Wednesday, 2 January 2019

ಕಳೆದ ಕಾಲಿನ ಗೆಜ್ಜೆಯ ತುಣುಕು

ಕಳೆದ ಕಾಲಿನ ಗೆಜ್ಜೆಯ ತುಣುಕು
ಇನ್ನೂ ಗುನುಗಿದೆ ಎದೆಯಲ್ಲಿ
ಸೆಳೆದ ದೀಪವೇ ನಿನ್ನ ಬೆಳಕು
ಏಕೆ ಉಳಿಯದು ಇದ್ದಲ್ಲಿ?
ಹಬ್ಬಿ ಕುಳಿತ ಹಂಬಲ ಗರಿಯೇ...

ಚೂರು ತುಳುಕಿಸು ಕಾವನ್ನು
ಬಿರಿದು ಕಾಡೋ ಮೂಖ ಮುಗಿಲೇ
ಬೇಕಾ ಹೇಳು ಹೆಗಲಿನ್ನೂ!

ಸಪ್ಪೆ ಕಣ್ಣಿಗೆ ರೆಪ್ಪೆ ಸಿಕ್ಕಿದೆ

 ಮುಚ್ಚು ಮರೆಯಲಿ ಬಣ್ಣಗಳು
ಮಣ್ಣ ಮುಟ್ಟದ ಪಾದ ಏತಕೋ
ಎಣಿಸುತಿದೆ ಕಳೆದ ಇರುಳು
ಸಿಗದೇ ಹೋದರೆ ಸ್ವಪ್ನದ ಜಾಡು
ಮೊದಲ ಹೆಜ್ಜೆಯ ಗುರುತೆಲ್ಲಿ?
ಇಷ್ಟೇ ಸುಳ್ಳಿಗೆ ಅಷ್ಟೂ ಶಕ್ತಿಯ
ತುಂಬಿ ಹೊರಟರೆ ಉಳಿವೆಲಿ



ಮತ್ತೆ ಮೂಡುವ ಮೌನ ಜಾತ್ರೆಯ
ಸಾರ್ಥಕತೆಯೇ ನೀ ಕೇಳು
ನನ್ನ ಉಸಿರ ಏರು ಪಥದಿ
ನೀನೇ ಎಬ್ಬಿಸಿದೆ ಧೂಳು
ಕೊಲ್ಲಲಾಗದು ಹಿಂದೆ ನಿಂತು
ಎದೆಗೆ ಎದೆಯನು ಇರಿದು ಬಿಡು
ಗೆದ್ದೆನೆಂದು ಸದ್ದು ಮಾಡದೆ
ಬಿದ್ದ ಹೂವನು ಬಾಚಿ ಕೊಡು...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...