Wednesday, 2 January 2019

ಬುಲ್ ಬುಲ್ ಹಕ್ಕಿಗಳು

ಜೋಡಿಯಾಗಿ ಮನೆಗೆ ನುಗ್ಗಿದ ಬುಲ್ ಬುಲ್ ಹಕ್ಕಿಗಳು
ಹೊರಗೆ ದಾರಿ ತೋಚದೆ ಪರದಾಡಿದವು
ಕಿಟಕಿಗಳನ್ನೆಲ್ಲ ತೆರೆದಿಟ್ಟೆ
ಒಂದಕ್ಕೆ ಮಾತ್ರ ದಾರಿ ಸುಗಮವಾಗಿ ಹಾರಿ ಹೋಯಿತು
ಮತ್ತೊಂದು ಒಳಗೇ ಉಳಿದು ಅಳುತ್ತಿದೆ..


ಅರೆ.. ಎಷ್ಟು ಹುಂಬ ಹಕ್ಕಿಯದು!
ಬಂದ ದಾರಿ ಮರೆತಿದೆ ಸರಿ
ಮುಂದೆ ದಾರಿಯಿದೆಯೆಂಬುದಾದರೂ ತಿಳಿಯದಿದ್ದರೆ?
ಒಂದೇ ಸಮ ಚೀರುತ್ತಿದೆ
ಹೊರಗಿಂದ ಒಂದು ಸರದಿ ಮತ್ತೆ ಒಳಗಿಂದ..



ದಣಿವಾಗಿರಬಹುದೆಂದು ನೀರಿಟ್ಟೆ
 ನಾಲ್ಕು ಕಾಳು ಅಕ್ಕಿ ಚೆಲ್ಲಿ ದಾರಿ ಮಾಡಿ ಕೊಟ್ಟೆ
ಯಾವುದೋ ಮೂಲೆಯಲ್ಲಿ ಉಳಿದು
ತನ್ನ ಬಾನೊಡನಾಡಿಯನ್ನು ಕೂಗುತ್ತಿದೆ
ಹೊರಗಿಂದ ಸಿಕ್ಕ ಪ್ರತಿಸ್ಪಂದನೆಗೆ ಮತ್ತೂ ಜೋರಾಗಿ...



ಸಂಜೆ ಮಂಪರು ಆವರಿಸಿ
ಗಂಜಿ ಬೆಂದು ಹೊಟ್ಟೆ ತಣ್ಣಗಾಸಿಸುವಾಗ
ಯಾಕೋ ಹಕ್ಕಿಯ ಸದ್ದು ಕ್ಷೀಣಿಸತೊಡಗಿತು..
ಹೊರಗೂ ಯಾವ ಸದ್ದು ಇಲ್ಲ
ಬಹುಶಃ ಋಣ ತೀರಿತೆಂದೇ?



ಎಷ್ಟು ದೊಡ್ಡ ಮನೆ ನನ್ನದುsss
ಅದಕ್ಕೆ ಇಷ್ಟಾದರೂ ಹಿಡಿಸದೆ
ಹೊರ ಜಗತ್ತಿನ ಚಪಲಕ್ಕೆ ಗಂಟಲಾರಿ
ತೊಟ್ಟು ನೀರು.. ಊಹಂ
ಕಾಳು ಅಕ್ಕಿ.. ಮುಟ್ಟೇ ಇಲ್ಲ
ಸತ್ತರದಕ್ಕೆ ಹೊಣೆ ನಾನಂತೂ ಅಲ್ಲ.
ಛೇ.. ಹಾಗೆಲ್ಲ ಆಗಿರಲಿಕ್ಕಿಲ್ಲ..



ಅಷ್ಟರಲ್ಲೇ ಸಾಮಾನು -ಸರಂಜಾಮು ಸಿದ್ಧವಾಗಿ
ಒಂದು ವಾರ ತವರಿಗೆ ಹೋಗುವ ಮಾತಾಡುತ್ತಾಳೆ ಮನದನ್ನೆ
ಆಗಸವೇ ಕುಸಿದು ಬಿದ್ದಂತೆ ನನಗೆ..
ಒಂಟಿ ಬುಲ್ ಬುಲ್ಗೆ ಸಾತ್ ಕೊಡಲಿದ್ದೇನೆ
ನರಕದಲಿ ಉಳದಷ್ಟು ಹೊತ್ತು..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...