Wednesday, 2 January 2019

ಏಣಿಗೆ ತಲೆ ತಳಗಳೆಂಬುದಿಲ್ಲ

ಏಣಿಗೆ ತಲೆ ತಳಗಳೆಂಬುದಿಲ್ಲ
ಯಾವ ಕಡೆ ನೆಟ್ಟರದೇ ಕಾಲು
ಏರಿನಲ್ಲಿರುವುದೇ ತಲೆ
ಹೀಗೆ ಬೇಕಾದವರ ಬೇಡಿಕೆಗೆ ತಕ್ಕಂತೆ
ಪಲ್ಲಟಗೊಳ್ಳುವ ಏಣಿಗೆ ...

ನಡು ಮೆಟ್ಟಿಲುಗಳ ಲೆಕ್ಕವಿಲ್ಲ
ಆದಿ-ಅಂತ್ಯಗಳೇ ತಾನೆಂಬ ಅಹಂ ಆವರಿಸಿತ್ತು



ರಾತ್ರಿಯಿಡಿ ನಕ್ಷತ್ರಗಳ ಎಣಿಸುತ್ತ ಮೈ ಮರೆತಿದ್ದ
ಬಾನಿನಾಚೆಗಿನ ತುದಿ ಉಬ್ಬುತ್ತಲೇ
ನಡುವೆಲ್ಲೋ ಸೀಳು ಶಬ್ಧವಾಗಿದ್ದು ಬುಡಕ್ಕೆ ಬಡಿದು
ಒಂದೊಂದೇ ಹೆಜ್ಜೆ ನಿತ್ರಾಣಗೊಂಡು ಸೋತವು.
ಬಿದಿರಿಗೆ ಮುಪ್ಪು ದಾಟಿ ಮತ್ತೊಂದು ಮುಪ್ಪು
ಇತ್ತ ಕಾಲುಗಳು ಮಣ್ಣು ಮುಕ್ಕುತ್ತಾ ಬಿಕ್ಕುತ್ತಾ..



ಬೆಳಕು ಒಂದೊಂದೇ ಹೆಜ್ಜೆಯಿಟ್ಟು
ನೇಸರನ ನೆತ್ತಿಯ ಮೇಲೆ ತಂದಿರಿಸಿ
ರಾತ್ರಿ ಉಬ್ಬಿದೆದೆಯ ಕಮರಿಸುತ್ತಲೇ
ಮತ್ತೊಂದು ಸೀಳು
ಹೀಗೆ ಹತ್ತಾರು ಒಂದಾಗಿ ಜೊತೆಯಲ್ಲಿ ಮುಂದಾಗಿ
ತಲೆ ತಳಗಳ ಒಂದು ಮಾಡಿದವು



ಮುಟ್ಟಿಸಿಕೊಂಡು, ಮೆಟ್ಟಿಸಿಕೊಂಡು
ಅದೆಷ್ಟೋ ಅಸ್ಪೃಶ್ಯ ಮನಸುಗಳ ಸೋಲಿಸಿದ್ದ
ಒಂದೊಂದೇ ದಾಟು ಉರುಳಿ ಬಿದ್ದು
ಅಲ್ಲಿಗೆ ಏಣಿಗೇಣಿಯೇ ಸಮವಾಗಿ
ಒಲೆಯೊಳಗೆ ಕಿಡಿಯಾಗಿ, ಧೂಪದಲ್ಲೊಂದಾಗಿ
ತಿಪ್ಪೆಯ ಕಣವಾಗಿ, ಮಣ್ಣಲ್ಲಿ ಗುಣವಾಗಿ...



ಬಿದಿರುಗಾಡಿನೊಳಗೆ ವಿವಿಧ ಗಾತ್ರದ ಬಿದಿರು
ಏಣಿಯಾಗಿ, ಬುತ್ತಿಯಾಗಿ, ಬೀಸಣಿಕೆಯಾಗಿ
ಕೊಳಲಾಗಿ, ಗುಡಿಸಲಾಗಿ, ಕುಸುರಿಯಾಗಿ
ಮೇಲಾಗಿ, ಕೀಳಾಗಿ, ನಡುವೆಲ್ಲೋ ಮೌನವಾಗಿ
ಎಲ್ಲವೂ ಆಗಿ... ಕೊನೆಗೇನೂ ಇಲ್ಲವಾಗಿ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...