Wednesday, 2 January 2019

ಮೌನ ಉಲಿವಾಗ


ಉಲಿವಾಗ ಮೌನ
ಉಳಿದೆಲ್ಲ ಮಾತು
ಶರಣಾಗಿ ನಿನ್ನ
ನೇವರಿಸಿದಂತೆ
ಮರೆಯಲ್ಲೇ ಹಾಡು...

ಮಿರಿಯುತ್ತಲಿತ್ತು
ನೀ ಜಾರಿ ಬಿಟ್ಟ
ನುಡಿ ಮುತ್ತಿನಂತೆ



ಕಲಿತಷ್ಟೂ ಶೂನ್ಯ
ಮರೆತಷ್ಟೂ ಧನ್ಯ
ಮನಸಾರೆ ಕೂಡು
ಎಚ್ಚರಿಕೆಯಿಂದ
ಕಿರಿದಾದ ನನ್ನ
ಅರಮನೆಯ ತುಂಬ
ಹೊತ್ತಿಸು ಪ್ರಣತಿ
ಕಣ್ಣಂಚಿನಿಂದ



ಒಪ್ಪತ್ತಿಗಿಂದು
ಒಬ್ಬಟ್ಟಿನೂಟ
ಹಸಿವಲ್ಲೇ ಸಾವು
ಹಸಿದಲ್ಲೇ ಜನನ
ಹುದುಗಿಟ್ಟ ಪ್ರೀತಿ
ಹದಗೆಟ್ಟಿತಂತೆ
ಬಯಲಾಗಿಸಿದ್ದು
ಬರೆದಿಟ್ಟ ಕವನ



ನಂಜೆಂಬ ಸಿರಿಯ
ಹೊಂದದ ಬಡವ
ಕಿತ್ತ ಜೇನನ್ನೂ
ಬಿಟ್ಟು ಬಂದಿರುವೆ
ನಿನ್ನಿರಿಸಿಕೊಂಡ
ನನ್ನರಿವಿನೊಳಗೆ
ನೀ ಗೀಚಿದಂತೆ
ರೂಪುಗೊಂಡಿರುವೆ



ಇನ್ನಷ್ಟೇ ಬದುಕು
ಈಗಷ್ಟೇ ನಡಿಗೆ
ನಿನ್ನಷ್ಟು ತಿದ್ದಿದ
ನೆರಳಾವುದಿಲ್ಲ
ಎದುರಿದ್ದೂ ಕೂಡ
ಕನಸಲ್ಲಿ ಕರೆವೆ
ನಿಜವ ತಬ್ಬುವೆ ಕ್ಷಮಿಸು
ಬರಲಾಗಲಿಲ್ಲ!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...