Wednesday, 2 January 2019

ವಿಷದ ಬಟ್ಟಲನು ಕೊರೆದು

ವಿಷದ ಬಟ್ಟಲನು ಕೊರೆದು
ಅಂದವಾದ ರೇಖೆಗಳ ಬೆಸೆದು
ಸುರುಳಿ ತಂದ ಅಂಚಿನಿಂದ
ಮರಳಿ ಮತ್ತೆ ಸುರುಳಿಕೊಂಡು
ಎಲ್ಲೋ ಬಿಟ್ಟಂತೆ ಬಿಟ್ಟು...

ಮತ್ತೆಲ್ಲೋ ಮೂಡಿಸಿದ ಉಳಿಗೆ
ಬಟ್ಟಲು ತುಳುಕಿದಾಗ ಕಂಡದ್ದು
ಯರದ್ದೋ ಮನೆಯ ಸೂತಕದ ಛಾಯೆ..



ಕಾಯಿಸಿದ ಗಾಜಿನ ಬಳೆಗಳು
ನೋವನು ಹೇಳಿಕೊಂಡಾಗಲೆಲ್ಲ
ತೊಟ್ಟವಳ ಕಣ್ಣಲ್ಲಿ ಏನೋ ಆನಂದ..
ಅಷ್ಟಕ್ಕೆ ಸುಮ್ಮನಾಗದವಳು
ಮತ್ತಷ್ಟು ಕುಲುಕಿ ಅಳಿಸುತ್ತಾಳೆ..
ಖುಷಿ ಹೆಚ್ಚಾದಾಗ ಚೂರು!
ಚೂರುಗಳಲ್ಲಿ ಮತ್ತೆ ತುಡಿತ
ತನ್ನ ಹಳೆ ಬಳಗದ ನಂಟಿಗೆ..



ಗಡಿಯಾರದ ದಣಿವಾರದ ಕೈಗಳು
ಕ್ಷಣ ಕ್ಷಣಕ್ಕೂ ಪರಿತಪಿಸಿ
ಅದೇ ಕ್ಷಣಗಳ ಸಂಚಲನಕ್ಕೆ ದೂರಾಗಿ
ಎಷ್ಟೋ ಸಲ ಕೆಟ್ಟು ನಿಂತು
ಒಂದುಗೂಡಿ ಸುಖ ಪಡುವಾಗ
ದಪ್ಪ ದುರ್ಬೀನು ಹಿಡಿದು
ಸ್ಕ್ರೂ ಡ್ರೈವರ್ ತಿರುವುತಲೊಬ್ಬ
ಹೊಟ್ಟೆಗೆ ರೊಟ್ಟಿಯ ಗಿಟ್ಟಿಸಿಕೊಂಡ



ಗಂಧವಿಲ್ಲದ ಮನೆ ಬಾಗಿಲು
ಅದೇ ತೊಡಿಸಿದ ರೂಪ ತಾಳಿ
ಗಂಧಭರಿತ ಮರ ತೀಡಿಸಿಕೊಂಡು
ಆಕಾರವಿಲ್ಲದಂತಾಗಿಸಿಕೊಂಡಾಗ
ಜೀವನ ಸಮತೋಲನ ಕಂಡಿತು...
ಅಂದು ಬೀಗಿದ್ದು ನೆಲ ಕಚ್ಚಿದರೆ
ಇಂದು ಬೀಗುವಂತದ್ದು ನಾಳೆ..
ಎಲ್ಲವೂ ಕೊನೆಗೆ ಒಂದೇ..



ರಸ್ತೆಗಳು ಹಿಂದೆ ರಸ್ತೆಗಳಾಗಿರಲಿಲ್ಲ
ಯಾರದ್ದೋ ಹೊಲದ ದಿಬ್ಬಗಳಾಗಿ
ಕೆರೆಯ ಕಾಲುವೆಗಳಾಗಿ, ನೆರಳ ಮಡಿಲಾಗಿ
ಆಟದ ಬಯಲಾಗಿ, ಕೂಟದ ಒಡಲಾಗಿ
ಜಡವಾಗಿ, ಜಾಡಾಗಿ, ಕಣವಾಗಿ
ಈಗ ಊರು ಊರುಗಳನ್ನು ಒಂದಾಗಿಸಿ
ಸವೆಯುತ್ತ ಸಾಗುವಾಗೊಮ್ಮೆಲೆಗೆ
ಅಲ್ಲೊಂದು ಜೀವ ಬಲಿಯಾಗುವುದೂ ಜೀವನದ ಭಾಗವೇ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...