Wednesday, 2 January 2019

ಕ್ರಮಿಸಬೇಕು ಇನ್ನೂ ದೂರ

ಕ್ರಮಿಸಬೇಕು ಇನ್ನೂ ದೂರ
ಮೂರೇ ಹೆಜ್ಜೆ ಇರಿಸಿ ಕೂತೆವು
ಮಡಿಲ ತುಂಬ ಹಬ್ಬಿಕೊಂಡ
ಒಲವ ಬಳ್ಳಿಯ ಹೂವ ಸವರಿ
ಹೊರಳಿ ನೋಡಿದ ದಾರಿಯಲ್ಲಿ...

ತಿರುವು ತಿರುವುಗಳಲ್ಲೂ ಸೋತೂ
ನಿನ್ನ ಜೊತೆಗೆ ನಾನು ಮತ್ತು
ನನ್ನ ಜೊತೆಗೆ ನೀನು ಎಂಬ
ಸಂಭ್ರಮಕ್ಕೆ ಶುಭಾಶಯ!



ಇರುಳ ದಾಟಲು ಕಿಡಿಯ ಹೊತ್ತಿಸೆ
ಹಗಲು ಮೂಡಲು ಇರುಳ ಮುಟ್ಟಿಸೆ
ಹವಣಿಸಿದ ದಿನಗಳಿಗೆ ಮೀಸಲು
ಇನ್ನು ಮುಂದೆ ಇರಿಸೋ ಹೆಜ್ಜೆ
ನಿಂತ ಕಾಲಕೆ ಕಾಲ ನಿಲ್ಲದೆ
ಕಣ್ಣ ನೀರಲಿ ಬೇಳೆ ಬೇಯದೆ
ಹಸಿದ ಮನಸೊಳಗಾದ ಗಾಯಕೆ
ಇದೋ ನಗೆಯ ಶುಭಾಶಯ!

ಅಚ್ಚರಿಯ ಅಕ್ಷರವ ಕಲಿಸಿ

 ಮತ್ಸರವ ಮುತ್ತಲ್ಲಿ ಮರೆಸಿ
ನಂಟು-ನೆಂಟರ ಭಾರ ಹೊರೆಸಿ
ನಲ್ಮೆ ದೋಣಿಯ ಅಂಚಿಗಿರಿಸಿ
ಆಚೆ ಅಂಚಲಿ ದೋಣಿ ನಡೆಸಿ
ಇಟ್ಟ ಒಗಟುಗಳನ್ನು ಬಿಡಿಸಿ
ಹೊಸ ಗೋಜಲು ಹುಟ್ಟು ಹಾಕುವ
ಬಾಳ ಗಂಟಿಗೆ ಶುಭಾಶಯ!



ಕೆಡವಿದ ಕೈಗನ್ನಡಿಯನು
ತಡವಿದ ಆ ಕೆನ್ನೆಗಳನು
ತಡೆದ ಮಾತನು, ಕೊಡದ ಮಾತನು
ಮತ್ತೆ ಹೊಸತಾಗಿಸುವ ಬಯಕೆ
ಸ್ವಪ್ನದ ಸಂಕೋಲೆಯಲ್ಲಿ
ಸಾಗಿದ ಉತ್ಸವವ ತ್ಯಜಿಸಿ
ದಾರಿ ಮುಳ್ಳನು ಹಿಂದಿಕ್ಕಿದ
ಒಲವ ಜಾಣ್ಮೆಗೆ ಶುಭಾಶಯ!



ದಿನವೂ ಬಾರದ ಹುಣ್ಣಿಮೆ
ಕರಗುವುದನೂ ಕಲಿಸಿದಂತೆ
ಬಿಸಿಲಿನೊಂದಿಗೆ ಶಿಶಿರವನ್ನೂ
ಸಹಿಸಿದ ಭೂ ತಾಯಿ ನೀನು
ಬೆಚ್ಚಿ ಬೀಳುವ, ನೆಚ್ಚಿ ಬಾಳುವ
ಇಚ್ಛೆಗಳನೂ ಸುಟ್ಟು ಮರುಗುವ
ಮತ್ತೆ ಚಿಗುರುವ ಸ್ವಚ್ಛ ಪ್ರೇಮಕೆ
ತುಂಬು ಮನದ ಶುಭಾಶಯ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...