Wednesday, 2 January 2019

ಅಪ್ಪನನ್ನು "ಅಮ್ಮ"ಯೆನುವ ಕಂದ

ಅಪ್ಪನನ್ನು "ಅಮ್ಮ"ಯೆನುವ ಕಂದ
ನಿನ್ನ ಮನಸು ಏಕಿಷ್ಟು ಚಂದ?!
"ಆಡಿಕೊಂಡಾರು ನೋಡಿದವರು!"
ಆತಂಕ ಅಮ್ಮನೆದೆಯ ತುಂಬ


ಆಡಿಕೊಂಡವರು ಹೇಗೆ ಬಲ್ಲರೇಳು
ಅಮ್ಮ ಆಗುವ ಆ ಪರಮ ಸುಖವ?!
ಕರೆಸಿಕೊಂಡಾಗ ಹರಿದು ಬಿಡರು
ಹರಿತವಾದ ವ್ಯಂಗ್ಯವಾಡೋ ಪದವ



ನಾ ಅಪ್ಪ ಆದರೂ ಅಮ್ಮ ಅವಗೆ
ಅವ ಮಗ ಆದರೂ ಅಮ್ಮ ನನಗೆ
"ಅಮ್ಮ" ಎಂಬುದು ಭಾವ ಸೇತು
ಸ್ತ್ರೀ ಅದಕೆ ಸುಪ್ತ ರಾಯಭಾರಿ



ಹನಿವ ಕಣ್ಣ ಒರೆಸುವುದು ತಾಯ್ತನ
ಉದರ ಕಿಚ್ಚ ತಣಿಸುವುದು
ಅಧರ ಸ್ವಚ್ಛ ಅರಳುವುದು
ಎದೆಯ ಬೆಚ್ಚಗಿರಿಸುವುದು



ಕನಸ ಪಹರೆ ಕಾಯುವುದು
ಸುಲಿದು ಬಿಡಿಸಿ ಕಲಿಸುವುದು
ಕಲೆತು ಬೆರೆತು ತಿದ್ದುವುದು
ಹಾಗೇ ತಿದ್ದಿಕೊಳ್ವದೂ ತಾಯ್ತನವೇ..



ನಾ ಅಮ್ಮ ಎಂಬ ಭಾವ ಅವನಲಿ
ಚಿಗುರಿ, ಅರಳಿ, ಚೆದುರುವ ತನಕ
ಅಮ್ಮನಾಗೇ ಉಳಿಯುವ ಹಂಬಲ
ನಂತರ "ಅಪ್ಪ"ನೆಂಬ ಹಿಂಬಡ್ತಿ ಇದ್ದೇ ಇದೆ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...