Wednesday, 2 January 2019

ಹೆಗಲ ಏರಿದ ಚಿಂತೆ ಹಗುರಾಗುವಾಗ

ಹೆಗಲ ಏರಿದ ಚಿಂತೆ ಹಗುರಾಗುವಾಗ
ಮೊಗವ ಹಿಡಿಯುತ ನಿಂತೆ ಕಣ್ಣಿನೊಳಗೆ
ಬಿಗಿ ಹಿಡಿದ ಅಳುವೊಂದು ಎದೆಯಲ್ಲಿ ಇಣುಕಿದೆ
ತಡೆಯಿರದ ಕಂಬನಿ ಕಣ್ಣ ಹೊರಗೆ


ಮುತ್ತಿಡುವ ಕೆನ್ನೆಗೆ ಮೆತ್ತಿರುವ ಪಸೆಯನು
ಹುಸಿಗೊಳಿಸುವಂತೆ ಆಟವ ಕಟ್ಟುವೆ
ಎಲ್ಲ ಕಥೆ ಮೊದಲಾದದ್ದೊಂದಾನೊಂದೂರಿಂದ
ಊರಾಚೆಗೆ ನಿನ್ನ ಗಮನವಿಡುವೆ



ದೂರದ ಬೆಟ್ಟವು ನುಣ್ಣಗೆ ಕಂಡರೂ
ನಿನಗೋ ಕಾಲಡಿಯ ಮಣ್ಣ ವ್ಯಾಮೋಹ
ಬೆಲೆಗೆ ನಿಲುಕದ ಆಟಿಕೆ ಎದುರಿಟ್ಟರೂ
ಅಡುಗೆ ಬಟ್ಟಲು-ಸೌಟೆಡೆಗೆ ನಿನ್ನ ಸ್ನೇಹ



ಗೂಡು ಕಟ್ಟುವಾತುರಕ್ಕೆ ರೆಕ್ಕೆ ಕೊಟ್ಟವ
ಚಿಂತೆಯೆಂಬ ಸಂತೆಯಲ್ಲಿ ಬೇರ ನೆಟ್ಟವ
ಆಕಾಶದ ತುತ್ತ ತುದಿಗೆ ಬೆರಳ ಅಂಚಲೇ
ಅಂಚೆ ಕಳಿಸಿದಂತೆ ನಿಟ್ಟುಸಿರು ಬಿಟ್ಟವ



ನಿದ್ದೆಯಲ್ಲಿ ಒರಗಿತೊಂದು ಕನಸು ಮೆಲ್ಲಗೆ
ಉಸಿರ ಸವರಿದಂತೆ ಮೆಲ್ಲ ಮೃಧು ಮಲ್ಲಿಗೆ
ಆಕಳಿಕೆಯ ಬೀಳ್ಗೊಡುಗೆಗೆ ಒಂದು ಜೋಗುಳ
ಹೊದ್ದಿಸೋಕೆ ಚಂದ್ರ ಕಳಿಸಿಕೊಟ್ಟ ತಿಂಗಳ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...