Wednesday 2 January 2019

ಎರಡು ಮೂರು ದಿನಗಳಿಂದ ನನಗೆ ಹೀಗೆ ಆಗಿದೆ


ಎರಡು ಮೂರು ದಿನಗಳಿಂದ ನನಗೆ ಹೀಗೆ ಆಗಿದೆ
ಮರೆಯದಂತೆ ನೀನೇ ನನ್ನ ಕನಸಿನಲ್ಲಿ ನೆಲೆಸಿದೆ
ಮುಂದೆ ನೀನು ಹಿಂದೆ ನಾನು ಏನೂ ಅರ್ಥವಾಗದೆ
ಮೊನ್ನೆವರೆಗೂ ಹೇಗೋ ಇದ್ದೆ ಇನ್ನು ಮುಂದೆ ಕಾದಿದೆ


ಸೊನ್ನೆ ಸುತ್ತುವಲ್ಲಿ ಎಷ್ಟು ಸೊಗಸು ನೀನು ಬಲ್ಲೆಯಾ
ಒಮ್ಮೆ ಬಂದು ನನ್ನ ಬಾನಿಗಷ್ಟೂ ತಾರೆ ತುಂಬೆಯಾ
ತಪ್ಪು ತಿಳಿಯದಂತೆ ಮೆಲ್ಲ ಗಲ್ಲವನ್ನು ತಾಕುತ
ನನ್ನ ತುಟಿಗೆ ನಿನ್ನ ತುಟಿಯ ಮಿಂಚ ಕೊಂಚ ನೀಡೆಯಾ?



ನಲ್ಮೆಯಲ್ಲಿ ತಾಳ್ಮೆ ಕಮ್ಮಿ ಅನ್ನುತಾರೆ ಎಲ್ಲರೂ
ತಾಳುವವರ ನೋವ ಅವರು ಹೇಗೆ ತಾನೆ ಬಲ್ಲರು
ಇಲ್ಲ ಸಲ್ಲದಂಥ ಮಾತು ವ್ಯರ್ಥ ನಮ್ಮ ಪ್ರೀತಿಗೆ
ಮೌನದಲ್ಲಿ ಮುಂದುವರಿದು ಕವಿಯಬೇಕು ಮಂಪರು



ಈಗ ತಾನೆ ಬಿದ್ದ ಕನಸಿನಲ್ಲಿ ಮಿಂದು ಬಂದೆನು
ಅಲ್ಲಿ ನೆಟ್ಟ ಹೂವ ಬಳ್ಳಿ ಕಸಿಯ ಮಾಡಿ ತಂದೆನು
ಭಾವವನ್ನು ನೆಚ್ಚಿ ತಾನು ಬಣ್ಣ ತಾಳುವಂಥದು
ನಿನ್ನ ನಿತ್ಯ ನಗೆಯ ಸಾರ ಎರೆದು ಸುಖಿಸು ಬೇರನು



ಮತ್ತೆ ಬರುವ ಹುಣ್ಣಿಮೆಗೆ ದಾರಿ ಮಾಡಿ ಕೊಟ್ಟರೆ
ತಪ್ಪದಂತೆ ಜೊನ್ನ ಕೊಡುವ ದೀಪ ಮುಗಿದ ರಾತ್ರಿಗೆ
ಎಲ್ಲವನ್ನೂ ಒಂದೇ ಮಾತಿನಲ್ಲಿ ಹೇಳಿ ಮುಗಿಸುವೆ
ಮುಗಿಸಬೇಡವೆನುವೆಯೆಂದೇ ಮರವು ಕೊಟ್ಟೆ ಚುಕ್ಕಿಗೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...