Wednesday 2 January 2019

ಕಟ್ಟು ಬಾ ಸೇತುವೆಯ ಮೌನಗಳ ನಡುವೆ

ಕಟ್ಟು ಬಾ ಸೇತುವೆಯ ಮೌನಗಳ ನಡುವೆ
ಆಡದ ಮಾತುಗಳು ಅರ್ಥವಾಗಿ ಸಾಯಲಿ
ಕಣ್ಣು ಬೆಸೆದರಷ್ಟೇ ಸಾಲದು ಸಂಭಾಷಣೆಗೆ
ದೃಷ್ಟಿಯೂ ಕೂಡಬೇಕು ಕಂಬನಿಗಳ ನಡುವಲಿ


ನೀಡು ನನಗೆ ನಿನ್ನ ಸದಾ ಸುಖಿಸೋ ಆ ನೋವನು
ಒಮ್ಮೆ ನನ್ನ ಹೃದಯದಲ್ಲೂ ನೆತ್ತರನ್ನು ಹರಿಸಲಿ
ತೋರು ಆ ನಿನ್ನ ಕನಸಿನೂರಿನಾಚೆ ಹೊಳೆಯನು
ಅಡ್ಡ ದಾರಿ ಹಿಡಿದ ಪಾದ ಪಾಪಗಳ ತೊಳೆಯಲಿ



ಬಿಗಿದಿಡು ಹಸ್ತವನ್ನು ನನ್ನ ಪ್ರಾಣ ಅಡಗಿಸಿಟ್ಟು
ಹುಡುಕಾಡಿ ನಿನ್ನನ್ನು ನಾ ಸೇರುವ ತನಕ
ಕೊಡೆಯನ್ನು ಇರಿಸಿಕೊಂಡ ಆ ನಿನ್ನ ನಂಬುಗೆಗೆ
ಅಚ್ಚರಿಯ ಹಂಗಾಮಿ ಮಳೆಯಾಗೋ ತವಕ



ಬರೆದು ಹೋಗು ಬೆನ್ನ ಮೇಲೆ ನಿನ್ನೆಲ್ಲ ಬಯಕೆಗಳ
ಬೆಂಬಿಡದೆ ಕಾಡುವಷ್ಟು ಕಟುವಾಗೇ ಇರಲಿ
ನಿನ್ನ ನೆನೆಪ ಸಾಂಗತ್ಯ ಇದ್ದರಷ್ಟೇ ಸಾಕು ಬಿಡು
ಏಕಾಂತಕೆ ಬಿಡುವು ಸಿಕ್ಕು ದೂರ ತೊಲಗಿ ಬಿಡಲಿ



ಬಾ ಚಾಚು ತೋಳುಗಳ, ಸಡಿಲಾಗಿಸಿ ಕೋಪವ
ತಬ್ಬಿಕೋ ಬೆಂದ ಜೀವ ನಿನ್ನ ಶಾಖ ಪಡೆಯಲಿ
ಗುಂಡಿಗೆ ಗುಂಡಿಗೆಗೆ ಮುತ್ತು ಕೊಟ್ಟು ಮೆರೆಯುವಾಗ
ಸಣ್ಣಗೆ ಮಂದಹಾಸ ಈರ್ವರಲ್ಲೂ ಮೂಡಲಿ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...