನನಗೂ ಕಲಿಸಲಿ
ಆತ್ಮವನ್ನು ಹಬ್ಬಲು
ಸಾಕ್ಷಿಯಾಗು ಎಲ್ಲ ನಗುವಿಗೆ
ಅರ್ಥವಾಗಲಿ ಕಂಬನಿ
ಕಣ್ಣ ಭಾಷೆ ಅಷ್ಟೇ ಸಾಕು
ಎಲ್ಲ ಬಿಡಿಸಿ ಹೇಳಲು



ಗುರುವೇ ಇಲ್ಲದೆ ಕಲಿತ ನಡಿಗೆ
ಈಗ ಓಟವ ಬಯಸಿದೆ
ಶಾಂತವಾದ ಹಜಾರದಲ್ಲಿ
ಓಂಕಾರವೂ ನಿನ್ನದೆ
ಎರೆಡೆರಡು ಚಂದಿರರ
ನಡುವಲ್ಲಿ ಚಂದ ಸಮರದಿ
ನಿನ್ನ ಗೆಲುವಿಗೆ ಆತ ಕರಗಿದ
ಬೆಳಗೋ ಸರದಿ ನಿನ್ನದೇ!



ಬಯಲ ಹೆಜ್ಜೆ ಎದೆಗೆ ಇಟ್ಟು
ಹೊಸ ಶಾಸನ ಬರೆಯುವೆ
ಹಠವ ಗೆಲ್ಲಿಸಿ ತುಟಿಯ ಅರಳಿಸಿ
ಮನದ ತಂತಿಯ ಮೊಟಕುವೆ
ಸಕ್ಕರೆಯ ಸಜ್ಜಿಗೆಯ ಬಟ್ಟಲು
ನಿನ್ನ ತುಂಬು ನಗೆಯ ನೋಟ
ಪದವಿ ಕೊಟ್ಟು ತಿದ್ದಿ ಕಲಿಸುವೆ
ಎಷ್ಟು ಬಿನ್ನವೋ ನಿನ್ನ ಪಾಠ?



ಇಂದು ಇಡುವ ಹೆಜ್ಜೆ ಗುರುತಿಗೆ
ಎರಡು ಸಂವತ್ಸರದ ವಯಸು
ನೀನು ಸವಿದು ಜೊತೆಗೆ ನನಗೂ
ಬದುಕಿನುತ್ಸಾಹಗಳ ಬಡಿಸು
ಅಪ್ಪನೆಂದು ಕರೆದೆ ನನ್ನ
ಮಾಡಿದೆಲ್ಲ ತಪ್ಪ ಕ್ಷಮಿಸಿ
ನೀ ಆರಿಸೋ ದಾರಿಯಾಗುವೆ
ಮುನ್ನ ನನ್ನೇ ನಾನು ಸವೆಸಿ...

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...