Wednesday, 2 January 2019

ಬಣ್ಣ ಬಳಿಯುತ


ಬಣ್ಣ ಬಳಿಯುತ ನಿನ್ನ ಕುರಿತು
ಹಾಡಿ ಹೊಗಳಿದ ಕವಿತೆಗೆ
ನೆನೆದ ಕುಂಚದ ಅಂಚು ಒಮ್ಮೆ
ಬಳುಕಿ ನಡುವನು ಬಿಡಿಸಿತು
ನೆರಳ ಘಮಲು ಸನಿಹ ಸುಳಿದು...

ಮೈಯ್ಯ ತಾಕಿ ಸಾಗುವಾಗ
ಯಾವ ರಾಗವೋ ತಿಳಿಯೆ ಆದರೆ
ಹಾಡುವುದನೂ ಕಲಿಸಿತು



ಕೊಚ್ಚಿ ಹೋದ ಆಸೆಗಳಿಗೆ
ಉಳಿದ ಆಸೆಗಳದ್ದೇ ಚಿಂತೆ
ನನ್ನ ಆಸೆ ನಿನ್ನ ಆಸೆ
ಎಲ್ಲ ಒಂದೆಡೆ ಕೂಡಿವೆ
ಕೂಡಿಕೆಯಲೂ ಬೇರ್ಪಡುವ
ಬೇರ್ಪಡಲು ಕೂಡಿಕೊಳುವ
ಹೃದಯದೊಳಗಿನ ನದಿಯ ದಡವ
ಊಹಿಸುತಲೇ ನಲಿಯುವೆ



ಉತ್ತರಿಸುವೆ ಸಿಕ್ಕ ಮೇಲೆ
ಸಿಗುವ ಮುನ್ನ ಪ್ರಶ್ನೆ ಕೇಳು
ಮೆತ್ತಿಕೊಳ್ಳುವೆ ನಿನ್ನ ಕನಸಿಗೆ
ಮತ್ತೇರಿದ ಇರುವೆಯಂತೆ
ನಂತರದ ಅಂತರವ ಹಂತವ
ಕೊಂಚ ಕೊಂಚವೇ ಕಳೆದುಕೊಂಡು
ನಿಂತುಕೊಳ್ಳುವ ಎದುರು-ಬದಿರು
ಮೋಹ ಕವಿದ ಮರುಳರಂತೆ



ಕರಗು ಒಮ್ಮೆ ನನ್ನ ಕಣ್ಣಲಿ
ಕೆನ್ನೆ ನಿನ್ನ ಬಯಸಿಕೊಂಡಿದೆ
ಮನದ ಹಿತ್ತಲ ಸಂಪಿಗೆಗೂ
ನಿನ್ನ ಸುತ್ತಲು ಕುಣಿವ ಹುರುಪು
ಮೊನ್ನೆ ನನ್ನ ಅಂಗಳದಲಿ
ಬೀಡು ಬಿಟ್ಟು ಹಾರಿ ಹೊರಟ
ಚಿಟ್ಟೆ ಗುರುತು ಮಾಸಿದಂತಿದೆ
ನೀನೇ ನಷ್ಟವ ತುಂಬಬೇಕು



ಸಲುಗೆಗೊಂದು ಹೆಸರನಿಡುವೆ
ಹೇಗೇ ಕೂಗಲು ಬರುವೆಯೆಂದು
ಮೌನದಲ್ಲೇ ಹೆಚ್ಚು ಗೆಲುವು
ಸಿಕ್ಕ ಖುಷಿಯಿದೆ ಆತ್ಮಕೆ
ಲೆಕ್ಕವಿಟ್ಟು ಮುಗಿದೇ ಹೋಗಿವೆ
ನಿತ್ಯ ಕನಸಿನ ನಮ್ಮ ಭೇಟಿ
ಚಿತ್ರವೊಂದನು ಬಿಡಿಸಿಕೊಳ್ಳುವೆ
ಪೂಜೆಗಲ್ಲದಿನ್ನೇತಕೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...