Wednesday, 2 January 2019

ಹೆಣ ಹೊರುವವರಿಗಾಗೇ


ಹೆಣ ಹೊರುವವರಿಗಾಗೇ
ಹಣ ಮಾಡಿಟ್ಟುಕೋ
ಋಣ ತೀರಿತೆಂದರಲ್ಲಿ
ಜನ ಹೆಸರ ಮರೆವರು
ದಿನ ಒಂದು ದಳ ನೆಟ್ಟು...

ಪುನಃ ನೀರುಣಿಸುತಿರು
ಎದೆಗಂಟ ಬೇರು ಇಳಿದು
ಮನ ಮನವ ಬೆಸೆಯಲಿ



ಇದೇ ಹೂವೆಂದು ಮೂಸಿ
ಅದೋ ಅದನು ಜರಿಯದಿರು
ಮದ ಏರಿದಾಗ ಎಲ್ಲ
ವಿಧ ವಿಧವೇ ಕಣ್ಣಿಗೆ
ಅಡಿಯಿಂದ ಮುಡಿಗಂಟ
ಹತ್ತಾರು ಮತ್ತೂ ಬಣ್ಣ
ದಾರಿ ಉದ್ದಕೂ ಪಸರು
ಕೊನೆಗುರುಳುವೆ ಮಣ್ಣಿಗೇ



ಧೂಪದ ಘಮಲಿದ್ದೆರೇನು
ದೀಪದ ಬೆಳಕಿದ್ದರೇನು
ಪಾಪದ ಕಾಣದ ಮೂಟೆ
ಹೆಗಲ ತೊರೆಯಲಿಲ್ಲ
ಹೆಪ್ಪುಗಟ್ಟಿದ ದುಃಖ
ತಪ್ಪಿತಸ್ಥರಲ್ಲೇ ಹೆಚ್ಚು
ಹಂಚಿ ತಿಂದವರು ಯಾರೂ
ಉಸಿರ ಹಂಚಲಿಲ್ಲ



ಮಲಗಿದ್ದಲ್ಲೇ ಮಜ್ಜನ
ನೂಕುನುಗ್ಗಲಲ್ಲಿ ಜನ
ಕೊನೆಗೊಮ್ಮೆ ನಿನ್ನ ಕಂಡು
ಕೊಂಡಾಡುವ ಸಮಯ
ಗಳಿಸಿ ಉಳಿಸಿ ಹೋದೆ
ಅದಕೇ ಸಿಂಗಾರಗೊಂಡಿದೆ
ಯೋಗ್ಯತೆಗೆ ತಕ್ಕ ತೇರು
ಅದಕೆ ನೀನೇ ಒಡೆಯ



ಅತ್ತು ಸುರಿದು ಬೀಳ್ಗೊಟ್ಟರು
ಮಣ್ಣ ಮುಚ್ಚಿ ಕಣ್ಣ ಒರೆಸಿ
ಜಳಕ ಮಾಡಿ ಮನೆ ಗುಡಿಸಿ
ನಿನ್ನ ನೆನಪ ಸುಟ್ಟರು
ಅವರ ಪಾಲಿಗೆ ನೀ
ನಿನ್ನ ಪಾಲಿಗವರು ಸತ್ತು
ಅಲ್ಲಿಗೆ ವಿಮುಕ್ತಿಗೊಂಡ
ನೀನೇ ಅಸಲಿ ದೇವರು!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...