Wednesday, 2 January 2019

ಎಷ್ಟು ಸಾಧ್ಯವೋ ಅಷ್ಟು

ಎಷ್ಟು ಸಾಧ್ಯವೋ ಅಷ್ಟು
ಅಷ್ಟಕ್ಕಿಂತ ಒಂದಷ್ಟು ಹೆಚ್ಚು
ಪ್ರೀತಿಯನ್ನು ಕೇಳದೆಯೇ ಪಡೆದು
ಹೇಳದೆಯೇ ಕೊಟ್ಟುಕೊಳ್ಳುತ್ತ
ನಿತ್ಯ ಖುಷಿಯೊಂದ ಹಡೆದು...

ನೆನಪಿಗೊಂದು ಹೆಸರಿಟ್ಟು
ಬಾಳ ಪುಟಗಳ ಹೊರಳಿಕೊಳ್ಳೋಣ



ಅಲ್ಲಲ್ಲಿ ಹಾಳೆ ಗುರುತುಗಳಾಗಿ
ಒಂದೊಂದು ನವಿಲು ಗರಿಯಿಟ್ಟು
ಮರಿ ಹಾಕಿರಬಹುದೆಂಬ ನೆಪದಲ್ಲಿ
ತಲುಪಿ, ತಂಗಿ, ಮಿಂದು ಬರೋಣ
ಬಿಟ್ಟಷ್ಟೂ ಗುರುತುಗಳನ್ನು ಎಣಿಸಿ, ದಣಿದು
ಅದೇ ಗರಿಯ ನೆರಳಲ್ಲಿ ಒರಗಿಕೊಳ್ಳುತ್ತ
ಮತ್ತೆ ಹೊಸಬರಂತೆ ನಾಚಿಕೊಳ್ಳೋಣ



ನನ್ನೊಳ ನೀ ಬೆರೆತು ಚಿಗುರಿದ ಅಗ್ನಿಗೆ
ನಿನ್ನೊಳ ನಾ ಸುರಿದ ತಣ್ಣನೆ ಇರುಳನ್ನು
ಒಂದುಗೂಡಿಸುವಲ್ಲಿ ನಾವಾದೆವೆಂಬ
ನಿಟ್ಟುಸಿರ ಬಿಡುತಲೇ ಮನದ ಮೊಗಸಾಲೆಯಲಿ
ದೀಪವೊಂದನು ಇರಿಸಿ
ಹೂವ ಜೋಡಿಸಿ ಕೊಡುವೆ, ನೀ ಕಟ್ಟಿ ಮುಗಿಸು



ಸಗ್ಗಕೂ ಒಂದೊಮ್ಮೆ ಶಾಪವಿಟ್ಟೆವು ಹೇಗೆ?
ನರಕದಲಿ ನರಳಿಕೆಯೂ ಸಾಕಾಗದಂತೆ
ಮೌನದ ದಾಹವನು ಕಂಬನಿ ನೀಗಿಸಿದೆ
ಬಿಕ್ಕಳಿಕೆ ಜೋರಾಗಿ ಮೂಡಿ ಬರಲಿ
ಏದುಸಿರ ಸರಣಿಯಲಿ ಪ್ರಾಣ ಮಗುವಂತೆ
ಎದೆ ಸವರುವ ಕೈ ಪ್ರೀತಿಯೇ ಆಗಲಿ



ಜೋರು ಮಳೆ ನಿಂತಿದೆ
ಅಲ್ಲಲ್ಲಿ ಒಂದೊಂದು ತೊಟ್ಟು
ಮಳೆಯ ತೀವ್ರತೆಯನ್ನು ಬಣ್ಣಿಸಿವೆ
ಮೂಡಿಸಿದ ತರಂಗಗಳ ಮೇಲೆ
ಬಾ ಒಮ್ಮೆ ಎಲ್ಲವನೂ ದಾಟಿ ಬರುವ
ಸಾಧ್ಯವಾದರೆ ಕಳೆದು ಎಚ್ಚರದಲಿ
ನಿಂತ ಊರು ನಲುಮೆ ತವರಾಗಲಿ!

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...