Wednesday, 2 January 2019

ಇರುಳ ದಾಟಿ ಬರಲು ನಿನಗೆ

ಇರುಳ ದಾಟಿ ಬರಲು ನಿನಗೆ
ಹೊಸತು ಕಥೆಯ ಹೊಸೆಯಬೇಕು
ನಿದ್ದೆಗಣ್ಣ ಕಟ್ಟುವಂಥ
ಪತ್ರವೊಂದ ವಹಿಸ ಬೇಕು
ಒಂದೂರಿನಿಂದ ಹಿಡಿದು...

ಅಲ್ಲಿಗೆ ಕಥೆ ಮುಗಿಯಿತೆಂದು
ನೂರು ಸುಳ್ಳು ದಾಖಲಿಸಿ
ನೀತಿ ರಸವ ತುಂಬಬೇಕು



ಒಮ್ಮೆ ಮಧ್ಯಂತರಕ್ಕೆ ತೂಕಡಿಕೆ
ಮತ್ತೊಮ್ಮೆ ಪಾತ್ರ ಪರಿಚಯಕ್ಕೂ ಮೊದಲೇ
ಒಮ್ಮೊಮ್ಮೆ ಹೊಸತನವ ಧಿಕ್ಕರಿಸಿ
ಹಳಸು ಕಥೆಗೆ ಮತ್ತೆ ತಲೆದೂಗುವೆ
ಎದೆಯ ತಟ್ಟಿ ತಾಳಕೆ
ಪರದೆ ಸರಿದು ನಾಟಕ
ಹೆದರಿಕೆಯಲೂ ನಗಿಸುತಾನೆ
ಮುದ್ದು ಗುಮ್ಮ ವಿಧೂಶಕ



ಕನಸಿನಲ್ಲಿ ಆ ಒಂದೂರಿನಲ್ಲಿ
ಯಾವ ಪಾತ್ರ ನಿನ್ನದು?
ನಿದ್ದೆಯಲ್ಲಿ ಒದ್ದಾಡುತ ಮೈ ಮುರಿವೆ
ದೊಂಬರಾಟ ಯಾವುದು?
ಮಂದಹಾಸ ಬೀರುತೀಯ
ಯುವರಾಣಿ ಕಂಡಳೇ?
ರಾಜ ಪಟ್ಟ ಏರೋ ಮೊದಲೇ
ಕಿರೀಟವನ್ನು ಕೊಳ್ಳಲೆ?



ಎಚ್ಚರಗೊಳ್ಳುವೆ ಬೆಚ್ಚುತ
ಯಾರು ದಾಳಿಗಿಳಿದರೋ!
ನಿನ್ನ ಕನಸಿನೊಳಗೆ ನಾನು
ಗಸ್ತು ತಿರುಗಿ ಕಾಯಲೇ?
ಹಸಿವ ಪೂರ್ತಿ ನೀಗಿಸದೆ
ಹಠಕೆ ಬಿದ್ದು ಮಲಗಿದೆ
ಹಾಲಾಡಿಗೆ ಅಸ್ತ್ರ ಇಗೋ
ಹೂಡು ಅಂಜಲಾರದೆ



ಮುಂಜಾವಿಗೆ ಎಷ್ಟು ದಣಿವು
ಪುಟ್ಟ ಕಣ್ಣು ಕಮರಿದೆ
ನೆನೆದ ಗೋಸಿಯಲ್ಲಿ ನಿನ್ನ
ಗಾಂಭೀರ್ಯಕೆ ನಮಿಸುವೆ
ಮಡಿಲಲಿರಿಸಿ ಬೆಚ್ಚಗಾದ
ಪಾದ ಕೆನ್ನೆಗೊರೆಸುತ
ಅಪ್ಪಿಕೊಂಡಾಡುವಾಗ
ದಣಿದ ಉಸಿರ ತಣಿಸುವೆ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...