Wednesday 2 January 2019

ಕೆನ್ನೆ ಮರೆಯಲಿ ಚುಕ್ಕಿಯೊಂದಿದೆ


ಕೆನ್ನೆ ಮರೆಯಲಿ ಚುಕ್ಕಿಯೊಂದಿದೆ
ಕುರುಳ ಸರಿಸುತ ಹುಡುಕಬೇಕಿದೆ
ಹುಡುಕಿ ಸಿಕ್ಕರೆ ಮುತ್ತ ನೀಡುವೆ
ಅಥವ ಸೋತರೆ ಮತ್ತೂ ಕಾಡುವೆ


ಎದೆಯ ಬಡಿತಕೆ ಮಾತು ಬಂದಿದೆ
ಪ್ರೀತಿಯಿಂದಲೇ ಹೃದಯ ಮಿಂದಿದೆ
ತಬ್ಬಿಕೊಂಡರೆ ತಬ್ಬಿಬ್ಬುಗೊಳ್ಳುವೆ
ಮೂಖ ಭಾವನೆ ಮಧುರವಲ್ಲವೇ?



ದೀಪವಿಲ್ಲದೆ ಕವಿದ ಕತ್ತಲು
ಮೈ ಮಿಂಚಿಗೆ ಬೆಳಕು ಸುತ್ತಲೂ
ಕೃಷ್ಣೆ ನನ್ನ ನೀ ಮುರಳಿ ಮಾಡಿದೆ
ಕೊಳಲು ನುಡಿಸದೆ ನಾದ ಹೊಮ್ಮಿದೆ



ಸ್ವಪ್ನದಲ್ಲಿಯೂ ನೀ ಗಸ್ತು ತಿರುಗುವೆ
ನಿನ್ನ ನೆರಳಿಗೆ ನೀನೇ ಬೆಚ್ಚುವೆ
ಸುಳ್ಳು ಹೇಳುವ ಕಣ್ಣಲ್ಲ ನಿನ್ನವು
ಹಿಡಿತವಿಲ್ಲದ ಹನಿ ಉರುಳಿ ಬಿಟ್ಟವು



ರಂಗು ರಂಗಿನ ನಿನ್ನ ಗುಂಗಲಿ
ತಂಗಿ ಬಂದೆನು ಇನ್ನೂ ಈಗಲೇ
ಬೆನ್ನ ಹಿಂದೆಯೇ ಬಿಂದಿ ಅಂಟಿದೆ
ಕೊಟ್ಟು ಹೋಗಲು ಬಂದೆ ಕೂಡಲೆ



ಬಿದ್ದ ಎಲೆಗಳು ಮತ್ತೆ ಚಿಗುರಿವೆ
ಪ್ರೇಮವೆಂಬುದೂ ಇಷ್ಟೇ ಅಲ್ಲವೇ?
ಕೊಟ್ಟು ಉತ್ತರ ನೀ ಮೌನ ದಾಟಿಸು
ಚೂರು ಕಾಯಿಸು ಮತ್ತೆ ತಣ್ಣಗಾಗಿಸು!!

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...