Wednesday, 2 January 2019

ಕಲ್ಲು ಚೂರುಗಳಂತೆ ನದಿಗೆ ಎಸೆದರು

ಕಲ್ಲು ಚೂರುಗಳಂತೆ ನದಿಗೆ ಎಸೆದರು
ಉರುಟುಗಲ್ಲಾಗಲು ಹರಿವಿಗೆ
ಜೊತೆಗೆ ಬಂದವು ಕೆಲವು
ತಿರುವುಗಳಲ್ಲಿ ಕಳೆದವೇ ಹೆಚ್ಚು

...
ಜೊತೆಗಿದ್ದವುಗಳೂ ಹೊಂದುತ್ತಿಲ್ಲ
ಬಣ್ಣ, ಭಾವ, ಆಕಾರಗಳು ಬಿನ್ನ
ಜೋಡಿಸಿಕೊಳ್ಳುವುದಕ್ಕೂ ಹಿಂದೇಟು
ಅವರೇ ನನ್ನ ಮುಟ್ಟಗೊಡದಿದ್ದರೆ?



ನನ್ನ ಬಣ್ಣ ಕಪ್ಪು
ನನ್ನ ಪಕ್ಕ ಕುಂತದ್ದೂ ಸಹ
ಬಿದ್ದಲ್ಲಿಯ ಗುರುತುಗಳ ಲೆಕ್ಕವಿಟ್ಟೆವು
ಅಂಕೆಗೆ ಸಿಗದೆ ಸುಮ್ಮನಾದೆವು
ಮೌನದಲ್ಲೇ ಇಬ್ಬರೂ
ಗೊತ್ತಿದ್ದೂ ಗೊತ್ತಿಲ್ಲದವರು
ನಿಜಕ್ಕೂ ಗೊತ್ತಿಲ್ಲದವರೇ ಆಗಿಬಿಟ್ಟೆವು..



ಮಾರು ದೂರದಲ್ಲಿ ತದ್ವಿರುದ್ಧ ಬಣ್ಣ
ಅದೇಕೋ ನನ್ನ ಕಾಡುತ್ತಿತ್ತು
ನನ್ನನ್ನೇ ಬಿಡದೆ ನೋಡುತ್ತಿತ್ತು
ಚೂರು ಹೆಚ್ಚೇ ಸವೆದು ನವಿರಾಗಿತ್ತು
ನಾನಿನ್ನೂ ಒರಟು-ಒರಟಾಗಿದ್ದು
ನನ್ನದಲ್ಲವೆಂದು ಸುಮ್ಮನಾದೆ..



ನಾನೋ ಗೋಲಾಕಾರದಲ್ಲಿ ಉರುಳಿದ್ದರೆ
ದುಂಡಗೆ ಸಾಲಿಗ್ರಾಮವಾಗುತ್ತಿದ್ದೆ
ಅಥವ ಬಿದ್ದಲ್ಲೇ ಸವಿದಿದ್ದರೆ
ಆಟಿಕೆ ಬಿಲ್ಲೆಯಾಗುತ್ತಿದ್ದೆ
ಒಮ್ಮೆ ಉರುಳಿ ಒಮ್ಮೆ ತಿರುಗಿ
ಒಮ್ಮೆ ಎಡವಿ ಮತ್ತೆ ಕರಗಿ
ಎಲ್ಲ ದಿಕ್ಕಿನಲ್ಲೂ ಅಪೂರ್ಣವಾಗಿ ಉಳಿದೆ
ಅಷ್ಟರಲ್ಲಿ
ನನ್ನವರೆಲ್ಲ ಕೊಚ್ಚಿ ಹೋಗಿ ದೂರ ಉಳಿದರು..



ಯಾರೊಂದಿಗೂ ಹೊಂದುಕೊಳ್ಳದೆ
ಪ್ರಯತ್ನಗಳು ಸೋತಾಗ
ಸುಮ್ಮನೆ ಕಲ್ಲಾಗೇ ಉಳಿದುಬಿಡೋಣವೆನಿಸುತ್ತೆ
ಮತ್ತೊಂದು ಹುಸಿ ಆಸೆ ಹುಟ್ಟಿಸುವ ಕಲ್ಲು
ಕೆಣಕಿ ಸಾಗುವ ತನಕ



ಎಲ್ಲೋ ಅನಾಥ ತೀರದಲ್ಲಿ
ತನ್ನ ಒಡಲೊಲ್ಲದೆ ಬೆಸಾಡಿತು ಅಲೆ
ನಾನೋ ಇನ್ನೂ ಸವೆಯಬೇಕಿತ್ತು
ಮೈಯ್ಯೆಲ್ಲ ಸುಕ್ಕು, ಅಂಕು-ಡೊಂಕು

ಹೇಗೋ ಮಣ್ಣು ಮುಕ್ಕಿದ್ದೇನೆ
ತೇವಗೊಂಡಿದ್ದೇನೆ
ಅಂತಃಕರಣದಿಂದ ಚಿಗುರೊಡೆದು
ನನಗೊಂದು ಗುರುತು ಕೊಡಬಹುದೇ ಬದುಕು?
ಕನಸ ಕಟ್ಟಿಕೊಳ್ಳುತ್ತೇನೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...