Wednesday 2 January 2019

ಆಕೆ ಕರುಳು ಕೊಟ್ಟಳು

ಆಕೆ ಕರುಳು ಕೊಟ್ಟಳು
ನಾನು ಬೆರಳು ಕೊಟ್ಟೆ
ಸ್ವೀಕಾರಕ್ಕೂ ಔದಾರ್ಯತೆ ಬೇಕು
ಅದು ಅವನಲ್ಲಿ ಬೆಟ್ಟದಷ್ಟಿದೆ


ಆಕೆ ಉಸಿರು ತುಂಬಿದಳು
ನಾನು ಹೆಸರನಿಟ್ಟೆ
ಪ್ರಿಯವಾಗಿ ಇರಿಸಿಕೊಂಡ
ನಯವಾಗಿ ಬೆರೆತುಹೋದ



ಅಮ್ಮ ಗದರುವಾಕೆ ಮುದ್ದಿನಲ್ಲೂ
ಮೆದುವಾಗಿ ತಿದ್ದುವವಳು..
ಬಲು ಸೂಕ್ಷ್ಮ ಆತ!
ಒಮ್ಮೆ ಮುನಿಸು, ಒಮ್ಮೆ ಅಳು
ಅಪ್ಪನಂಗಿಯ ಮೇಲೆ
ಗೀಚಿದ್ದೇ ಹನಿಯ ಸಾಲು



ಎದೆಯ ಮೇಲೆ ಅವನ ಪಾದ
ಕನಸಿನಲ್ಲೂ, ಮಗ್ಗಲಲ್ಲೂ
ರೆಪ್ಪೆ ಮುಂದೆ ಅವನ ನಾಳೆ
ಹಿಂದಿರುಗಿ ನೋಡೋ ವೇಳೆ
ಅವನೆಂದೂ ಪುಟ್ಟ ಪಾಪು
ನಾನವನ ತದ್ರೂಪು..



ನನ್ನ ಅವಳ ಹೃದಯದೊಂದೊಂದು
ಮಿಡಿತದಲ್ಲೂ ಅವನೇ ಕವಿತೆ
ಲಯ ತಪ್ಪಿದ ಹಾಡಿನಲ್ಲೂ
ಮಿರಿಯುತಿದ್ದ ಭಾವದಂತೆ
ಉತ್ಸಾಹದ ಕೈಪಿಡಿ
ಜೋಡಿ ಬದುಕ ಬೆನ್ನುಡಿ...



ಎಡವಿದಲ್ಲೂ ಒಂದು ಪಾಠ
ಹಠದಲ್ಲಿ ಅಷ್ಟೇ ದಿಟ್ಟ
ಅವನಂತೇ ಕತ್ತಲು
ಅವನಷ್ಟೇ ಪುಕ್ಕಲು
ಅವನಿಂದಲೇ ಸಂಜೆ ಬೆಳಗು
ಅವನೇ ಬೆಳದಿಂಗಳು!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...