Monday, 30 June 2014

ಪಂಚರ್ ಅಂಗ್ಡಿ ಹುಡ್ಗ

ಜಿಡ್ಡು ಮುಖಕ್ಕೆ ಒಂದೇ ಬೊಗಸೆ ನೀರು
ನಿಮಿಷ ತಿಕ್ಕಿದರೆ ನೊರೆ ಹೊಮ್ಮುವ ಸೋಪು
ನಾರಿನಂಥ ಒರಟು ಅಂಗೈ
ಕತ್ತಿಗಾಗುವಷ್ಟು ನೀರಿಲ್ಲದ ತೂತು ಚೊಂಬು
ಬೆಳಗದ ಹಲ್ಲು, ಉಗುರಿನ ಕಪ್ಪು
ಮಾಸಲು ದೊಗಲೆ ಉಡುಪು
ಬ್ಲಾಕ್ ಅಂಡ್ ವೈಟ್ ಕಣ್ಣಿನಲಿ
ರಂಗು ರಂಗಿನ ಕನಸುಗಳ ಗುಂಗು!!

ಈ ಕಡೆ ಊಟದ ಬುತ್ತಿ ತೆಗೆದಂಗೆ
ಆ ಕಡೆ ಕಷ್ಟಮರ್ ಸೈಕಲ್ ಬೆಲ್ 
ಟ್ರಿಂಗ್... ಟ್ರಿಂಗ್... ಮೊಳಗಿಸಿ ಹೀಗಂದರು
"ಪಂಚರ್ ಆಗೈತೆ, ಓನರ್ ಇಲ್ವಾ"
"ಇಲ್ಲ ಅಣ್ಣ, ಊಟುಕ್ಕೋಗವ್ರೆ,
ಬಂದೆ ಇರಿ, ನಾನೇ ಸರಿ ಮಾಡ್ತೀನಿ"
ಡಬ್ಬಿ ಮುಚ್ಚಿಟ್ಟು ಹೋದೆ...

"ಏನೋ ಕುಳ್ಳ, ಹೊಸ್ಬಾನಾ?
ಸ್ಕೂಲಿಗ್ ಹೋಗೋ ಆಸೆ ಇಲ್ವಾ?
ಎಷ್ಟ್ ಕೊಡ್ತಾರೆ ಸಂಬ್ಳ?
ಬೀಡಿ ಸೇದ್ತೀಯಾ?
ಯಾವೂರು? ಎಲ್ಲಿ ಮನೆ?
ಒಬ್ನೆ ಮಗನಾ? ಅಕ್ಕಂದ್ರಾರಾರ ಔರ?
ಮಾತಾಡೋ!!".....

"ಆಯ್ತಣ್ಣ, ಹತ್ರುಪಾಯ್ ಕೊಡಿ"
ಮನ್ಸೆಲ್ಲಾ ಹೊಟ್ಟೆ ಮೇಲೆ;
ಕೈ ಮತ್ತೆ ಮಸಿಯಾಯ್ತು;
ಹತ್ರುಪಾಯ್ ಜೇಬಲ್ಲೈತೆ;
ಓನರ್ ಅಂಕಲ್ಗೆ ಗೊತ್ತಾದ್ರೆ?;
ಹೆಂಗೊತ್ತಾಯ್ತದೆ?;
ಹೆಂಗೋ ಗೊತ್ತಾಗ್ಬುಡ್ತದೆ!!

"ಊಟ ಯಾಕೋ ಹಳ್ಸೋಗದೆ,
ವಾಸ್ನೆ ಬತ್ತೈತ ನೋಡು"
"ನಾ ನಂಬಾಕಿಲ್ಲ, ಏನ್ ವಾಸ್ನೆ ಬತ್ತಾಯಿಲ್ಲ"
"ನೆಂಜ್ಕೊಳಾಕೆ ಏನಾರಾ ತರೊದಾ"
"ಬ್ಯಾಡ, ಮುಚ್ಕೊಂಡ್ ತಿನ್ನು"
ಅಔ.... ಅಔ.... (ತೇಗು)

ಮನಸೊಪ್ಪದೆ ಹತ್ರುಪಾಯನ್ನ
ಓನರ್ ಅಂಕಲ್ ಕೈಲಿಟ್ಟೆ;
ಜೇಬೆಲ್ಲಾ ಹುಡ್ಕಾಡಿ, "ಹ್ಮ್ ಹೋಗು" ಅಂದ್ರು;

ಪಕ್ದಲ್ಲೇ ಗೌರ್ಮೆಂಟ್ ಸ್ಕೂಲು;
ಮೂರೊಂದ್ಲಿ ಮೂರ್ ಮಗ್ಗಿ
ನಾನೂ ಕಲೀತಿದೀನಿ
ಒಂದು, ಎಳ್ಡು, ಮೂರು, ನಾಲ್ಕು...
"ಮುಚ್ಕೊಂಡ್ ಬೇಗ ಪಂಚರ್ ಹಾಕೋ"...

                                             -- ರತ್ನಸುತ

ಕೈ ಕೊಟ್ಟ ಮುಂಗಾರು

ಸಣ್ಣ ಮಳೆಯೊಂದು
ಹೀಗೆ ಬಂದು, ಹಾಗೆ ಹೋಯಿತು
ಕೋಳಿ ತಲೆ ಒದರಲೂ ಇಲ್ಲ
ಮೇಕೆ ಅರಚಿಕೊಳ್ಳಲೂ ಇಲ್ಲ
ಯಾವ ಜಾಡ ಸೀಮೆ ಗರಿಕೆಯಲ್ಲೂ
ಕಿಂಚಿಷ್ಟೂ ಉತ್ಸಾಹ ಕಂಡಿಲ್ಲ;
ಆಕಾಶ ಈವರೆಗೆ ಕಲಿಸಿದ ಪಾಠ
ಸಂಪನ್ನವಾದಂತಾಯಿತು!!

ತಿಂಗಳ ಹಿಂದೆ ಸಗಣಿ ಸಾರಿಸಿದ
ಮೊಗಸಾಲೆಯ ಅಂಗಳ
ಮತೊಂದು ಹಬ್ಬಕ್ಕೂ ಲಾಯಕ್ಕಾಗಿ
ಬರೆ ರಂಗೋಲಿ ಪುಡಿ ಹೆಣೆದುಕೊಂಡರಾಯ್ತು;
ಪಕ್ಕದ ವಟಾರದಲ್ಲಾರೋ
ಕೊಡೆ ತರಲೆಂದು ಮನೆಗೆ ಓಡಿ
ಎಡವಿ ತಲೆ ಪೆಟ್ಟಾಯಿತಂತೆ;
ಇರದ ತಲೆಗೆ ಏನಾದರೇನಂತೆ!!

ಹುಸಿ ಮಿಂಚು, ಗುಡುಗ ಹರಿಸಿ
ಇಲ್ಲಲ್ಲದಿದ್ದರೂ ಮತ್ತೇಲ್ಲೋ ಸುರಿದ
ಸೂಚನೆಯ ನಿರಾಳತೆ ಕೊಟ್ಟು
ಬಿರಿದ ಭೂಮಿಯ ಬಾಯಿಗೆ ಎಳ್ಳು ನೀರು;
ಗಾಳಿ ಬೇಸಿದ ದಿಕ್ಕ ಹಿಡಿದು
ಅಪ್ಪ ಮತ್ತಾರಿಗೋ ಫೋನು ಹಚ್ಚುತ್ತಾರೆ
"ಅಲ್ಲೇನಾರಾ ಮಳೆ ಬಂದದಾ?"
ಇನ್ಯಾರದ್ದೋ ಫೋನು, ಅದೇ ಪ್ರಶ್ನೆ
ಅಪ್ಪನ ಪೆಚ್ಚು ಮೋರೆಯ ಮಿಶ್ರ ಕಲೆಗಳು!!

ಇಗೋ-ಅಗೋ ಎಂದು
ಸತಾಯಿಸಿ ಪಥ ಬದಲಿಸುವ
ಕರಿ ಮೋಡಗಳ ಸವಾರ
ಕಂಠ ಪೂರ್ತಿ ಕುಡಿದೇ ಇರಬೇಕು;
ಒಮ್ಮೆಯಾದರೂ ಸಿಗಬೇಕವ
ಊರಾಚೆ ಸೇಂದಿ-ಸಾರಾಯಿ ದುಖಾನು ಬಳಿ
ಚಿಲ್ಲರೆ ಕಾಸಿಗೆ ಕೈಯೊಡ್ಡಿ;
ಚಳಿ ಬಿಡಿಸೋಕೆ ತುದಿಗಾಲೂ ತಯಾರಿದೆ!!

ಮುಂಗಾರಿನ ಸಿಂಗಾರಕ್ಕೆ
ಹಸಿರುಡಬೇಕಿದ್ದ ಹೊಲಕ್ಕೂ
ಒಣ ಬಂಗಾರದ ಮೇಲೆ ಒಲವು;
ಬಿಸಿಲ ದಿಬ್ಬಣಕೆ ಮೈಯ್ಯೊಡ್ಡಿ
ಬುಡ ಕಾಯ್ದುಕೊಂಡ ಅಲ್ಪ ತೇವವ ಹೀರಿ
ಅಂಗಾತ ವಾಲಿದ ತೆನೆ
ಚಿರ ನಿದ್ರೆಗೆ ಜಾರುತ್ತಿದಂತೆ 
ಮತ್ತೊಂದು ಹುಸಿ ಮಿಂಚು!!

                            -- ರತ್ನಸುತ

ಶರ್ಮಿಷ್ಟೆ ನಾಚುತ್ತ ಹೀಗಂದಳೇ??

ಆತ ನನ್ನ ಬೆತ್ತಲಾಗಿಸಿ
ತಾನೂ ಬಯಲಾದ,
ಏನೂ ತೋಚದೆ ನಿಂತೆ;
ಸೂಚನೆಗಳ ಮೇಲೆ ಸೂಚನೆ
ಕೊಡುತ್ತಿದ್ದವನಲ್ಲೂ 
ತೀರದ ಗೊಂದಲ;
ಮೊದಮೊದಲು ಎಲ್ಲವೂ ಹೀಗೇ
ದೂರುಳಿದ ಆಯಸ್ಕಾಂತದಂತೆ!!

ಪ್ರಶ್ನಾರ್ಥಕ ಮುಗುಳು
ಗಮನಾರ್ಹ ಉತ್ಸುಕತೆ
ಸ್ವಾಭಿಮಾನಿ ತೋಳುಗಳಲ್ಲಿ
ನನ್ನ ಹಿಂಜರಿದೇ ಬಳಸಿದ ಪರಿ,
ಎಲ್ಲಕ್ಕೂ ರೂಪಕಗಳ ಹುಡುಕಿ
ಕವಿತೆ ಬರೆಯಬೇಕನಿಸುವಷ್ಟು
ನೀಳ ಬೆನ್ನ ಪೂರ 
ಬೆವರೋ-ಬೆವರು!!

ನನಗೇ ಕಾಣದ ನಿತಂಬದ
ಮೂಲೆ ಮೂಲೆಯ ಮಚ್ಚೆಗಳ
ಎಣಿಸಿಡುವಾತನಿಗೆ
ಆ ರಾತ್ರಿಯೇ ಬಹುಮಾನ;
ಹೆಸರಿನ್ನೂ ಥಟ್ಟನೆ ಹೊಳೆಯದ
ಆಪ್ತನಾದವನಿಗೆ
ಒಲೆಯ ಹಾಲು, ಹಿತ್ತಲ ಮಾವು
ಧೂಪದ ಘಮಲಿನ ಘಾಟು!!

ಯಾರೂ ತಲುಪದ ಆಳ
ಎಂದೂ ಕಾಣದ ತುದಿಯಾಚೆ-
ಕೊಂಡು ಹೋದ ಪೋರ
ಚಿತ್ತ ಚೋರ, ಮೋಜುಗಾರ;
ತನಗೂ ತೋಚದೆ ಹೆಸರು
ಸನ್ನೆಯಲ್ಲೇ ಗಿಲ್ಲುವಾತ,
ಒಮ್ಮೊಮ್ಮೆ ಮುದ್ದು ಹೆಸರನ್ನೂ
ಬರೆವಾತ!!

ಹಣೆ ಬೊಟ್ಟು ಕರಗಿಸುವಲ್ಲಿ
ಕರಗತನಾದ ನನ್ನವನು
ಎಲ್ಲಕ್ಕೂ ವಿಭಿನ್ನ, ವಿಶೇಷ,
ಇನ್ನು ವರ್ಣಿಸಲಾಗದ ಸನ್ನಿವೇಷ-
-ಗಳದೆಷ್ಟೋ ಮರೆತೆ;
ಕಣ್ಣು ಮುಚ್ಚಿ ತರೆದೊಡೆ ಅಲ್ಲಿ
ಜೋರು ಮಳೆ ಸುರಿದು 
ನಿಂತ ಅನುಭವ;

ಮೆಳೆ ನಿಂತ ಮೇಲೆ
ಎಲ್ಲವೂ ಮೊದಲಿನಂತೆ!!

                     -- ರತ್ನಸುತ

ಹಿತ್ತಲ ಮೌನ

ನಾಕವೆಂಬುದು ಹಿತ್ತಲ ಗುಡಿ
ನರಕ ವಾಸವಿರುವ ಬಿಡಾರ
ನೈಜ್ಯ ಬದುಕನು ಕಂಡದ್ದಿತ್ತಲು
ಸತ್ತಿತ್ತು ನಡುಮನೆಯ ಸಿಂಗಾರ!!

ಕಣ್ಣ ಕಂಬನಿಯ ಬಯಲಿಗೆಳೆದವು
ಗೋಡೆಗೊಪ್ಪುವ ನಿಲುವುಗನ್ನಡಿ
ಮಣ್ಣು ತಾ ಹುದುಗಿಸಿಕೊಂಡಿತು
ತಾಳಿತು ಈ ಗಂಟು ಮುಸುಡಿ!!

ತೊಗಲು ಗೊಂಬೆಗಳು ಮನೆಯ ತುಂಬ
ಮಲಗಗೊಡದ ಮೆತ್ತನೆಯ ಹಾಸಿಗೆ
ಹಿತ್ತಲ ಬೇಲಿಯ ಮುಳ್ಳಿಗೂ ಮನಸಿದೆ
ಉಚ್ಚೆಯ ಹುಯ್ದು ಬೆಳೆಸಿದ್ದೆ!!

ಊರಿಗೆ ಊರೇ ಬಡಿದುಕೊಳ್ಳುತಿರೆ
ಹಿತ್ತಲ ಗುಲಾಬಿ ನಕ್ಕಿತು ಸುಮ್ಮನೆ
ಉಳಿದದ್ದೆಲ್ಲವೂ ಬೇಡದ ಜಡತೆ
ತಿಪ್ಪೆಯ ಬುಡದಲಿ ನನ್ನ ಮನೆ!!

ಕವಿತೆಯ ಹೊತ್ತ ಹಾಳೆಗೆ ಸಿಕ್ಕಿತು
ಬೇಡದವರ ಎಡಗೈ ಶಾಸ್ತ್ರ
ನೆಲವ ಗುಡಿಸಿದ ಪೊರಕೆಯ ಪಾಲಿಗೆ
ತೃಣವಾಯಿತು ಚುಕ್ಕಿಯ ಚಿತ್ರ!!

ಅಂಗಳ ತುಳಸಿ ಕಟ್ಟೆಯ ಸುತ್ತ
ಕಳಶದ ಕಲುಶಿತ ನೀರ ಮಜ್ಜನ
ಹಿತ್ತಲ ಚಂಡು ಹೂವಿನ ಗಿಡಕೆ 
ಚೊಚ್ಚಲ ಹೂವ ಪ್ರಸವದ ಧ್ಯಾನ!!

ಹಿತ್ತಲ ಮದ್ದು ನಾನಾಗಿರುವೆ
ಬೆತ್ತಲ ಗುಣದ ಪರವಾಗಿ
ಕತ್ತಲ ಕೋಣೆಯ ಗೂಟದ ದೇವರ
ಛೇಡಿಸುವಾಟಕೂ ಮಿಗಿಲಾಗಿ!!

                               -- ರತ್ನಸುತ

ಗೆಳೆಯನ ಗುಂಗಲ್ಲಿ

ಗೆಳೆಯ ಬರುತಾನೆ
ಹೂ ಗುಚ್ಚವ ಹೊತ್ತು
ಕೈ ಹಿಡಿದು ಕೊಡುತಾನೆ
ಹಣೆಗೊಂದು ಮುತ್ತು

ಬಲು ದೂರ ನಡೆಸುತಾನೆ
ಕಣ್ಣಲಿ ಕಣ್ಣಿಟ್ಟು
ಕಣ್ಣಂಚನು ತಡವುತಾನೆ
ಬರವಸೆಯ ಕೊಟ್ಟು

ಗೆಳೆಯ ನಗುವಾಗೆಲ್ಲ
ಏಕೋ ಆತಂಕ
ಉಳಿಸಬಲ್ಲೆನೇ ನಗುವ
ಉಸಿರ ಕಡೆ ತನಕ?

ನೆರಳಲ್ಲಿ ಇರಿಸುತಾನೆ
ಇರುಸು ಮುರುಸು ನನಗೆ
ಮಾತೇ ಆಡದ ಚಂದ
ಸಂಭಾಷಣೆ ಕೊನೆಗೆ

ಗೆಳೆಯ ಕೊಡಿಸುವ ಸೀರೆ
ನನಗೇಕೋ ಸಿಗ್ಗು
ಅರಳು ಹೂವ ಬಳಸಲು
ಮತ್ತೊಮ್ಮೆ ಮೊಗ್ಗು

ಹೋಗಿ ಬರುವೆನು ಎಂದು
ಅಳಿಸುವಾತ ಗೆಳೆಯ
ಬಂದು ಹೋಗದ ಹಾಗೆ
ಎದೆಯಲ್ಲೇ ಇರೆಯಾ?

ಮತ್ತೆ ಬರುವನು ಆತ
ಹೊಸ ಹೂ-ನಗೆ ಹೊತ್ತು
ನಗಲಿಲ್ಲ ಅವನಷ್ಟು ನಾ
ಯಾವತ್ತೂ!!

ಮತ್ತೊಮ್ಮೆ ಕೊಡುತಾನೆ
ಬೊಗಸೆಯಷ್ಟು ಪ್ರೀತಿ
ನನ್ನಷ್ಟೇ ಇರಬಹುದೇ
ಅವನಲ್ಲೂ ಭೀತಿ?!!

               -- ರತ್ನಸುತ

"ದಿಲ್ ತೋ ಪಾಗಲ್ ಹೈ!!"

ಹೃದಯವೆಂಬ ನಾಕು ತಂತಿ
ತಂಬೂರಿಯೊಳಗಿಂದ
ಒಂದೊಂದು ಮೀಟುವಿಕೆಗೆ
ಒಂದೊಂದು ನಾದ!!

ಎಲ್ಲವನ್ನೂ ಕೂಡಿಸಿ 
ಒಮ್ಮೆಲೆ ತಡವಿಕೊಂಡರೆ
ಜಿಗಿದೆದ್ದ ಸದ್ದು
ಕ್ರಮೇಣ ಮಾಸುವುದು,
ಮತ್ತೆ ಮೀಟದ ಹೊರತು;

ಎಲ್ಲವನ್ನೂ ಬಿಗಿಸಿಡಬೇಕು;
ಯಾವೊಂದ ಸಡಿಲಿಸಿದರೂ
ಮನಸಿನ ಕಿವಿ ಅಪಶೃತಿಯ 
ಅರಿತುಕೊಳ್ಳುವ ಅಪಾಯವಿದೆ!!

ಒಂದೊಂದು ತಂತಿಗೂ
ಒಂದೊಂದು ಗಾತ್ರ
ಒಂದೊಂದು ಗಂಟು
ಒಂದೊಂದು ಸ್ಥಾಯಿ

ಅಡಿಗೊಂದು ಸ್ಥಿರತೆ
ಮುಡಿಗೊಂದು ಕೀಲಿ
ಕಂಪಿಸಲು ಸಜ್ಜು
ಗೆದ್ದ ರಮಣಿಯರ ಕೈಲಿ!!

ಯಾರೂ ಈವರೆಗೆ
ಸಂಯೋಜನೆಯಲೆನ್ನ
ಚಿತ್ತ ಸೂರೆಗೊಳುವ
ಜೀವ ರಾಗ ಬಿಡಿಸಿಲ್ಲ;
ಬಹುಶಃ ಸಹಕರಿಸದಿತ್ತೇನೋ
ಹಾಳು ಹೃದಯ?!!

ಕುದಿ ರಕ್ತ ಮಡುವಲ್ಲಿ
ಸದಾ ಮಿಂದ ತಾನು
ನಿತ್ರಾಣ ತಂಬೂರಿ;
ತುಕ್ಕು ಹಿಡಿದ ತಂತಿ
ತಲ್ಲಣಕೆ ಸಲ್ಲದಿರೆ
ರಕ್ತ ಚಲನೆಯನ್ನೇ
ಧಿಕ್ಕರಿಸಿ ಬಿಡಬಹುದು;
"ದಿಲ್ ತೋ ಪಾಗಲ್ ಹೈ!!"

ಇನ್ನು ಕಾಯಿಸುವುದು ಸಾಕು
ಬಂದೊಮ್ಮೆ ನೇವರಿಸು ನಲ್ಲೆ
ಸಾಯುವನಕ ಮಿಡಿಯುತಿರಲಿ
ಹುಚ್ಚು ಹೃದಯ
ಮತ್ತೆ ನೀ ಬರುವೆಯೆಂಬ
ಅಗಾಧ ಆಸೆಯಲ್ಲಿ!!

                           -- ರತ್ನಸುತ

ಗುಳ್ಳೆ ಪಟಾಕಿ (2)

ಎತ್ತಿ ಎದೆಗಪ್ಪುತಿರುವಂತೆ
ಕಿಸೆಗೆ ಕೈ ಹಾಕಿದವ
ಬೇಡದ್ದ ಚಲ್ಲುತ್ತ
ಬೇಕಾದ್ದ ಗೆಲ್ಲುತ್ತ
ಕೆಳಗಿಳಿಸು ಎಂಬಂತೆ
ಇದ್ದಲ್ಲೇ ನುಲಿವಾತ
ಹೇ ಬಾಲಕೃಷ್ಣ ನೀ
ಹೆಜ್ಜೆಯನ್ನಿಡುತಿರೆ!!

ಹಠದಲ್ಲಿ ನಿಸ್ಸೀಮ
ದಿನಕೊಂದು ಹೊಸ ಚಟ,
ಒದ್ದೆ ಚಡ್ಡಿಯ ಕಳಚಿ
ನೆಲ ಸಾರಿಸುವ ನೀ
ನಿದ್ದೆಯಲಿ ಬುದ್ಧನು
ಎದ್ದು ಬಿಟ್ಟರೆ ಗಾಂಧಿ
ಹಾಲು ಹಲ್ಲಿಗೆ ಬೇಡುತೀ
ಕಚ್ಚು ಬೆರಳ!!

ನಿನ್ನ ಹೊಟ್ಟೆಗೆ 
ನಿನ್ನದೇ ತುಂಟ ತಕರಾರು
ಕಲ್ಲು, ಮಣ್ಣು, ಚುಕ್ಕಿ
ಚಂದ್ರ ಆಟಿಕೆ ನಿನಗೆ
ಮನೆ ಗೋಳು ಸಾಕಾಗಿ
ಹೊರ ನಡೆವ ವೈರಾಗಿ
ಹೆಜ್ಜೆ ಹೆಜ್ಜೆಗೂ ತೊಡಕು
ಬಿದ್ದೆ ಕಡೆಗೆ!!

ಅತ್ತು ಒಂದಾಗಿಸುವೆ
ಭೂಮಿ ಆಕಾಶವ,
ಬೀಳಿಸಿದವರಿಗೊಂದು
ಲಾತ ಕೊಡುವರೆಗೆ;
ಯಾರೆಷ್ಟೇ ಮುದ್ದಾಡಿ
ಏನ ಕೊಡಿಸಿದರೂ
ಅಮ್ಮಳ ಹುಡುಕುವೆ
ಎಲ್ಲದರ ಕೊನೆಗೆ!!

ಕಲಿವುದಿಷ್ಟಿದೆ ಕಂದ
ಎಂದು ತಿದ್ದುವ ಮುನ್ನ
ಪ್ರತಿ ಗಳಿಗೆ ಹೊಸ ಕಲಿಕೆ
ಬಲು ಚತುರ ನೀನು;
ಅಪ್ಪ, ಅಮ್ಮ, ಅಜ್ಜಿ, ತಾತ,
ಮಾವ, ಅತ್ತೆ
ದೊಡ್ಡಪ್ಪ-ಅಮ್ಮ, ಚಿಕ್ಕಪ್ಪ-
ಅಮ್ಮಂದಿರು
ನೆನಪಿಡುವುದು ಬಲು ಕಷ್ಟ ಕಾಣೋ!!

ಅಂಗಾಲು ದೃಢವಾಗಿ
ಮೊಣಕಾಲು ಬಲಿತಂತೆ
ಎಲ್ಲೆಲ್ಲೂ ನಿನ್ನದೇ
ತೀಟೆ ಗುರುತು;
ಎಲ್ಲಿಯೂ ನಿಲ್ಲದ,
ಮನೆಯನ್ನೂ ಬೇಡದ 
ಪುಟ್ಟಪ್ಪ ತಾತನ ಬಯಕೆಯಂತೆ 
ನೀ ವಿಶ್ವ ಮಾನವನೇ?!!

                           -- ರತ್ನಸುತ

ಒಂದಿರುಳು ನಿನ್ನೊಡನೆ

ಕೈ ಕಟ್ಟಿ
ಮೈ ಮುಟ್ಟಗೊಡದೆ
ಕಣ್ಣಲ್ಲೇ ಕಾಮಿಸಿ
ಉತ್ತುಂಗದಮಲಲ್ಲಿ
ತೇಲಿಸುವ ನಿನ್ನ
ಪದಗಳಲಿ ಬಣ್ಣಿಪುದು
ಸುಲಭವೇನಲ್ಲ;
ಆದರೂ ಬಣ್ಣಿಸದೆ
ಉಳಿಗಾಲವಿಲ್ಲ!!

ಮಧುರಾತಿ ಮಧುರ
ಅಧರಾಮೃತದಿ ಪಸರಿಸುವೆ 
ಪದ ಪುಂಜವ
ಎದೆಯ ಮೇಲೆ ಪೂರ;
ಕಣ್ಮುಚ್ಚಿ ಬೆರಳಾಡಿಸುವೆ
ಮಾತ್ರವಷ್ಟೇ
ಹೊರತು ಪಡಿಸಿ
ಬೇರೆ ಯಾವ ತಿರುಳಿಲ್ಲ!!

ಕೋಮಲ ಕಾಂತಿ 
ಕಮಲೋತ್ಪತ್ತ ಕಮಲಿ
ರಮ್ಯ ಕೋಲಾಹಲದ
ಅಕ್ಷ ಹಾಲಾಹಲ;
ಗೊಲ್ಲ ಮುರಳಿ ಕೊಳಲ
ಉಸಿರ ಜೀವನ್ಮುಖಿ
ನಾದ ಹರಿವುದು 
ನಾನು ನುಡಿಸಬೇಕಿಲ್ಲ!!

ಇಹವೆಲ್ಲ ಪರವಾಗಿ
ನನ್ನೊಲವ ಪರವಾಗಿ
ನಾ ಪಡೆದ ವರದಂತೆ 
ನಿಜ ಸಂತಸ;
ಮುಂಬಾಗಿಲಲಿ ಚುಕ್ಕಿ
ಹೆಣೆದ ರೀಖೆಯ ಸೀಮೆ
ಬಣ್ಣ ಬಂಧನದಲ್ಲಿ
ಮೋಸವಿಲ್ಲ!!

ಕಾರಿರುಳ ಕತ್ತಲಲಿ
ಬೆಳಕಿನ ಹಬ್ಬ
ಕಪ್ಪು ಕಾಡಿಗೆ ಕೂಡ
ನವಿಲ ನಿಲುವು;
ತಿಳಿ ಗಾಳಿ ಬೀಸಿರಲು
ಪ್ರಣತಿ ಬಳುಕುವ ಹೊತ್ತು
ನಂದ ಬೆಳಕಿಗೆ ಯಾವ
ನಷ್ಟವಿಲ್ಲ!!

                 -- ರತ್ನಸುತ

ನಾನು ಹಿಂಗೇ... ಏನಿವಾಗ?!!

ಕಾದ ದಾರಿಗಳೆಲ್ಲ
ಕಾದ ಕಬ್ಬಿಣದಂತೆ
ಕಾಲು ಹಿಡಿದು 
ಕ್ಷಮೆಯಾಚಿಸುತ್ತಿರುವಾಗ
ಸೌಜನ್ಯ ತೋರಲೇ?
ನೋವಲ್ಲಿ ಚೀರಲೇ?
ಏನ ಮಾಡಲಿ
ತೋಚದಾಯಿತೀಗ!!

ಗಾಳಿ ಮಾತಿಗೆ ಕಿವಿಯ
ಹೊತ್ತು ಮೀರಿದ ಗತಿಯ
ತಡೆವ ಸಾಹಸದಲ್ಲಿ
ಸೋತ ಸುಣ್ಣವ ಸವಿದು;
ಯಾರೋ ಕಿವಿ ಹಿಂಡುತಲಿ
ಬೀರುವರು ಸಿಟ್ಟನ್ನು
ಪೋಲಿ ಚಿತ್ರಕೆ ನೋಟ
ಬೀರಿದಾಗ!!

ಅಪ್ಪ ತೋಟವ ಕಾದ
ಅಮ್ಮ ಬಸಿದಳು ಬೆವರು
ತಂಗಿ ತವರಿನ ಕನಸ
ಕಾಣುತಿಹಳು;
ನನ್ನೊಳಗಿನನ್ನಪ್ಪ
ಸೋಮಾರಿ ಸಿದ್ದಪ್ಪ 
ಚಿಂತೆ ಇಲ್ಲದೆ ಮಲಗು
ಅನ್ನುತಿಹನು!!

ಸೂರ್ಯನಿಗೆ ಕ್ಯಾಮಿಲ್ಲ
ಚಂದ್ರನಿಗೆ ತಲೆಯಿಲ್ಲ
ಒಂದೆಡೆಗೆ ಕೂತು
ಮಾತಾಡರವರು;
ಹಗಲಂತೆ, ಇರುಳಂತೆ
ನೆರಳಂತೆ, ಕನಸಂತೆ
ಎಲ್ಲವೂ ಬೇಕೆಂದು
ಯಾರು ಸತ್ತವರು?!!

ಗೋರಿ ತಲೆ ಲೆಕ್ಕಕ್ಕೆ
ಬದುಕಿದವರ ಕಳೆದೆ
ಏಸೋಂದು ಜನ ಇಲ್ಲಿ
ಬದುಕಿದವರು?!!
ಎಲ್ಲೆಲ್ಲೂ ಸಮಾನತೆಯ
ಕಾಣ ಬಯಸುವರಾರೂ
ಇಂಥ ವಿಶಯಕ್ಕೆ ಕೈ
ಹಾಕರವರು!!

ನಾಯಿಗಳು ಬೊಗಳುತವೆ
ಹೂವುಗಳು ಅರಳುತವೆ
ಅಳುವಿಗೆ ಐವತ್ತು ಗ್ರಾಂ
ಉಪ್ಪು ನೀರು;
ನಿಮ್ಮ ಲೆಕ್ಕಿಸುವಲ್ಲಿ
ನಾ ಯಾರೂ ಅಲ್ಲದವ
ನನ್ನ ಪ್ರಶ್ನಿಸುವುದಕೆ
ನೀವು ಯಾರು?!!

                  -- ರತ್ನಸುತ

Wednesday, 25 June 2014

ಚಂದ್ರ ಪ್ರಸ್ತ

ಕನಸಿನ ಚಂದಿರನು
ಮನಸಲ್ಲಿ ಮಣ್ಣಾದ
ಅಳಿಸು ಬಾರೆ ಸಖಿ
ಹಣೆಯ ತಿಲಕ;
ಗಾಜು ಬಳೆಯನ್ನೊಡೆದು
ಮೋಜು ಕದವ ಬಿಗಿದು
ಬಣ್ಣ ತೊಳೆದು ಮಾಡಿಸೊಂದು
ಜಳಕ!!

ಗುಣಿ ತೋಡಿದವರಾರೋ
ತಿಳಿದಿಲ್ಲ ಈ ತನಕ
ಕೊಡಬೇಕು ಬಕ್ಸೀಸು
ಮರೆಯದಂತೆ;
ಹಿಡಿಯಲ್ಲಿ ಹಿಡಿದಂಥ
ಮಣ್ಣನ್ನೂ ಕೇಳಿದೆ
ತಾನೂ ಕಣ್ಮುಚ್ಚಿ
ಗೊತ್ತಿಲ್ಲವಂತೆ!!

ಅಳುವಾಗ ಕಣ್ಣೊರೆಸಿ
ತಲೆಯ ನೇವರಿಸಿದರು
ಆಪ್ತವೆನಿಸಿತು ಅವರ
ಹಸ್ತ ಸ್ಪರ್ಶ;
ಚಂದಿರನೇ ಇರಬೇಕು
ಎದ್ದು ಬಂದಿರಬೇಕು
ಒಲವೊಪ್ಪಂದಕೆ
ನೂರು ವರ್ಷ!!

ಸಖಿ, ಎಲ್ಲಿ ನೆರಳಿಲ್ಲ?
ಬೆಳಕಲ್ಲಿ ನಾನೆಲ್ಲಿ?
ಹುಡುಕಾಡಲೇ ಬೇಕೆ
ನನ್ನ ನಾನು?
ಎಲ್ಲ ಹೊಂದಿರುವೆ ನಾ
ಆದರೂ ಏನಿಲ್ಲ
ನಾನೆಂಬುದು ಒಂದು
ಮಿಥ್ಯ ಬಾನು!!

ಎಷ್ಟು ಸಮಯ ಉರುಳಿ,
ಇನ್ನೆಷ್ಟು ಉಳಿದಿದೆ?
ಸುಡು ಬಿಸಿಲನು ನಾನು
ಸಹಿಸಲಾರೆ;
ಎದ್ದು ಬರಲೆನ್ನಿನಿಯ
ಮರು ಜೀವ ಪಡೆದಂತೆ
ಜೊನ್ನ ಖುಷಿಗೆ ದುಃಖ 
ಬಡಿಸಲಾರೆ!!

ಹಕ್ಕಿ ಹಾರುತ್ತಲಿವೆ
ಸಂಜೆ ಆಗಿರಬೇಕು
ಹೊತ್ತು ತಾ ಸಿಂಗಾರ
ತೊಡಿಸು ನನಗೆ;
ಈ ಇರುಳು ಉಣಬಡಿಸಿ
ನನ್ನನ್ನೇ ಒಪ್ಪಿಸುವೆ
ಚಂದಿರನು ಇದ್ದಲ್ಲೇ 
ಕರಗೋ ಹಾಗೆ!!

                -- ರತ್ನಸುತ

ಸ್ವಪ್ನ ಸ್ಖಲನ

ಒಂದೊಂದೇ ಪದ ಮುಟ್ಟಿ
ಮೈಲಿಗೆ ಆಗಿಸುವೆ
ಈಗಷ್ಟೇ ಮುಗಿಸಿದೆ ಮೈಥುನವನು;
ಪದ ಕಟ್ಟದ ಹೊರತು
ಒಣಗಿ ಮುಪ್ಪಾಗುವುದು
ಕೇಳಿ ಕೂರದೆ ಯಾವ ಕಾರಣವನು!!

ನುಲಿದಾಗ ನುಸುಳಿದವು
ತಿರುಳಿಲ್ಲದೆ ಬಲಿತು
ಹೊರಟವಾ ಗುಪ್ತಾಂಗವನ್ನು ಮೀರಿ;
ಇರುಳನ್ನು ಆವರಿಸಿ
ಕತ್ತಲೆಯ ನೇವರಿಸಿ
ಐಕ್ಯವಾದವು ಸ್ವಪ್ನ ಸ್ಖಲನ ಸೇರಿ!!

ಹಿಡಿಯಷ್ಟರ ಲೇಖನಿ
ಮುಗಿದ ಶಾಹಿ
ನೆಲ ಹಾಳೆ ಮೇಲೆಲ್ಲ ಮಸಿಯ ಛಾಯೆ;
ಸಾಗರದ ಅಲೆಯೊಂದು
ದಡ ಕಲ್ಲ ಅಪ್ಪಳಿಸಿ 
ತಲೆಯ ಒರೆಸಲು ಬೀಸು ಗಾಳಿ ಜಾಯೆ!!

ಮತ್ತೊಂದು ಸರತಿಗೆ
ಮತ್ತೊಮ್ಮೆ ಕಾಯುವುದು
ಆಗಾಗ ಹೊಳೆದವೋ ಸಣ್ಣ ಮೀನು;
ಗಾಳ ಸಣ್ಣದು ಚೂರು
ಬೀಸಿದರೂ ಬೀಳೊಲ್ಲ
ಒಣ ಮೀನಿಗುಸಿರನ್ನು ನೀಡಲೇನು?!!

ಬಟಾ ಬಯಲಿನ ಹೂವು
ಪಕ್ಕ ಉರಿಯದ ಹಣತೆ
ಎಣ್ಣೆ ಬತ್ತದ ಬಾವಿ ಬೆಳಕಿಗಲ್ಲ;
ಕೊರೆದು ನೋಡಿದೆ ಆಳ
ಕೊಳವೆಯೊಳಗಿಲ್ಲ ಜಲ
ಮಳೆಗಾಲ ಬರುವನಕ ಕಾಯಲಿಲ್ಲ!!

ಮೋಡ ಕೂಡುವ ಸಮಯ
ಭೂಮಿ ತೊಟ್ಟಳು ಬಳೆಯ
ಆಕಾಶಕೂ ಮತ್ತೆ ಸುರತ ಯೋಗ;
ತಣಿವು ತಟ್ಟಿದ ಗೋಡೆ
ಒಡಲ ಬಯಸಿದ ಕಾವು
ಮತ್ತೊಂದು ಕಾವ್ಯ ಸಸಿ ಮೊಳೆಯಿತಾಗ!!

ಅಲ್ಪಾಯುಷ್ಯ ಸಿರಿ
ಕಮರಿತುತ್ಸುಕತೆ ಗರಿ
ಗಂಡು ನವಿಲಿಗೆ ಈಗ ನಿತ್ರಾಣ ಪ್ರೀತಿ;
ನೆಲ ಚೂರು ಹಸಿಯಾಗಿ
ಹಾಳೆಯೊಳು ಮಸಿ ತಾಗಿ
ಸರ್ವ ಕಾರ್ಯಕೂ ಕಡೆಗೆ ವಿಶ್ರಾಂತಿ ಪಾಪ್ತಿ!!

                                         -- ರತ್ನಸುತ

ಹುಚ್ಚು ಅಭಿಮಾನ

ಬಂದವಳು ಬಂದಂತೆ
ಹಿಂದಿರುಗಿದೆ ಏನೋ 
ಮರೆತು ಬಂದವಳಂತೆ
ಏಕೆ ಹೀಗೆ?
ದೇವರಿಗೆ ಬೆಳಗಿದ
ಮಂಗಳ ಆರತಿಯು
ಕಣ್ಣಿಗೊತ್ತುವ ಮುನ್ನ
ನಂದ ಹಾಗೆ!!

ಏನನ್ನೋ ಹುಡುಕುತಿವೆ
ಆ ನಿನ್ನ ಕಣ್ಣುಗಳು
ನನ್ನನ್ನೇ ಅನ್ನಲದಕೇಕೆ
ದಿಗಿಲು?
ಈ ಮೊದಲು ಹೀಗೆಲ್ಲ
ಒದ್ದಾಡದವನು ನಾ
ಈ ನಡುವೆ ಹೀಗೇಕೆ
ಎದುರು ಸಿಗಲು!!

ನೆಪವೊಂದೇ ಸಾಕಲ್ಲ
ನೆನಪೆಲ್ಲ ಬೇಕಿಲ್ಲ
ಹೂ ಅಂದರೆ ಸಾಕು
ಹೃದಯ ನಿನದು;
ಬಲಗಾಲು ಒಲ್ಲದೆ
ಎಡಗಾಲೇ ಇಟ್ಟರೂ
ಒಳ ಬರುವಿಗೆ ಮನಸು
ಬೇಡ ಅನದು!!

ನೂರಾರು ಹೆಣ್ಣುಗಳು
ನಿನ್ನಂತೆ ತೋಚುವುದು
ನೀ ಅವರಲುಳಿಸಿದ
ಕಿಚ್ಚಿನಿಂದ;
ಮಿತಿ ಇಲ್ಲದವನಂತೆ 
ಅಲೆಯುತ್ತಲಿದ್ದವ
ಸರಿ ಹೋದೆ ನಿನ್ನೊಲವ
ಹುಚ್ಚಿನಿಂದ!!

ಬಾಗಿಲಲ್ಲ ಸ್ಥಳವು
ನಡುಮನೆಯ ಹಬ್ಬಕ್ಕೆ
ನೀನಾಗಬೇಕಲ್ಲ
ನೀಲಾಂಜನ;
ನಗುವುದ ಕಲಿಸಿಕೊಟ್ಟವರಾರು
ಈ ನಿನಗೆ
ಕಂಡೊಡನೆ ಪ್ರಾಣಕ್ಕೂ
ರೋಮಾಂಚನ!!

ಬಿಗುಮಾನ ಬಿಟ್ಟು ಬಾ
ಬಹುಮಾನ ಈ ಒಲವು
ಹೊತ್ತು ತರದಿರು ಜೊತೆಗೆ
ಅನುಮಾನವ;
ನೀನೇ ಮೆಚ್ಚುವೆ 
ಆಗ ಕಣ್ತುಂಬಿಕೊಳ್ಳುವೆ
ಕಂಡು ಎಲ್ಲೆಯ ಮೀರಿದ-
-ಭಿಮಾನವ!!

                   -- ರತ್ನಸುತ

ಜೀವ ಜೊತೆಗಿರದೆ

ದೀಪಕ್ಕೆ ಅಡ್ಡಲಾಗಿ ನಿಂತವಳ
ಬೆಳಕಿಗೇ ಅಡ್ಡಗಟ್ಟಿದವಳೆಂದು
ದೂರುತ್ತಿದ್ದಂತೆಯೇ 
ಯಾರೋ ಅತ್ತ ಸದ್ದು;
ಅವಳನ್ನೊಳಗೊಂಡ ಬೆಳಕಲ್ಲ,
ಬೆಳಕನ್ನೊಳಗೊಂಡ ಅವಳಲ್ಲ;
ಕತ್ತಲ ಮರೆಯ ಧೂಪದ್ದೇ ಇರಬೇಕು
ನಿತ್ರಾಣ ಮರುಕ!!

ಒಂದು ಕನಸ ಕಂಡೆ,
ಅಲ್ಲಿ ಹಸಿರ ಹಾದಿಯ ಸುತ್ತ
ಬರಡು ಭೂಮಿಯ ಬಿರುಕು;
ಅವಳ ಪಾದ ಸೋಂಕಿಗಾಗಿ
ಬಾಯ್ದೆರೆದ ಒಣ ಗರಿಕೆಯ ಬೇರು
ಅದು ನನ್ನ ಪೊಗರು;
ಕಾಲಡಿಯ ಜೀವಂತಿಕೆಯಿಂದ
ಅನೂಹ್ಯ ಚಿಗುರು!!

ಕೂತು ಕೇಳಿದಾಗ
ರೇಡಿಯೋ ಪೆಟ್ಟಿಗೆ ಉತ್ಸುಕ,
ಹಾಡಿತು ಇನ್ನೂ ಉಲ್ಲಾಸದಿಂದ;
ಕಂಪನಾಂಕ ತಪ್ಪಿಸಿ ಸಾಗಿತು
ಆಕೆಯುಟ್ಟ ಸೀರೆಯ ಪಲ್ಲು;
ಹುರುಳಿಲ್ಲದ ಬ್ಯಾಟರಿ,
ನಿಶಕ್ತ ಆಂಟೆನ,
ಆಕೆಯಿಲ್ಲದೆ ಎಲ್ಲೆಲ್ಲೂ ಕ್ಷೋಭೆ!!

ಗಡಿಯಾರದ ಮುಳ್ಳಿಗೂ,
ನೆನಪುಗಳ ಬೇಲಿಗೂ
ನನ್ನ ಇರಿದು, ಪರಚುವ ಆಸೆ
ಅತ್ತರೆ ತಾನೆ ಕೆನ್ನೆಗೆ ಬಯಲು?!!
ಅಳದೆ ಸುಮ್ಮನಿದ್ದ ಹನಿ
ಒಳಗೊಳಗೇ ಬಿಕ್ಕಿ
ಕಣ್ಣುಗಳೀಗ ತುಂಬಿದ
ತುಮುಲಗಳ ಜೋಡಿ ಪಾತ್ರೆ!!

ರಂಗೋಲಿ ಪುಡಿಯ ಬಟ್ಟಲೂ,
ಮದರಂಗಿ ಗಿಡದ ಸುತ್ತಲೂ 
ಇರುವೆಗಳ ಹಿಂಡು;
ಕೊನೆ ಬಾರಿ ಆಕೆ ಅಲ್ಲಿ 
ಅತ್ತು ಹೊರಟಿರಬೇಕು?!!
ನಿಲ್ಲುತ್ತೇನೆ ಸುಮ್ಮನೆ 
ಏನೂ ಅರಿಯದ ಕಂದಮ್ಮನಂತೆ
ನಂತರ ಚೀರಿ, ಚೀರಿ ಅತ್ತಂತೆ!!

                            -- ರತ್ನಸುತ

ಕನ್ನಡಕ ಕಣ್ಣಿಗೆ ದಶಕೋತ್ಸವ

ಕಣ್ಣ ಗುಡ್ಡೆಯ ಅಗಲಿಸುತ್ತಾರೆ
ಒಳಗಿನ ಮರ್ಮಗಳನ್ನರಿಯಲು,
ಎಷ್ಟು ನರಗಳು ಅಡ್ಡಗಟ್ಟಿವೆಯೋ
ಒಂದು ಸ್ಪಷ್ಟ ನೋಟಕ್ಕೆ?!!
ತಿಳಿಯಲು ಆಪ್ತಲ್ಮಾಲಜಿ ಓದಬೇಕು,
ನನಗಿಲ್ಲ ಪುರುಸೊತ್ತು, ತಾಳ್ಮೆ;
ಕನ್ನಡಿಯಲ್ಲಷ್ಟೇ ನೋಡಿಕೊಳ್ಳಬಲ್ಲೆ
ಆಚೀಚೆ ಹೊರಳಿಸಿ ಕಪ್ಪು ಗೋಳಿಗಳ!!

ನನ್ನ ದೃಷ್ಟಿಯಲ್ಲಿ ದೋಷವಿದೆ;
ರೆಟೀನ ಕೋನವನ್ನ ಸರಿ ಪಡಿಸಲಿಕ್ಕೆ
ದಪ್ಪನೆಯ ಗ್ಲಾಸು ಧರಿಸಬೇಕಂತೆ
ಒಂದೊಳ್ಳೆ ಸ್ಟೈಲ್ ಕನ್ನಡಕ ಕೊಂಡು
ಶೋಕಿ ಮಾಡಬೇಕು!!

ಅಯ್ಯೋ; ಫ್ರೆಂಡ್ಸ್ ಗೇಲಿ ಮಾಡ್ತಾರೇನೋ?
ಹುಡುಗೀರಂತೂ ಕಣ್ಣೆತ್ತಿ ಸಹ ನೋಡೋದಿಲ್ಲ!!
ಕಣ್ಪಕ್ಕ ಒತ್ತಡಿ ಕಲೆಗಳು ಉಳಿದು ಬಿಟ್ರೆ?
ಹೀಗೆ ನಾನಾ ಪ್ರಶ್ನೆಗಳು ತೆಲೆಯಲ್ಲಿ;
ಕಣ್ಣು ನೆಟ್ಟಗಿದ್ರೆ ತಾನೆ ಎಲ್ಲ ತಿಳಿಯೋದು?
ಬಂದಿದ್ದು ಬರಲಿ ಅನ್ನೋ ಸಮಾದಾನ ಕೊನೆಯಲ್ಲಿ!!

ವಿಜ್ಞಾನ ಚೂರು ಪಾರು
ರಿಫ್ಲೆಕ್ಷನ್, ರಿಫ್ರಾಕ್ಷನ್ ಮಣ್ಣು ಮಸಿ 
ಕಣ್ಣಿನ ಅನಾಟಮಿ ಗಿನಾಟಮಿಗಳ
ಪರಿಚಯ ಮಾಡಿಸಿದ್ರೂ
ಸಣ್ಣ ತುರಿಕೆ ಆದ್ರೂ ಡಾಕ್ಟ್ರು ನೆನ್ಪಾಗೋದು
ತಪ್ಪದೇ ಇರೋದು ಬೇಜಾರಿನ ಸಂಗತಿ!!

ಹೇಗೋ ಹಾಗೆ ಧೈರ್ಯ ಮಾಡಿ
ಕಣ್ಣಿಗೊಬ್ಬ ಕಾವಲುಗಾರನ ಇಟ್ಟು
ಇಂದಿಗೆ ಹತ್ತು ವರ್ಷ ದಾಟಿ
ದಶಕೋತ್ಸವ ಆಚರಣೆಯಲ್ಲಿದ್ದೇನೆ!!

ಲೇಜರ್ರು-ಗೀಜರ್ರು ಅಂತೇನೋ ಮಾಡಿ
ಕನ್ನಡ್ಕ ಮಾಯ ಮಾಡೋ ತಂತ್ರಜ್ಞಾನ ಬಂದಿದ್ರೂ
ಇಷ್ಟು ವರ್ಷ ಜೊತೆಗಿದ್ದೋನ್ನ ದೂರ ಮಾಡಿ
ಕಟುಕ ಅಂತ ಅನ್ನಿಸ್ಕೊಳ್ಳೋ ಮನ್ಸಿಲ್ಲ,
ಕಾಂಟಾಕ್ಟ್ ಲೆನ್ಸ್ ಮೆತ್ಕೊಳೋ ಧೈರ್ಯ ಇಲ್ಲ;
ಎಲ್ಲವೂ ನನ್ನ ಚಿತ್ತ!!

                                             -- ರತ್ನಸುತ

ಗಿಣಿ ಮತ್ತು ಕಣ್ಣೀರು

ಭವಿಷ್ಯ ನಿಡುಯುತ್ತೇನೆಂದ ಗಿಣಿ ಶಾಸ್ತ್ರದವನು
ನನ್ನ ಅಂಗೈಯ್ಯ ತನ್ನ ಅಂಗೈಯ್ಯಲಿ ಬಳಸಿ, ಸಾರಿಸಿ
ಕಣ್ಣ ಕಮರಿಸಿ ಮತ್ತೆ ಅರಳಿಸಿ
ರೇಖೆಗಳ ಬೆಂಬಿಡದಂತೆ ಜಾಲಾಡಿ
ಕೊನೆಗೊಮ್ಮೆ ನನ್ನ ಮುಖ ನೋಡುತ್ತಾನೆ,
ಕಣ್ತುಂಬ ರಾಶಿ ನೀರ ತುಂಬಿಸಿಕೊಂಡು;
ತಲೆ ಬಾಗಿಸಿ ಎರಡು ತೊಟ್ಟು ಬಿಟ್ಟು ಕೊಟ್ಟು
ಹಿಂದಿರುಗಿಸುತ್ತಿರುವಂತೆ ನನಗೂ ಅಳು ತರಿಸಿತು,
ಪಂಜರದ ಗಿಣಿ ವಿಲ-ವಿಲ ಒದ್ದಾಡುತ್ತಿತ್ತು!!

ಅವನ ಬಳಿ ಇದ್ದ ಕಟ್ಟಿನ ರಟ್ಟಿನ ಹಾಳೆಗಳು
ನನಗೆ ಯಾವ ದಿಕ್ಸೂಚನೆಯನ್ನೂ ನೀಡದೆ
ಗಾಳಿಯಲ್ಲಿ ಹಾರಿ ಹೋಗುತ್ತಿದ್ದಂತೆ
ಕಣ್ಣೊರೆಸಿಕೊಂಡು ಒಂದೊಂದನ್ನೇ ಹೆಕ್ಕಿ
ಮತ್ತೆ ಕಟ್ಟಿಕೊಳ್ಳುತ್ತ ಹರಿದ ಚಾಪೆಯ ಮೇಲೆ
ಅಂಡೂರಿ ಕೂರುವಾಗಲೇ ಗಮನಿಸಿದ್ದು
ನನಗೆ ಆತ ಹಾಸಿದ್ದು ಮೆತ್ತನೆಯ ಹೊಚ್ಚ ಹೊಸ ಚಾಪೆ!!

ಮೂಖನಾದವನ ಮೌನವೂ ದುಃಖ ಸಾರುತ್ತಿತ್ತು
ಗಿಣಿ ಎಚ್ಚೆತ್ತುಕೊಂಡು ಹೇಳಲಾರಂಬಿಸಿತು
ನಿರ್ಗತಿಕ ಯಜಮಾನ ದಿನ ರಾತ್ರಿ ತನಗೆ
ರಹಸ್ಯವಾಗಿ ಪಿಸುಗುಡುತ್ತಿದ್ದ ಕಥೆಯ

"ಮೂವತ್ತು ವರ್ಷಗಳ ಹಿಂದಿನ ಮಾತು
ಇದೇ ಸಂತೆ ಬೀದಿಯಲ್ಲಿ ಕಣೆಯಾದ ತನ್ನ ತಮ್ಮ
ನೀಲಿ ಚಡ್ಡಿ, ಹಳದಿ ಅಂಗಿ ತೊಟ್ಟಿದ್ದು
ಇನ್ನೂ ಕಣ್ಣಿಗೆ ಕಟ್ಟಿದಂತಿದ್ದುದ
ಮರೆಯಲೆಂದೇ ದಿನಾಲೂ ಕುಡಿವುದು
ತಾನೊಬ್ಬ ಪಾಪ್ಪಿಯೆಂದು ನುಡಿವುದು"

ನನ್ನಲ್ಲಿ ತನ್ನ ತಮ್ಮನ ಕಂಡನಾ?
ಇಲ್ಲ ನಾನೇ ಇವನ ತಮ್ಮನಾ?
ಭವಿಷ್ಯವ ತಿಳಿವುದ ಬಿಟ್ಟು
ಕಿಸೆಯಿಂದ ನೂರು ರೂಗಳ 
ಎರಡು ನೋಟನ್ನ ತನ್ನ ಕೈಲಿಟ್ಟು
ಒದ್ದೆ ಕಣ್ಣಲ್ಲೇ ಎದ್ದು ಹೋದೆ!!

ತಿಂಗಳು ಕಳೆಯಿತು 
ಆ ಬೀದಿ ಕಡೆ ತಲೆ ಹಾಕಲೂ ಪುರುಸೊತ್ತಿರಲಿಲ್ಲ;
ಅಂದೊಮ್ಮೆ ದೇವರು ಕೊಟ್ಟ ಅಣ್ಣನ
ಕಾಣಲೆಂದು ಆ ಕಡೆ ಗಾಡಿ ಹೊರಡಿಸಿದೆ
ಅದೇ ಚಾಪೆ, ಅದೇ ಗಿಣಿ, ಅದೇ ಅಣ್ಣ
ತಮ್ಮನ ಸ್ಥಾನದಲ್ಲಿ ಬೇರಾರೋ ಬಿಕ್ಕುತ್ತಿದ್ದ!!

                                       -- ರತ್ನಸುತ

ಬೋಳು ಮರದ ಕೆಳಗೆ

ಚಳಿಗಾಲದ ಎಲೆಯ ಪಾಡನ್ನು ಊಹಿಸಲು
ತಿಳಿ ಗಾಳಿಯಲ್ಲೊಮ್ಮೆ ನಿಂತು ಬರುವ
ಒಂದನೊಂದು ತಬ್ಬಿ ಉದುರಿಕೊಂಡವುಗಳ
ನಾನೊಂದು ನೀನೊಂದು ಜೋಡಿಸಿಡುವ

ಮಾತಾಡದ ಜಾಡ ಇಜ್ಜೋಡು ಹೆಜ್ಜೆಗಳು
ಇಟ್ಟಲ್ಲಿ ಇಟ್ಟಂತೆ ನುಡಿಸುತಿತ್ತು
ನಡು ನಡುವೆ ನಿನದೊಂದು ಉಸಿರಾಟದ ತೊಡಕು
ಬಿಕ್ಕಳಿಕೆಯ ಸದ್ದನೆಬ್ಬಿಸಿತ್ತು!!

ಒಬ್ಬೊಬ್ಬರಾಗಿ ನಾವಿಬ್ಬರೇ ಆದಾಗ
ತಬ್ಬಿಬ್ಬುಗೊಂಡರೂ ಇಲ್ಲ ತಪ್ಪು
ಕೊಬ್ಬಿದ ಕಬ್ಬಕ್ಕೆ ತಬ್ಬುವ ಪರಿಹಾರ
ಮುನ್ನುಗ್ಗು ಅನ್ನುತಿದೆ ಜೊನ್ನ ಕಪ್ಪು!!

ಬೆವರೆಂಬ ಹಣೆಪಟ್ಟಿ ಹೊತ್ತು ನಿಂತೆವು ಅಲ್ಲಿ
ಸತ್ತ ಮೌನಕೆ ಶಾಂತಿ ಕೋರುವಾಗ
ಮೋಡ ಹಿಂದಿನ ಕಳ್ಳ ಆಗಷ್ಟೇ ಎದ್ದಂತೆ ಆಕಳಿಸಿದ 
ಕೈಯ್ಯ ಹಿಡಿವ ಬೇಗ!!

ಮರದಡಿಯ ಮಬ್ಬಲ್ಲಿ ಬಿಂಬವಾದವು ಕಣ್ಣು
ಅದುರಿದ ಅಧರಗಳ ಗದರಿಕೊಂಡು
ಮರದ ಮೇಗಡೆ ತೂಗುತಿದ್ದ ಬಾವಲಿ ತಾನು
ಹಾರಿ ಹೊರಟಿತು ರೆಕ್ಕೆ ಒದರಿಕೊಂಡು!!

ಬೆಳಕು ಮೂಡುವ ಮುನ್ನ ಮರವೇ ಬೋಳಾಯಿತು
ಹೊಸ ಚಿಗುರಿನ ಸಿಗ್ಗು ಕೇಳಿಸಿತ್ತು
ಉದುರಿದೆಲೆಯಡಿಯಲ್ಲಿ ಗುರುತಾದ ನಾವುಗಳು
ನಿದ್ದೆ ಮಾಡದೆ ಎದ್ದು ಹೊರಡೋ ಹೊತ್ತು!!

                                                 -- ರತ್ನಸುತ

ಹೀಗೊಂದು ಕಿಚ್ಚು

ಕಣ್ಣಂಚಲಿ ಕಾಡ್ಗಿಚ್ಚನು
ಹೊತ್ತು ತಂದ ಅವಳೆದುರು
ನಾ ಹಪ್ಪಳವಾದ ತೋರಣ;
ಆಕೆ ಸಿಡುಕಿ ಮಾತನಾಡುವಾಗ
ನಸು ನಕ್ಕರದು ದಾರುಣ!!

ಕೋಪ ಕೆನ್ನೆಯ ಮೇಲೆ
ತೊಟ್ಟು ನೀರ ಚೆಲ್ಲಿದಾಗ
ಅಬ್ಬಬ್ಬ್ಬಾ, ಚುರ್ರೆಂದು ಹಿಂಗಿತು!!
ಇನ್ನು ತುಟಿ ಮೆತ್ತುವುದು ಬೇಡೆಂದು
ದೂರುಳಿವುದೇ ಒಲಿತು!!

ಕಿವಿ ಆಲೆಯ ಮೇಲೆ
ಕೊತ, ಕೊತ ಕುದಿಯುವಂತೆ 
ಕೆಂಪು ರಂಗಿನ ಬೆಲ್ಲ ಪಾಕ,
ಶಾಖಕ್ಕೆ ಸುರುಳಿಕೊಂಡು
ಮುದುಡಿ ಕೂತ ಕುರುಳು ಪಕ್ಕ!!

ಉಬ್ಬು ಏರಲು ಹಣೆಯ ದಿಬ್ಬದ
ಒಂಟಿ ತಾರೆಯು ಮಡತೆಯಲ್ಲಿ;
ಕಣ್ಣ ಸುತ್ತಲ ಮಸಿಯ ಕಾಡಿಗೆ
ಮಿಥ್ಯೆ ಕಾಲಲಿ ಜಾರಿತಲ್ಲಿ!!

ತಬ್ಬುವ ಮನ ಹಿಂದೆ ಅವಿತಿದೆ
ಒಂದೊಂದನೇ ಇರಿದಳಾಕೆ;
ಉಗುರು ಬೆಚ್ಚಗೆ ಉಳಿಯಿತಲ್ಲಿ
ಪರಚುವಾಟದಿ ಗೆಲ್ಲಲಿಕ್ಕೆ!!

                          -- ರತ್ನಸುತ

ಜೋಡು

ಕೊಂಡ ಚಪ್ಪಲಿಗಳು
ಉಂಗುಟವ ಕಚ್ಚಿದವು
ಮೆಟ್ಟಿ ತುಳಿದ ವೇಳೆ
ಹಸ್ತ ಬಿಗಿದು;
ಎಣ್ಣೆ ಸವರಲು ತಾನು
ಕಚ್ಚಿದೆಡೆಯಲಿ ಚೂರು
ಬಿಚ್ಚಿಕೊಳ್ಳುವುದಲ್ಲಿ
ಕೈಯ್ಯ ಮುಗಿದು!!

ತನ್ನ ಹೊಲೆದವನು
ತೊಡೆ ಕೊಟ್ಟ ಚಮ್ಮಾರ
ಕಣ್ಣಿಗೊತ್ತಿದ ಅಂದು
ಲಕ್ಷ್ಮಿಯೆಂದು;
ಕೊಂಡವನು ಕಿಸಿಯಿಂದ
ಕಂತಲೊಂದನು ಕಿತ್ತು
ಕಣ್ಣರಳಿಸಿದ ಕಾಲ
ನೋಡಿಕೊಂಡು!!

ಬಿಸಿಗಾಲ ಮುಗಿಸುತ್ತ
ಮಳೆಯಲ್ಲಿ ನೆನೆಸುತ್ತ
ಕಲ್ಲು ಮುಳ್ಳಾದರೂ
ಮುಲಾಜೇ ಇಲ್ಲ;
ತಳ ಚೂರು ಹರಿದಿತ್ತು
ಮೇಲ್ನೋಟ ಕೆಡದಂತೆ
ನಾಯಿ ಕಚ್ಚಲು ಯಾವ
ಮದ್ದೂ ಇಲ್ಲ!!

ತಂಪು ಏ.ಸಿ ಕೆಳಗೆ
ಮಂಪರಲಿ ಕಣ್ಬಿಡಲು
ಕಣ್ಣ ಕುಕ್ಕುವ ಅಂದ
ನವಿರು ಪಾದ;
ಬಿಗಿಯಾದರದು ಪಾಪ
ಮಿಗಿಲಾಗಿ ತುಸು ಕೋಪ
ಆಕೆ ಬೇಡನುವಾಗ
ಆರ್ತನಾದ!!

ತೊಡುವಾಗ ತೊಟ್ಟದ್ದು
ಬಿಡುವಾಗ ಬಿಟ್ಟದ್ದು
ಎರಡಕ್ಕೂ ಸಾಮ್ಯತೆ
ಇಲ್ಲವಂತೆ;
ಒಂದು ಹೋದರೆ ತನ್ನ
ಜೋಡಿ ಹೋದಂತೆ
ಮನೆ ಮೂಲೆ ಕಸವಾದರಿಲ್ಲ
ಚಿಂತೆ!!

ಸೀರೆಯಡಿ ಸೆರೆಯಾಗಿ
ಸೂರೆಗೊಳ್ಳುವ ತನ್ನ
ಯಾರು ಮೆಟ್ಟುವರೆಂಬ 
ಅರಿವು ಉಂಟು;
ಪಂಚೆ ಉಟ್ಟವರಲ್ಲಿ
ಬಂಟ ತಾ ಕಾಣುವನು
ಮನೆ ಹೊರಗೆ ಮುರಿಯದ
ದಿಟ್ಟ ನಂಟು!!

ದೇವರಿಗೆ ಬೇಡಾಗಿ
ಹಸಿದವರ ಕೂಳಾಗಿ
ಕಾವಲಲಿ ಉಳಿವುದು
ಎಂಥ ಬಾಳು;
ಸೋಕುವ ಪ್ರತಿ ಬಾರಿ
ನೋವನ್ನು ಸಹಿಸುವುದು
ಕ್ಷಮೆಯಾಚಿಸಲೇ ಬೇಕು
ದುಷ್ಟ ಕಾಲು!!

                 -- ರತ್ನಸುತ

ಕಣ್ಣಾಚೆ ಹೊರಟವಳೇ

ಒಮ್ಮೆಲೆ ಮಿಂಚಿನ ಪ್ರವಾಹ
ಕೆರಳ ಬಲ್ಲ ಮೋಡಗಳಾವೂ ಇರದಾಗಿತ್ತು,
ಇದ್ದಕ್ಕಿದ್ದಂತೆ ಒಂದು ಗುಡುಗು
ಆಕಾಶ ನಿಖರ ನೀಲಿಯ ತೊಟ್ಟಿತ್ತು,
ಸಣ್ಣ ಸೋನೆಯ ಆರಂಭ
ತಲೆ ಎತ್ತಿ ನೋಡಿದರೆ ಬಿಸಿಲೋ ಬಿಸಿಲು,
ಕೆನ್ನೆ ಒದ್ದೆ-ಮುದ್ದೆಯಾಗಿತ್ತು
ಮಳೆಯಲ್ಲದು, ಕಣ್ಗಡಲ ವಿರಹ ಗೀತೆ!!

ಅಲೆಗಳ ಮೇಲೆ ನಿನ್ನ ನೆನಪ ಪಯಣ,
ಒಮ್ಮೊಮ್ಮೆ ಬಿರುಸಾದರೆ ಕೆಲವೊಮ್ಮೆ ಪ್ರಶಾಂತ;
ಲಂಗರು ಮರೆತು ಬಂದಿರಬೇಕು ನೀನು,
ದಡ ಮುಟ್ಟಿದರೂ ನಿಲ್ಲದ ನೌಕೆ!!

ನೀನು ಒಂಟಿಯಾಗಿ ಬಿಕ್ಕಿದ್ದರ ಪರಿಣಾಮ
ನನ್ನ ಕಣ್ಣು ತೇವಗೊಂಡು ಕೆಂಪೆದ್ದಿತು
ನಿನ್ನ ಕೆನ್ನೆ ರಂಗಿಗೆ ಸೆಡ್ಡು ಹೊಡೆವಂತೆ;
ಕ್ಷಮಿಸು, ರಕ್ಷಣೆ ನೀಡುವಲ್ಲಿ ಸೋತಿದ್ದೇನೆ
ಜಾರು ಕಂಬನಿಗಳಿಗೆ!!

ಚೂರು ಚೂರೇ ಮುಕ್ತವಾಗುತ್ತಿರುವೆ
ಕಸುವಿಲ್ಲದ ರೆಕ್ಕೆ ಬಡಿದ ಹಕ್ಕಿಯಂತೆ;
ಕನಿಷ್ಠ ನೆಮ್ಮದಿ ನೀಡದ ಕಣ್ಗಡಲು
ದಾರಾಳ ಆಕಾಶಕೆ ಬಿಟ್ಟುಗೊಡುತ್ತಿದೆ!!

ನೆನೆನೆನೆದೇ ಮರೆಯುವ ಪ್ರಯಾಸದ
ಬರಿದಾದ ಕಣ್ಗಳಲ್ಲಿ 
ಧೂಳು ಹಾರಿದರೂ ಹೊರ ದಬ್ಬುವಷ್ಟು
ನೀರು ಉಳಿದಿಲ್ಲ, ನೀನೂ ಉಳಿದಿಲ್ಲ!!

                                    -- ರತ್ನಸುತ

Thursday, 19 June 2014

ಮಳೆ ಶಾಸ್ತ್ರ

ಮುಗಿಲಿನ ಹೆಗಲ ಏರುತ ಬಂದ
ಚಂದಿರನೋ ಬಲು ನಾಜೂಕು
ಎರಡೂ ಕೈಗಳ ಮೇಲಕೆ ಏರಿಸಿ
ಜೋಡಿ ಕುದುರೆಯ ಬಂದೂಕು!!

ಮಳೆ ಸುರಿವಂತಿದೆ ಬೆಳದಿಂಗಳಿಗೂ
ಮೈ ಚಳಿ ಬಿಡಿಸುವ ಮಹದಾಸೆ
ಕರಿ ಮುಗಿಲಾಚೆಗೆ ಬೆಳ್ಮುಗಿಲೊಂದಿದೆ
ಚಿಗುರಿದ ಕರ್ರನೆ ಕುಡಿ ಮೀಸೆ!!

ರಾತ್ರಿಗೆ ಅರಳಿದ ಮೊಗ್ಗಿನ ಪರಿಮಳ
ಚಿಟ್ಟೆಯ ನಿದ್ದೆಯ ಕೆಡಿಸಿತ್ತು
ಒಣಗಲು ಬಿಟ್ಟ ಮಾಳಿಗೆ ಬಿರುಕಿಗೆ
ಮುಂದುವರೆದಂಥ ಕಸರತ್ತು!!

ಬೀದಿ ನಾಯಿಗೆ ರೊಟ್ಟಿಯ ಆಸೆ
ಹೆಚ್ಚಿಸುತ ಕೆಸರಿನ ಬಿಂಬ
ಸತ್ತ ಹೆಗ್ಗಣ ಕಾಗೆಯ ತೇಗಲಿ
ಉಂಡಿತ್ತು ಹೊಟ್ಟೆಯ ತುಂಬ!!

ಕರಿ ಕೊಡೆ ಕೆಳಗಡೆ ಬಿಳಿ ಕೆನ್ನೆಗಳು
ಕೈ ಬಳೆ, ಓಲೆ ಹೊಂದುತಲಿತ್ತು
ಕಣ್ಣಿನ ದರ್ಶನ ಪಡೆಯುವ ಸರತಿಗೆ
ಬರಗೆಟ್ಟ ನೋಟ ಕಾದಿತ್ತು!!

ಸಂಜೆಯ ಮೀರಿ ತೆಳು ಹನಿ ಪಸರಿಸಿ
ಬಂಜೆ ಭೂಮಿಯೂ ಫಲವಾಯ್ತು
ಆಕಳಿಕೆ ಕಣ್ಣಂಚಲಿ ಮೂಡಲು
ತೂಕಡಿಸಿ ತುಟಿ ಮಲಗಿತ್ತು!!

                         -- ರತ್ನಸುತ

ನನ್ನ ಹಾಡಿನ ಸುತ್ತ

ಹಾಡು ಹಾಡುವುದಂದರೆ
ಬರೆ ಪದಗಳ ಪೋಣಿಸಿ
ಶಬ್ಧವನ್ನಾಲಿಸಿ, ಕೂಡಿಸಿ
ರಾಗದಲಿ ತೇಲಿಸಿ
ತಾಳಕ್ಕೆ ಕೂರಿಸಿ
ಮನಸಾಯಿಚ್ಛೆ ಚೀರುವುದಲ್ಲ;
ಮೌನವೂ ಹಾಡಾಗಬಲ್ಲದು
ಭಾವನೆಗಳು ಬೆರೆತಾಗ;

ಎದೆ ಬಡಿತದ ತಾಳದೊಡನೆ
ಸಣ್ಣ ಸಂಧಾನ ನಡೆಸಿ
ನರನಾಡಿಗಳ ವೃಂದದೊಡನೆ
ಮನಸು ಹಾಡಿಕೊಂಡರೆ
ಶ್ರವಣಕ್ಕೆ ಇಂಪು
ಕಣ್ಣೀರ ಲವಣಕ್ಕೂ ಉಕ್ಕುವಷ್ಟು ಪ್ರೀತಿ!!

ಬಚ್ಚಲ ಮನೆಯಲ್ಲಿ
ಒಡೆದ ಕಿಟಕಿ ಗಾಜಿನ ಗುರುತು,
ಅದು ನನ್ನ ಬಾಹ್ಯ ಗೀತೆಗೆ ಸಿಕ್ಕ 
ನೆರೆ ಮನೆಯವರ ಬಳುವಳಿ;

ಮನಸೂ ಕೆಲವೊಮ್ಮೆ ಕದಡಿದ್ದುಂಟು;
ಸೂಕ್ಷ್ಮ ಸಂವೇದನೆಗಳ 
ಸರಾಗವಾಗಿ ಬಯಲಿಗೆಳೆದ
ಸರಳ ಸಾಹಿತ್ಯದರಿವಾಗಿ;

ಅರ್ಥವಾಗದಂಥ ಅರ್ಥಗಳ ಕೊಟ್ಟು
ಅರ್ಥಪೂರ್ಣ ಹಾಡು ಬರೆವುದು
ಸಿದ್ಧಿಸದ ಹೊತ್ತಲ್ಲಿ ಹಲವು ಬಾರಿ
ಎಡವಟ್ಟು ಮಾಡಿಕೊಳ್ಳುತ್ತೇನೆ,
ಸಮರ್ಥನೆಗೂ ಪದ ಉಳಿಸದಂತೆ!!

ಒಮ್ಮೊಮ್ಮೆ ಹೀಗೇ ಗುನುಗುವ
ಅದೆಷ್ಟೋ ಹಾಡುಗಳು
ನನ್ನ ಬೆನ್ನ ತಟ್ಟಿ ಬೀಗಿಸಿವೆ,
ಎದೆಯ ಚುಚ್ಚಿ ಬಾಗಿಸಿವೆ;

ನನ್ನಲ್ಲಿಯ ರಾಗ ಸಂಯೋಜಕ,
ಹಾಡು ಹೊಸೆವಾತ,
ಕಂಠ ದಾನ ಮಾಡುವಾತನಿಗೆ
ಎಳ್ಳಷ್ಟೂ ಹೊಂದಾಣಿಕೆಯಿಲ್ಲ;
ಸಂಗೀತಳಿಗೆ ದೂರದ ಪರಿಚಿತರೂ
ಅಲ್ಲದ ಇವರಿಗೆ
ಶೃತಿ, ಲಯ, ಇಂಚರ, ಸ್ವರ ಸ್ಥಾಯಿಗಳ
ಹೆಸರೂ ತಿಳಿದಿಲ್ಲ;
ಆದರೂ ಮನದ ಔದಾರ್ಯತೆಗೆ ಸೋತು
ಕೂಡಿ ಹುಟ್ಟಿಸುತ್ತಾರೆ ಅನನ್ಯ ಗೀತೆಗಳ!!

ನೆರೆ ಮನೆಯವರಿಗೆ ತಕರಾರಿಲ್ಲ,
ಮನಸಿಗೆ ಕಿವಿಯೊಡ್ಡುವವರಿಗೆ ಚೂರು
ಕಸಿವಿಸಿಯುಂಟಾದರೂ
ಸಹಿಸುವರೆಂಬ ಅಪೇಕ್ಷೆ;

ಕಚೇರಿ ಮುಂದುವರಿಸುವಂತೆ ಎಡೆ ಕೊಟ್ಟು
ಸಹಕರಿಸುತ್ತಿವೆ ಮಿಡಿತಗಳು;
ಒಂದೊಂದೇ ಹಾಡಲ್ಲಿ ಅಮೂರ್ತ 
ರೂಪ ತಾಳುತ್ತಿವೆ ತುಡಿತಗಳು!!

                           -- ರತ್ನಸುತ

ಇನ್ನಿಲ್ಲದ ದಿನಚರಿ

"ಸಿಗಲಿ ನಮ್ಮಷ್ಟೇ ಗೆಲುವು
ನಮ್ಮ ನಾಳೆಗಳಿಗೆ
ಇರಲಿ ಇನ್ನಷ್ಟು ಒಲವು
ಕಳೆದ ನೆನ್ನೆಗಳಿಗೆ";

ಇವು ನನ್ನ ಹಿಂದಿನ ದಿನಚರಿಯ
ಕೊನೆ ಪುಟದ, ಕೊನೆ ಸಾಲುಗಳು;
ಮತ್ತೆ-ಮತ್ತೆ ನೆನಪಾಗುತ್ತವೆ
ಚೊಚ್ಚಲ ಹೆರಿಗೆಯ ಕರುವಂತೆ!!

ನನ್ನ ಕೋಣೆಯ ಟೇಬಲ್ ಲೈಟಿನ ಬಲ್ಬಿಗೆ
ನನ್ನ ಗೋಳಾಟ ಚನ್ನಾಗಿ ಗೊತ್ತು;
ಮಿತಿ ಮೀರಿದ ಕಂಬನಿ ಹರಿವಿಗೆ
ತಾನೇ ಎಷ್ಟೋ ಬಾರಿ ಬೆಂದು
ಬರ್ನ್ ಆಗಿದ್ದು ಹಳೆಯ ವಿಷಯ!!

ಇನ್ನು ಕಪಾಟಿನ ಬಾಗಿಲು
ಆಗಾಗ ಕಚ್ಚಿಕೊಂಡು 
ಬಿಡಿಸಲಾಗದಷ್ಟು ಬಿಗಿಯಾಗಿ
ಹಠ ಹೊತ್ತು ನಿಲ್ಲುತ್ತೆ;
ಹಳೆಯ ನೆನಪುಗಳಾವೂ ಮರುಕಳಿಸದಂತೆ
ತನ್ನೊಳಗೆಲ್ಲವನ್ನೂ ಅದುಮಿಟ್ಟುಕೊಂಡು!!

ನೆಲಕ್ಕೆ ಹಾಸಿದ ಸಾದಳ್ಳಿ ಮಾರ್ಬಲ್ಲು
ನನ್ನ ಎರಡಾಗಿ ಬಿಂಬಿಸುತ್ತಿದುದು
ಈಗ ತಾನೊಂದು ಸಾಮಾನ್ಯ ಕಲ್ಲೆಂದು 
ನಿರೂಪಿಸಲು ಹೊರಟಿದೆ,
ಅಂತೆಯೇ ನಿಲುವುಗನ್ನಡಿಯೂ ಸಹ!!

ಕಸದ ಬುಟ್ಟಿಯಲಿ ಕೊಳೆತ ಹಾಳೆ
ಜೋಡಿಸಲಾಗದಂತೆ ಹರಿದ ಗೀಟುಗಳು;
ಕಿಟಕಿಗೆ ಕಾರಿರುಳ ಭಯ,
ಚಂದಿರ ತುಕಾಲಿ,
ಬೆಳದಿಂಗಳು ಅಸಡ್ಡೆ!!

ಕಸುವಿಲ್ಲದ ಮನಸಲ್ಲಿ
ಕಸ ವಿಲೇವಾರಿಯ ಸಮಸ್ಯೆ;
ಮನಸೂ ಈಗ ಮಂಡೂರಿನಂತೆ 
ಮೊಂಡು ಹಿಡಿದ ಕಸಿ ನೆನಪುಗಳ
ಕುಪ್ಪೆ ಕುಪ್ಪೆ ಚೆಲ್ಲಾಟದ ನಡುವೆ
ಬೆಂಡಾಗಿ ಹೋಗಿದೆ!!

ದಿನಚರಿಗಳೇ ಹೀಗೆ;
ದುಃಖವನ್ನು ದ್ವಿಗುಣಗೊಳಿಸಿ,
ಖುಷಿಯ ವೇಳೆ ದುಃಖ ಸವರಿ
ಅಳಿಸುವ ಸಾಮಗ್ರಿ!!

ಬರೆಯದೇ ಬಿಟ್ಟು
ಇಷ್ಟೆಲ್ಲ ರಗಳೆ,
ಇನ್ನು ಬರೆವ ಕಲ್ಪನೆಯೂ
ಭಯಾನಕ;
ಬರೆದ ಎಲ್ಲವನ್ನೂ ಸುಟ್ಟು ಹಾಕಿದೆ
ಒಳಗಿದ್ದ ಎಲ್ಲವನ್ನೂ, ಎಲ್ಲರನ್ನೂ!!

                            -- ರತ್ನಸುತ

ಹಾಲು-ಸಕ್ಕರೆ

ಸಕ್ಕರೆ ಬೆರೆಸಿದ ಹಾಲಲ್ಲಿ
ಕೆನೆಗಟ್ಟಿದವಳೇ,
ತಳದಲ್ಲಿ ಉಳಿದ ಕರಗದ ಗಡ್ಡೆ
ನಿನ್ನ ಮನಸು!!

ಸವಿದಾಗ ನೀ ನನ್ನ
ತುಟಿಗೆ ಅಂಟಿದ್ದೂ
ಅರ್ಧ ಲೊಟದಲ್ಲೇ ಉಳಿದೆ
ಪೂರ ನನ್ನವಳಾಗದೆ;

ನಾಲಗೆಯ ಸುಡುವ ಬಿಸಿ ಹಾಲು;
ಮನಸನ್ನ ಬೇಗ ತಲುಪುವುದು
ಅಷ್ಟು ಸಲೀಸಲ್ಲ,
ಅವಸರವ ಗಂಟಲು ಸಹಿಸಲ್ಲ!!

ವಾಸ್ತವದಲ್ಲಿ ನನಗೆ 
ಕೆನೆ ಅಂದರೆ ಅಲರ್ಜಿ,
ತಳದಿ ಕರಗದೆ ಉಳಿದ
ಸಕ್ಕರೆ ಮನಸಿನ ಮೇಲೇ ಮನಸು;

ಬಿಸಿಯ ಸಾಂತ್ವನಕ್ಕೆ
ಅದೆಷ್ಟು ಉಸಿರು ಪೋಲಾಯಿತೋ!!
ಲೆಕ್ಕ ಹಾಕಿದವರಾರು?
ನಿನ್ನ ಮನಸ್ಸನ್ನೇ ಕೇಳಿದರಾಯ್ತು!!

ಕಲೆಸಿ ನೊರೆಯೆಬ್ಬಿಸುವ ಆಸೆ,
ಹಿಂದೆಯೇ 
ಮನಸು ಒಡೆಯಬಹುದೇನೋ ಎಂಬ ಭಯ;
ನೀನು ನಿಜಕ್ಕೂ ಚಂಚಲೆ!!

ಹಾಲೊಲ್ಲದೆ ಚೆಲ್ಲಿ
ಮನಸನು ಮಾತ್ರ ಮೋಹಿಸಲೊಲ್ಲೆ;
ಒಲವಿಂದ ಎರಡನ್ನೂ ಹದವಾಗಿ ಬೆರೆಸಿ
ಸವಿಯುವ ಕಾಲಕ್ಕೆ ಕಾದ
ಕೆಟ್ಟು ನಿಂತ ಗಡಿಯಾರ ನಾನು!!

                               -- ರತ್ನಸುತ

ನನ್ನ ಸಾವಿಗೂ ಮುನ್ನ

ಸಂತೆಯಲ್ಲಿ ಎಂದೂ ಅವಳ
ಕೈ ಬಿಟ್ಟು ನಡೆದವನಲ್ಲ,
ಅಂದು ನೋಡಿ ನಕ್ಕ ಬಳೆ
ಹಿಡಿಯ ಚೂರು ಸಡಿಲಿಸಿತು;
ಆತಂಕಗೊಂಡಳು ಪಾಪ
ಭುಜವ ಒತ್ತಿ ಹಿಡಿದು;
ಕಳುವಾದಳು ಬಳೆ ಬೀದಿಯಲ್ಲಿ,
ನಂತರ ಯಾವ ಬಳೆ ಸದ್ದೂ ಕೇಳಲಿಲ್ಲ!!

ಮಳೆ ನಿಂತ ಮಣ್ಣ ರಸ್ತೆ,
ನನ್ನ ಹೆಜ್ಜೆಗೆಜ್ಜೆ ನೀಡಿ
ಹಿಂಬಾಲಿಸಿ ಬರುತಿದ್ದಳು
ಜಾರು ಕಣಿವೆ ನಡುವೆ;
ಕಣ್ಣ ಮುಚ್ಚಿ ಹುಡುಕು ಎಂದು
ತಾಕೀತು ಮಾಡಿದಳು,
ಕಣ್ಬಿಟ್ಟರೆ ಸೋಲುವೆನೆಂದು
ಕತ್ತಲಲ್ಲೇ ಬದುಕಿರುವೆ, ಆಕೆ ಎಂದಾದರೂ ಸಿಗಬಹುದೆಂದು!!

ಒಂಟಿ ದೀಪದುರಿಯಲ್ಲಿ
ರಾಗಿ ಹುಲ್ಲ ಉಪ್ಪರಿಗೆಯ 
ತೋಟದ ಮನೆ ಬಾಗಿಲೂ
ನನಗಾಗಿಯೇ ಕಾದಿತ್ತು;
ಒಳಗೆ ಆಕೆ ಅಡುಗೆಯೊಡನೆ
ಎಲೆ ಬಡಿಸಿ ಕಾದಿದ್ದಳು,
ಮಿಂಚೆರಗಿ ಸುಟ್ಟು ಹಾಕಿತೆನ್ನ ಮನವ,
ಬೆಳಕಿಗೂ ಅಂದಿನಿಂದ ಬಹಿಷ್ಕಾರ!!

ನಕ್ಷತ್ರವಾದ ಆಕೆ ತಾರಕದಲ್ಲಿ;
ನನಗೂ ಮಣ್ಣಿಗೂ ಋಣವಿಲ್ಲ,
ನಿದ್ದೆಗೊಡದ ಇರುಳು,
ಬದುಕಗೊಡದ ಹಗಲು;
ನಡುನಡುವೆ ಚಂದ ಕನಸು
ನಿಜಗಳೇ ಬಲು ದಾರುಣ;
ಅತ್ತ ಮೊದಲಾಗಿ ಅರ್ಧಕ್ಕೆ ನಿಂತ
ಅಪೂರ್ಣ ಕವಿತೆಯೊಳಗೂ ಆಕೆಯ ನಗು!!

ಸಂತೆಯ ತೆರವುಗೊಳಿಸಿ,
ಕಣಿವೆಯನ್ನೆಲ್ಲಾ ಜಾಲಾಡಿ,
ದೀಪಕ್ಕೂ, ಮಿಂಚಿಗೂ ತಣ್ಣೀರೆರೆದು,
ತಾರಕ ವ್ಯಾಪ್ತಿಗೂ ತೆರೆ ಎಳೆದು,
ಹಗಲಿರುಳುಗಳ ಒಂದು ಮಾಡಿ,
ಕವಿತೆ ಪೂರ್ಣಗೊಳಿಸಲು ಕೂತೆ
ಪುನರ್ಜನ್ಮ ಪಡೆದವಳಂತೆ
ಮೆಲ್ಲಗೆ ನನ್ನ ಆವರಿಸಿಕೊಂಡು, ಕೊನೆ ಉಸಿರೆಳೆದಳು!!

                                                      -- ರತ್ನಸುತ

ಗೂಗಲ್ ಮ್ಯಾಪಲಿ ಕಂಡದ್ದು/ಕಾಣದ್ದು

ಮನೆಯ ಹೊರಗೆ ತೀಟೆ ತೀರಿದ
ಜೋಡಿ ಜೋಡುಗಳು,
ಬಾಗಿಲಲ್ಲಿ ಹಬ್ಬದ ನೆನಪಲ್ಲೇ ಬಾಡಿ
ಹಪ್ಪಳವಾದ ತೋರಣ,
ಗೋಡೆಯ ಸುಣ್ಣ ಚಕ್ಕೆಗಳ
ತುದಿಗಾಲ ನಿಲುವು,
ಒರಟು ನೆಲದ ಮೇಲೆ ಹಾಸಿಕೊಂಡ
ಹರಿದ ಚಾಪೆ!!

ದೇವರ ಪಟದ ಮೇಲೆ ಧ್ಯಾನಸ್ಥ
ಧೂಳಿನ ಪದರ,
ಮೂಲೆ ಮೂಲೆಗಳಲ್ಲೂ ಮೆತ್ತಿಕೊಂಡ
ಜೇಡನ ಬಲೆ,
ನಡುಮನೆಯಲ್ಲಿ ಬಿತ್ತರವಾದ ತುಳಸಿ ಗಿಡ,
ಕಡು ಬಡತನ
ನೀರೆರೆವ ಕಳಶ, ಅಂಗೈಯ್ಯ ತೀರ್ಥ
ದಣಿದ ಮಣ್ಣು!!

ಗುಡಾಣ ಹೆಗ್ಗಣಗಳ ತಾಣ,
ಉರಿಯದೊಲೆಯ ಸುತ್ತ
ಚುಕ್ಕಿ-ರೇಖೆಯ ಅಳಿದುಳಿದ
ಚಂದ ಚಿತ್ತಾರ;
ಬೂದಿಯೂ ತಿಪ್ಪೆ ಪಾಲು,
ಎಂದೋ ಉಕ್ಕಿಸಿದ ಹಾಲ
ಕಮಟು ಘಮಲು,
ಆಧಾರ ಸ್ತಂಬಗಳ ಆಕ್ರಂದನ!!

ಹೊರಗೆ ನಿಲ್ಲದ ಮಳೆ,
ಒಳಗೆ ಕೊಲ್ಲುವ ಮೌನ,
ಕೊಟ್ಟಿಗೆಯ ಗೂಟದಲಿ
ಬಿಡಿಸದ ಸರಪಳಿ;
ಇರುಳ ತಿಂಗಳ ಬೆಳಕು,
ಹಗಲ ಬಿಸಿಲಿನ ಮಬ್ಬು,
ಜೋತು ಹಾಕಿದ ಗಿಲಕಿಯೊಡನೆ
ತಂಗಾಳಿಯ ಮಾತು-ಕಥೆ!!

ಮುರಿದ ಬುಗುರಿ, ಗೋಳಿ ಗುಂಡು,
ಕಡಿಗೋಲು, ಕುಡುಗೋಲು,
ಹರಿದ ಗುಬ್ಬಚ್ಚಿ ಗೂಡು,
ಬೆರಣಿ ಕುಪ್ಪೆ, ಪಟದ ನೂಲು;
ನಾಲ್ಕು ಕಂಬನಿ, ಮೂರು ಹೆಜ್ಜೆ,
ಸಾಲು ಕನಸು, ಒಂದು ಬಯಕೆ;
ಸೂರ್ಯ ಹುಟಿ ಮುಳುಗುತಾನೆ
ಬೆಳಕಿನರಿವು ಇನ್ನ್ನೂ ಬಾಕಿ!!

ಗೂಗಲ್ ಮ್ಯಾಪನು ಜೂಮ್ ಮಾಡಿ
ಕಂಡೂ ಕಾಣದ ಹಳ್ಳಿ ಮನೆಗೆ
ಪಟ್ಟಣಗಳು ಬಿಕ್ಕುತಿದ್ದೋ;
ಹಳ್ಳಿಗಳ್ಳಿಯೇ ವೃದ್ಧಾಶ್ರಮ-
ಕೇಂದ್ರಗಳಂತೆ ಮಾರ್ಪಾಡಾದೋ!!

                                -- ರತ್ನಸುತ

ಮನೆ ಬಾಗ್ಲಿಗ್ ಬಂದೋರ್ನ

ಬುಡುಬುಡಿಕೆ ದಾಸಪ್ಪ
ಬುರುಡೇನ ಬಿಡುತಾವ್ನೆ
ಒಂದಿಷ್ಟು ಹಸಿ ಹಿಟ್ಟು
ಕೊಟ್ಟು ಕಳ್ಸಿ;
ಬಗ್ವಂತನ ಅಂತೇನ್ರಾ
ಸುರುವಚ್ಚಿಕೊಂಡಾಂದ್ರೆ
ಸಿಕ್ಕಿದ್ರಲ್ ಸರಿಯಾಗಿ
ಬಿಟ್ಟು ಕಳ್ಸಿ!!

ಮುಸುಡೀನ ತೊಳಿದಂಗೆ
ಮನೆ ಬಾಗ್ಲ ಹೊಸ್ಲಲ್ಲಿ
ಪೀಪಿನ ಊದೋರ್ಗೆ
ಸದ್ರ ಕೊಡಿ;
"ಒಳ್ಳೆದೇ ಆಯ್ತದೆ
ರೇಷ್ಮೆ ಬಟ್ಟೆ ಇಡ್ರಿ"
ಹಿಂಗಂದ್ರೆ ಮುಟ್ನೊಡ್ಕೊಳೋ 
ಹಂಗ್ಕೊಡಿ!!

ಕಣಿ ಹೇಳುತೀನಂತ
ಹಸ್ತಾನ ಕೇಳ್ಯಾರು
ಚಿನ್ನುದ್ ಬಳೆ ಇದ್ರೆ
ತಗ್ದಿಟ್ಟಿರಿ;
ಬೆಟ್ಟಾದ ಮದ್ದಮ್ಮ
ನಾಲ್ಗೆ ಮೇಲೌಳೇನೋ
ಪರೀಕ್ಸೆ ಮಾಡೋಂಗೆ
ಗುಟ್ಟಾಗಿರಿ!!

ಬಸ್ವಣ್ಣ ಬರುತಾನೆ
ಹಣ್ಣಿದ್ರೆ ಕೊಡಿ ಬಾಯ್ಗೆ
ಜೋಲಿಗೆ ತುಂಬ್ಸೋಕೆ
ಹೋಗ್ಬ್ಯಾಡಿರಿ;
ಎಲ್ಲಾರು ಮಾಡೋದು
ಹೊಟ್ಟೆಗೆ, ಬಟ್ಟೆಗೆ
ಯಾಮಾರ್ದಂಗೆ ದಾನ
ಮಾಡ್ತಾಯಿರಿ!!

ಭಿಕ್ಸೆನ ಬೇಡೋರ್ಗೂ
ಯತ್ವಾಸ ಇರ್ತೈತೆ
ಒಂದೊತ್ತಲೊಂದ್ ತುತ್ತು
ಪಕ್ಕಕ್ಕಿಡಿ;
ಹಸ್ವನ್ನ ದಾಟೋದು
ಕಷ್ಟ ಏನಲ್ದಿದ್ರೂ
ದಾಟ್ಸೋರೇ ದೊಡ್ಡೋರು
ನೆನ್ಪಲ್ಲಿಡಿ!!

                    -- ರತ್ನಸುತ

ಮನದ ಮುಂಬಾಗಿಲಲಿ

ನೂರು ಬಾರಿ ತಟ್ಟಿಕೊಂಡೆ
ಒಮ್ಮೆ ಕೂಡ ತೆರೆಯಲಿಲ್ಲ
ಯಾರೂ ಇಲ್ಲವೆಂದುಕೊಂಡೆ
ನನ್ನ ಮನಸಲಿ;
ಕಳ್ಳ ದಾರಿಯಲ್ಲಿ ಯಾರೋ
ಕೊಳ್ಳೆ ಹೊಡೆಯಲಿಕ್ಕೆ ಬಂದು
ಎಬ್ಬಿಸುತ್ತಲಿರುವರೇನೋ
ಚೂರು ಗಲಿಬಿಲಿ?!!

ಎಲ್ಲ ಹೆಸರು ಇಟ್ಟು ಕೂಗಿ
ಎಲ್ಲದಕ್ಕೂ ಒಂದೇ ಮೌನ
ಯಾರೂ ಇಲ್ಲ ಉತ್ತರಿಸಲು
ಪ್ರತಿದ್ವನಿಯಲಿ;
ಹೂವು ಅರಳಿ ಬಾಡಿ ಸತ್ತು
ಧೂಪ ಉರಿದು ಉದುರಿ ಬಿತ್ತು
ಒಂಟಿ ದೀಪ ನಂದಲಿತ್ತು
ಸಾವ ಮನೆಯಲಿ!!

ಬೀಸಿ ಮೆಲ್ಲ ಗಾಳಿ ಚೂರು
ಮುರಿದು ಬಿದ್ದ ಕಿಟಕಿ ಸದ್ದು
ಸಿಕ್ಕ ಸಂದಿಯಲ್ಲೇ ನುಸುಳುತಿತ್ತು
ಬೆಳಕದು;
ಒಳಗೆ ಕೆಟ್ಟು ಕೂತ ಹಳೆಯ
ಗಡಿಯಾರದ ಮುಳ್ಳ ಸದ್ದು
ಕಿವಿಯ ಕಿತ್ತು ಆನಿಸಿಟ್ಟೆ
ಏನೂ ಕೇಳದು!!

ಬಣ್ಣವಿಲ್ಲ, ಬರಹವಿಲ್ಲ
ಸುಣ್ಣವಿಲ್ಲ, ಸರಸವಿಲ್ಲ
ಸುತ್ತ ಮುತ್ತ ಬರೆಯ ಸಪ್ಪೆ
ಕಪ್ಪು ಕಲೆಗಳು;
ಚಂದಗೊಳಿಸಲೆಂದು ಬಂದು
ಇಲ್ಲೇ ಕೊಳೆತು ನಾರುತಾವೆ
ಹಿಂದಿಂದೆ ಜಿಗಿದು ಬಂದ 
ಒಪ್ಪುವಲೆಗಳು!!

ಮನೆಯೂ ದೂರ, ಮಸಣ ಘಮಲು
ಮೊಗಸಾಲೆಯು ಬಿಕ್ಕುತಿರಲು
ಯಾವ ನೆಂಟ ತಾನೆ ಇತ್ತ
ತಲೆಯ ಹಾಕುವ;
ಹೆಸರಿಗೊಂದು ಕಾಲು ದಾರಿ
ಕಗ್ಗತ್ತಲು, ಮುಳ್ಳು ಬೇಲಿ
ಬರುವುದಾದರೆ ಹೇಳಿ-
ಬನ್ನಿ ನೋಡುವ!!

                   -- ರತ್ನಸುತ

ಬೆಳಕಿನ ಕತ್ತಲು

ಬೆಳಕಿಗೂ ಕತ್ತಲಿಗೂ ನಡುವೆ
ಕೇವಲ ಒಂದು ದೀಪದ ಅಂತರ,
ಹಚ್ಚಿಟ್ಟರೆ ಮಾತ್ರ;
ಇಲ್ಲವಾದಲ್ಲಿ, ತಾಮಸ ಉದರದಿ
ಜೀರ್ಣವಾದ ಬೆಳಕು
ಕಡ್ಡಿ ಗೀರುವ ಕೈಗಳ
ಅಲ್ಲಿಂದಲೇ ಬೇಡಬೇಕು
ಸಣ್ಣ ಕಿಚ್ಚಿನ ಸಲುವಿಗೆ!!

ಬೆಳಕು ತಕರಾರಿನ ಸರಕು,
ಕತ್ತಲು ಸ್ತಬ್ಧ ಏಕತಾನತೆ;
ಕತ್ತಲಿಗೆ ಕಿವಿ ಚುರುಕಾದರೆ
ಬೆಳಕಿಗೆ ಕಣ್ಣು;
ಗ್ರಹಿಕೆಯೆಂಬುದೇ ಬೇರೆ,
ಕಂಡು, ಕೇಳುವುದಕ್ಕೂ ಮಿಗಿಲು;

ಬೆತ್ತಲ ಬಯಲಾಗಿಸುವ ಬೆಳಕು
ಕತ್ತಲ ಗುಲಾಮ,
ಕೆಲವೊಮ್ಮೆ ಕತ್ತಲೂ ಮಣಿವುದು
ಬೆಳಕ ಬೆರಗಿಗೆ;
ಇದು ಸಾಂದರ್ಭಿಕ ಆಟ,
ಮಾರ್ಮಿಕ ಅವಲೋಕನ,
ಬೆಳಕು-ಕತ್ತಲ ದಾಟಿ
ಸ್ಥಿರಾಸ್ಥಿತಿಯ ತಲುಪಲು!!

ನೆರಳು ಬೆಳಕಿನ ಕತ್ತಲು,
ಕತ್ತಲು ನೆರಳಿನ ಬೆಳಕು;
ಎಲ್ಲವೂ ಅಲ್ಲಲ್ಲೇ ಗಿರಕಿ ಹೊಡೆವ
ಪರಿಕಲ್ಪನಾ ಸೂತ್ರಗಳು!!

ಜೊನ್ನಿಗೆ ಇರುಳ ಸನ್ಮಾನ,
ತಾರಕ ಸಭೀಕರೆದುರು
ಘನ ಬಿಗುಮಾನ;
ನೇಸರನ ದಾಳಿಗೆ
ಸೋಲೊಪ್ಪದ ಸಮರ,
ಎಚ್ಚೆತ್ತ ಕಣ್ಣಿಗೆ
ಭೀಕರ ದರ್ಶನ!!

ಮಣ್ಣಿನೊಳಗೆ ಹೆಣವಾದವರು
ಕತ್ತಲ ಮೋಹಿಸಿದವರೇ ಇರಬೇಕು;
ಹುಟ್ಟಿಗೆ ಹಪಹಪಿಸಿ
ಕಣ್ಬಿಟ್ಟ ಹಸುಳೆಗಳಲ್ಲಿ
ಅಬ್ಬಬ್ಬಾ ಎಷೋಂದು ಅಮಾಯಕ ನಿರೀಕ್ಷೆ?!!

ಬಹುಶಃ ಗೆದ್ದು ಸೋತು 
ಸೋತು ಗೆಲ್ಲುವ ದಿನ ನಿತ್ಯದ ಆಟದ
ಮುಕ್ತ ಮೈದಾನದ ವೀಕ್ಷಣೆಯಲ್ಲಿ
ಮೈ ಮರೆತ ನಾವುಗಳು
ಬೆಳಕಿಗೆ ಬದುಕನ್ನ
ಕತ್ತಲಿಗೆ ನಿದ್ದೆಯುಣಿಸಿ ಕೈ ತೊಳೆಯುವಾಗ
ನೆರಳು ಬಿಕ್ಕಿದ್ದ ಕೇಳಿಸಿಕೊಳ್ಳಲಿಲ್ಲವೆನಿಸುತ್ತೆ!!

                                        -- ರತ್ನಸುತ

ನಮ್ಮೂರಿನ್ ಡಾಕ್ಟ್ರು

ಅವರು ಎದೆಯ ಮುಟ್ಟುತಾರೆ 
ಛೀ... ಕುಂಡಿ ಸವರುತಾರೆ
ಥೂ... ಹೊಟ್ಟೆ ಹಿಸುಕುತಾರೆ
ಚೂರೂ ಸಿಗ್ಗೇಯಿಲ್ಲ;
ಗುಪ್ತವಾಗಿ ಮಾತ ನಡೆಸಿ 
ಗುಟ್ಟನೆಲ್ಲ ಅರಿಯುತಾರೆ
ಥೂ... ಬಟ್ಟೆ ಕಳಚುವಾಗಲೂ
ತಡೆಯಂಗಿಲ್ಲ!!

ಕಣ್ಣಿನೊಳಗೆ ಇಟ್ಟು ಕಣ್ಣ
ಅಗಲಿಸುತ್ತ ಗುಡ್ಡೆಯನ್ನ
ಬೆಳಕನಿಟ್ಟು ಕಾಣುತಾರೆ
ಅರ್ಥವಾಗೋದಿಲ್ಲ್ಲ;
ಹಣೆಯ ಮೆಲ್ಲ ಒತ್ತುತಾರೆ
ಗಲ್ಲ ಹಿಡಿದು ತಿರುವುತಾರೆ
ಬಾಯಿ ತೆರೆಸಿ ಎಣಿಸುತಾರೆ
ಮಾತು ಆಡಂಗಿಲ್ಲ!!

ಕೈಯ್ಯಿ ನೇರ ಇಟ್ಟು ಕಂಡು
ಮತ್ತೆ ಮಡಿಸಿ ಮನನಗೊಂಡು
ಕಾಲ ಮಂಡಿ ಚಿಪ್ಪ ತಟ್ಟಲು
ಚೀರಂಗಿಲ್ಲ;
ನಗಿಸುತಾರೆ ಜೋಕು ಹೊಡೆದು
ತಿಳಿಸುತಾರೆ ಎಲ್ಲ ತಿಳಿದು
ಏನೂ ತಿಳಿಯದಿದ್ದರೂ 
ಪ್ರಶ್ನೆ ಮಾಡಂಗಿಲ್ಲ!!

ಚಾಕು, ಚೂರಿ, ಕತ್ರಿ, ಬ್ಲೇಡು
ನಿತ್ಯ ರಕ್ತ ಹರಿಸಿಕೊಂಡು
ಮತ್ತೆ ಅವರೇ ಒರೆಸುವಾಗ
ಶಂಕೆ ಮೂಡೋದಿಲ್ಲ;
ಎಲ್ಲ ಮುಗಿದ ಬಳಿಕ ಅಲ್ಲಿ
ನಮ್ಮ ಬಂಧ ಮುಗಿದ ಹಾಗೆ
ಮತ್ತೆ ಎದುರು ಸಿಕ್ಕರೂ ಗುರುತು
ಹಚ್ಚೋದಿಲ್ಲ!!

ಕೇಳುತಾರೆ ಎದೆಯ ಬಡಿತ
ಹಿಡಿಯುತಾರೆ ನಾಡಿ ಮಿಡಿತ
ಆಳ ಹೊಕ್ಕು ಹೃದಯವನ್ನೂ
ಓದಿ ಬರ್ತಾರಲ್ಲ?!!
ಹಿಂಗಿಂಗೆ ಅಂತ ನೋವ
ಹೇಳಿಕೊಳ್ಳುವಷ್ಟರಲ್ಲೇ
ಹಂಗಂಗೇ ಒಂದು ಗುಳಿಗೆ ಗೀಚಿ
ಕೊಡ್ತಾರಲ್ಲ!!

ನೆಂಟರಲ್ಲ, ಇಷ್ಟರಲ್ಲ
ದೂರ ಅಲ್ಲ, ಹತ್ರ ಅಲ್ಲ
ದುಡ್ಡಿಗಾಸೆ ಪಟ್ರೂ ತೀರ ಏನೂ 
ಮೋಸ ಅಲ್ಲ;
ದೇವರತ್ರ ಹೊತ್ತ ಹರಕೆ
ತೀರಿಸೋದು ನಮ್ಮ ಹಕ್ಕು
ಇಲ್ದೆ ಹೋದ್ರೆ ಮುಂದೆ ಯಾವ್ದುಕ್ಕೂ
ಕ್ಯಾರೇನ್ನಲ್ಲ!!

                                 -- ರತ್ನಸುತ

ಒಲವಿಂದ

ನೋಟ ಭಿಕ್ಷೆ ನೀಡಿ ಹೋದೆ
ಎನ್ನ ಕಕ್ಷೆಯಲ್ಲೇ ಒಮ್ಮೆ
ಸುತ್ತುವರಿದು ಹೋದರೇನು
ಬಾದೆ ನಿನ್ನದು;
ಏನು ಹೇಳಬೇಕೋ ಕಾಣೆ
ಎದುರು ಸಿಕ್ಕೆ ದಿಢೀರ್ ಮೊನ್ನೆ
ನಿನ್ನ ಮುಂದೆ ಉದ್ದ ನಾಲಗೆ
ಸಣ್ಣದು!!

ಶಂಖ ಊದಿದಂತೆ ಸದ್ದು
ಅಕ್ಕಿ ಕಾಳ ನೀನೇ ಖುದ್ದು
ಹಿಡಿಯಲಿಟ್ಟು ಮರೆಸುತಿದ್ದೆ
ತಿಳಿಯದಾಯಿತು;
ಹಾಗೇ ಬಿಟ್ಟುಗೊಡುವ ವೇಳೆ
ನಿಂತೆ ಸಿಡಿಲು ಬಡಿದ ಹಾಗೆ
"ಕೈಯ್ಯ ಹಿಡಿದು ತಡೆಯೋ" ಎಂದು
ಬಳೆಯು ಕೂಗಿತು!!

ನಾಲ್ಕು ಪದಗಳನ್ನು ಹೊಲಿದು
ಕಿತ್ತು ಹೋದ ಪದ್ಯ ಹೊಸೆದು
ನೆತ್ತರಲ್ಲಿ ಬರೆವ ಎಂದು
ಬೆರಳ ಚುಚ್ಚಿದೆ;
ಮಾಯ ಗಾಳಿ ಬೀಸಿ ತಾನೇ 
ಎದೆಯ ನೀವಿ ಹೋಯಿತಲ್ಲಿ
ಪದಗಳೆಲ್ಲ ಮಿಥ್ಯವಗಿ
ಅಳಲು ತೊಡಗಿದೆ!!

ರಗ್ಗಿನೊಳಗೆ ನಿನ್ನ ಮಗ್ಗಿ
ಮತ್ತೆ ಮತ್ತೆ ಪಠಿಸುವಾಗ
ಸಿಗ್ಗು ಚೂರು ಹೆಚ್ಚಿ ದಿಂಬ
ತಬ್ಬಿಕೊಳ್ಳುವೆ;
ಕನಸಿನಲ್ಲಿ ಮುಸುಕು ಧರಿಸಿ
ಕಣ್ಣ ತಪ್ಪಿಸುತ್ತ ಹೊರಟೆ
ಒಮ್ಮೆ ನನ್ನ ಹೆಸರ ಹಿಡಿದು
ಕೂಗಬಾರದೇ?!!

ಎದೆಯ ಕಣದ ಬಳ್ಳದಲ್ಲಿ 
ಸೇರು-ಸೇರು ಉಸಿರು ಅಳೆದು
ನಿನ್ನ ಸೆರಗ ಮಡಿಲ ತುಂಬಿ
ಮುಕ್ತನಾಗುವೆ;
ಒಂದು ಬೊಗಸೆಯಷ್ಟು ನೀನು
ನಿನ್ನ ಪಾಲಿನಿಂದ ನೀಡು
ಬದುಕ ಹೇಗೋ ನಡೆಸಿಕೊಂಡು
ಮುಂದೆ ಸಾಗುವೆ!!

                           ಇಂತಿ ನಿನ್ನವ;
                             -- ರತ್ನಸುತ

Tuesday, 10 June 2014

ಅಮ್ಮ ಪೂರ್ಣಗೊಳಿಸಿದ ಕವಿತೆ

"ಅಮ್ಮ
ಇಂದು ನಾ ಬರೆದ ಕವಿತೆ
ಕಾಣೆಯಾಗಿದೆಯಮ್ಮ;
ಇನ್ನೂ ಚೂರು ಬಾಕಿ ಉಳಿದಂತೆ
ನಿನ್ನ, ಅಪ್ಪನ ಚಿತ್ರ ಪಟದ ವಜೆಯಿಟ್ಟು
ಹಾರದಂತೆ ಬಿಟ್ಟು ಹೋಗಿದ್ದೆ
ಕಂಡೆಯಾ ಅಮ್ಮ, ಕಂಡೆಯಾ?!!"

"ಅಪ್ಪನ ಕುರಿತಷ್ಟೇ ಬರೆದಿದ್ದೆ,
ನೀನಿನ್ನೂ ಮೊದಲಾಗಿದ್ದೆ ಅಷ್ಟೇ
ಆಗಲೇ ಹಸಿವಾಗಿ, ನಿನ್ನ ನೆನಪಾಗಿ
ಕೂಗುತ್ತ ಎದ್ದು ಹೊರಟಿದ್ದು,
ಅಪೂರ್ಣ ಕಾಗದ ಬಿಟ್ಟು ಬಂದಿದ್ದು
ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆಯಮ್ಮ!!"

ಯಾರಾದರೂ ಕದ್ದಿರಬಹುದೇ?
ದುರುಪಯೋಗ ಪಡಿಸಿಕೊಂಡರೇ?
ಮೂರ್ಖರೇ ಆಗಿರಬೇಕು;
ನನ್ನದೇ ಆಗಬೇಕೆ ಕಳುವಿಗೆ?!!

ಅಸೂಯೆ ಪಟ್ಟು ಹರಿದು ಹಾಕಿರುವರೇ?
ಕಸದ ಬುಟ್ಟಿಯನೊಮ್ಮೆ ಚದುರಿಸಿದೆ
ಚೂರುಗಳು ಕಂಡವು
ಬರವಣಿಗೆಯ ಕುರುಹುಗಳಿರಲಿಲ್ಲ;
ಕಮಟು ಘಮಲನ್ನ ಹಿಂಬಾಲಿಸಿ ಹೊರಟೆ
ಕಾಡ್ಗಿಚ್ಚು? ಅಲ್ಲಿ ನನ್ನ ಸುಳುವೆಲ್ಲಿ?
ಹತಾಶನಾಗಿ ಹಿಂದಿರುಗಿದೆ!!

ಒಲೆಯ ಮೇಲಿನ ಮಡಿಕೆಯಲಿ
ತಳ ಸುಟ್ಟ ನೀರು;
ಹಿಟ್ಟು ಸುರಿವುದ ಮರೆತ ಜನನಿ
ಅದೇ ಹೊತ್ತಿಗೆ ಹಿತ್ತಲ ಬಾಗಿಲ ತೆರೆದು,
ಅಲ್ಲೇ ಅವಿತು,
ನನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಳು;
ಅದು ಅದೇ ಕಳುವು ಕಾಗದ?!!

ಬಹಳ ಸಹಜವಾಗಿಯೇ ನನ್ನೆಡೆ ಬಂದು
ಮಡಿಸಿಟ್ಟ ತುಂಡನ್ನ ಕೈಗಿಟ್ಟಳು;
ತೆರೆದು ನೋಡಿದರಲ್ಲಿ
ಅವಳ ನಾಲ್ಕು ತೊಟ್ಟು ಕಂಬನಿ
ಕೊನೆ ಸಾಲ ಕೊನೆಯಲ್ಲಿ;
ಕವಿತೆ ಪೂರ್ಣಗೊಳಿಸಿದ್ದಳು ತಾಯಿ!!

                                 -- ರತ್ನಸುತ

ಆಕಾಶ ಮೈನೆರೆದು

ಮುಗಿಲ ಮರೆಯ ಬೆಳಕಿಗೆ
ಇಂದೇಕೋ ನಾಚಿಕೆ
ಬರಲೊಲ್ಲದು ಈಚೆಗೆ;
ತೆರೆ ಹಿಂದಿನ ಹೊಸಗೆ ಹೆಣ್ಣು,
ಮಾಗಿ ಕೆಂಪು ಗಲ್ಲ ಹಣ್ಣು,
ಚೂರು ಕದಲಿ ಮುಗಿಲ ಗರಿ
ಹೊಂಬಣ್ಣದ ಮುದ್ದು ಕುವರಿ
ಬಾಗಿನಕೆ ಬರುತಿಹಳು!!

ಭೂಮಿ ಕಣ್ಣೆದುರಿನ ಕೂಸು
ಮೈ ನೆರೆದ ನೀಲಿ ಹೂವು
ಕೊಂಚ ಬಿಳಿ, ಕೊಂಚ ಕಪ್ಪು
ಕೊಂಚ ಮೊಗ್ಗು, ಕೊಂಚ ಎಳೆಸು;
ಕೆನ್ನೆ ಗಿಂಡಿದರೆ ಉದುರುವ
ಆಲಿಕಲ್ಲ ಮುತ್ತುಗಳು,
ದುರದಿಂದ ಪ್ರಜ್ವಲಿಸುವ
ಮಧುರಾಮೃತ ಕಂಗಳು!!

ಕದ್ದು ಮುಚ್ಚಿ ಹಿಗ್ಗಿಕೊಂಡ
ಮೇರು ಶಿಖರದಂಚು
ಮದುಮಗನ ಮುತ್ತಿಕೊಂಡ
ಬೆಳ್ಳಿ ಮೋಡ ಮಂಜು;
ನದಿ ಅಲೆಯೋ, ಕುಂಚ ಕಲೆಯೋ
ದುಮುಕುವ ಚಿತ್ತಾರ,
ಮರಳ ದಂಡೆ ಅತಿಥಿ ತಾಣ
ಅಲೆಗಳ ವೈಯ್ಯಾರ!!

ಪನ್ನೀರ ಸಿಂಪಡಿಸಿ
ಹುನ್ನಾರ ನಡೆಸುತಿದ್ದ
ಆಸೆ ಉಕ್ಕಿ ತುಂಬಿ ಬಂದ
ಕಾರ್ಮುಗಿಲೊಂದೆಡೆಗೆ;
ನೆರೆದವರ ನಡುವೆ 
ಕಳೆದ ಚಪ್ಪಲಿ ಹುಡುಕುತಲಿದ್ದ
ಊಟದ ಪಂಕ್ತಿಯಲಿ ಕಂಡ
ಚಂದಿರನೂ ಕಡೆಗೆ!!

ತುಸು ಚಳಿಯಲಿ ಬೆವರರಿಸಿದ
ಕಾಡು ಮರದ ಬೇರು
ಹುಲ್ಲಿನುಪ್ಪರಿಗೆ ಕೆಳಗೆ
ಮೂಖ ಕಲ್ಲ ಹಾಡು
ಚಿನ್ನ ಬೇಡ, ಬೆಳ್ಳಿ ಬೇಡ
ರೇಷಿಮೆ ಬೇಡವೇ ಬೇಡ,
ಹೊತ್ತು ತನ್ನಿ ಕೆಂನ್ನೀರು
ಸೋಬಾನೆ ಹಾಡ;

ಬೆಳಗಿ ಬಾನಿಗೆ
ಧರೆಗೆ ಹನಿಯ ದೇಣಿಗೆ!!

                  -- ರತ್ನಸುತ

ಯಾರೂ ಇಲ್ಲದವನಾಗಿ

ನಾ ನಾವಿಕನಲ್ಲ,
ದೋಣಿಯಲ್ಲಿ ಪಯಣ ಬೆಳೆಸಿದ್ದೇನೆ
ಒಬ್ಬಂಟಿಯಾಗಿ;
ಅದೇಕೋ ಮರಳಲ್ಲಿ ಮುಳುಗುವ ಭಯ,
ನೀರಲ್ಲಿ ಹುದುಗುವ ಅಂಜಿಕೆ;
ಅಲೆಗೆ ಎದೆಯೊಡ್ಡಿ
ಲವಣದ ಸತ್ವಕ್ಕೆ ವಾಕರಿಕೆ;
"ಯಾರ್ಯಾರ ಕಣ್ಣೀರೋ ಏನೋ?!!" ಎಂದು;

ಹೀಗೆ ಇಲ್ಲದವರ ಇಲ್ಲದಲ್ಲಿ ಊಹಿಸಿ
ನನ್ನಿಂದ ದೂರಾಗಿಸಿಕೊಂಡ ಪ್ರಸಂಗಗಳು
ತೀರಾ ನೆನ್ನೆಯಷ್ಟೇ ಜರುಗಿದ್ದು 
ಅಚ್ಚರಿ ಅಲ್ಲದಿದ್ದರೂ, ಆಘಾತಕಾರಿ!!

ದಣಿವಾದಾಗ ನೀರುಣಿಸಿದವರ
ವೇಷ ಭೂಷಣಗಳ ತೂಗಿ
ಅದೆಷ್ಟೋ ಬಾರಿ ಬಿಕ್ಕಳಿಸಿದ್ದುಂಟು;
ಕೆಲವೊಮ್ಮೆ ಡೊಂಕು ತಟ್ಟೆಯ ತುತ್ತು
ಗಂಟಲ ಸೇರದೆ,
ಮತ್ತೊಮ್ಮೆ ಮುಗ್ಧ ನಗುವಿಗೆ ಮರು-ಬಿಂಬವಾಗದೆ
ಅಹಂಕಾರಕ್ಕೆ ಬಲಿಯಾಗಿದ್ದೆ!!

ಈಗಲೂ ಚಾಚುವ ಕೈಗಳಿಗೇನೂ ಕುಂದಿಲ್ಲ,
ಚಿಟಿಕೆ ಹಾಕಿದರೆ ಹತ್ತಾರು;
ನೈತಿಕತೆಯ ಪ್ರಶ್ನಾರ್ಥಕ ಚಿನ್ಹೆ
ಎಲ್ಲರ ಅಂಗೈಯ್ಯ ಮೇಲೆ;
ಉತ್ತರಿಸಲು ನಾಲಗೆಯಿಲ್ಲ,
ಹಾಗೇ ಮುಂದಾಗಲು ಗುಂಡಿಗೆಯಿಲ್ಲ!!

ಸಣ್ಣ-ಪುಟ್ಟ ಸುಳಿ, ಚಂಡಮಾರುತಗಳ
ಹೇಗೋ ಎದುರಿಸಿದ್ದು ಗಂಡೆದೆಯ ಹೆಗ್ಗಳಿಕೆ;
ಎಲ್ಲ ಮುಗಿದಾದ ಮೇಲೆ
ಹಣೆ ಮುಟ್ಟಿ, ಬೆನ್ನು ತಟ್ಟಲಾರಿಲ್ಲವೆಂಬ
ವಿಪರೀತ ದುಃಖಕ್ಕೆ
ನನ್ನ ಕೊರಳ ನಾನೇ ಇಚುಕಿಕೊಳ್ಳುತ್ತೇನೆ!!

ನಾವಿಕನಿಲ್ಲದ ದೋಣಿಯ ಒಡಯ
ನಾನೆಂಬ ಮಾಹಿತಿ ಬಹಿರಂಗಗೊಂಡು,
ದಾಳಿಗೊಳಗಾಗಿ ಮುಕ್ಕಾಲು ಸತ್ತಿದ್ದೇನೆ;
ಮಿಕ್ಕ ಕಾಲು ಭಾಗಕ್ಕೆ ಪಶ್ಚಾತಾಪದ ಸೋಂಕು,
ಸಮತೋಲನ ಕಂಡುಕೊಳ್ಳಲಾದೀತೇ
ಒಡೆದ ಮನಸು?!!

-- ರತ್ನಸುತ

ಅಭಿಸಾರಿಕೆ

ಹೇ ಸುಕೋಮಲ ಸುಂದರ ರಮಣಿ
ಅದ್ವಿತೀಯ ಲಾವಣ್ಯ ರಾಣಿ
ಮನೋಹರ ಸಾಗರಿ, ಅಕ್ಷ ಚತುರಿ
ಸುಮಧುರ ಕಂಠ ಸಿರಿ, ಸವಿ ಲಹರಿ!!

ದಟ್ಟ ಕಡಲೊಡಲ ಕುರುಳಿನ ಅಲೆಯೇ
ನೋಟ ಬೇಟೆ ಶರ, ಸಿಕ್ಕಿನ ಬಲೆಯೇ
ಭುಜ ನಿಜ ಜಪಕೆ ಅತಿಶಯ ತಾಣ
ಉಕ್ಕಿದಾಂತರ್ಯ ಬಹು ಗುಣ ವದನ!!

ಮಾದರಿ ಕಲಾಕೃತಿ ಶಿಲೆ, ಶೀಲೆ
ಹೂವ ಬನದ ಸುಗಂಧಿತ ಮಾಲೆ
ಸ್ವಪ್ನ ಸಹಚಾರಿಣಿ, ಗೌಪ್ಯ ಶಾಲೆ
ಕಾವ್ಯ, ಲಯ, ಗಮಕ ಭಾವದ ಬಾಲೆ!!

ಹನಿ ಮುಗಿಲಾಧರ ಮೋಹಕ ಮೌನ
ತೆನೆ ತೊನೆದಾಡುವ ಬಳುಕಿನ ಸಣ್ಣ
ಮೆದು ಪಾದದೊಳದ್ದಿದ ಮಧು ಕುಂಭ
ಇಳಿ ಜಾರಿನ ಸಮ ನವಿರು ನಿತಂಬ!!

ದಶಾಸುರನ ಶಿರ ಬಾಗಿಸುವಂದ
ಪ್ರಕಾಶಮಾನ ಸಮಾನರವಿಂದ
ಕೋಕಿಲ, ಹಂಸ, ನೈದಿಲೆ ಬೆಸೆದ
ಅದ್ಭುತ ಸೊಗಸಿನನನ್ಯಾನಂದ!!

ಮಂಗಳ ಮುಖಿ, ಬೆಳದಿಂಗಳ ಸಖಿ ನೀ
ಗತ, ವಾಸ್ತವ, ಭವಿಷ್ಯದ ಬೆಳಕು
ಶೃಂಗಾರದ ಚಿರಂತನ ಚಿಗುರು
ಅನಂತದೆಡೆ ಸುದೀರ್ಘ ಮೆಲುಕು!!

                               -- ರತ್ನಸುತ

ಖಾಲಿ ಪುಟ ಬರಹ

ಮುಂಗಾರಿನ ಬಿರುಗಾಳಿ
ಹೊತ್ತೊಯ್ದ ಕೆಲ ಹಾಳೆಗಳು
ಖಾಲಿ ಉಳಿದಿದ್ದವು!!
ಮಸಿ ಬಳಿವ ಮೊದಲೇ
ಯಾರಿಗೋ ಓದುವ ಹಂಬಲ?
ನನ್ನ ಖಾಲಿ ಮನಸನ್ನು;
ಖಾಲಿತನಕ್ಕೆ ಬೇಲಿಯ ಹಂಗಿಲ್ಲ,
ಅದಕ್ಕೇ ಇರಬೇಕು!!

ಇನ್ನೂ ಎಚ್ಚರವಾಗದ ಹಾಸಿಗೆ
ನನ್ನ ನಿದ್ದೆ ಗಡಿಯ ಮುಂದೂಡಿದೆ;
ರಾತ್ರಿ ಕನಸಿನ ನಿಮಿತ್ತ
ಹೆಸರಿಡದ ಒಂದು ಕಾದಂಬರಿ ರಚಿಸಿ
ಮನದ ಕಪಾಟಿನಲ್ಲಿಟ್ಟಿದ್ದೇನೆ;
ತೆರೆದೋದಲು ಸಜ್ಜಾಗುತ್ತಿದ್ದಂತೆ
ಕಿಟಕಿಯ ಸಣ್ಣ ಮೂಸೆಯಿಂದ
ಕಿವಿಯೊಳಗೆ ಪವನ ರಾಗ ಹರಿವು!!

ರಾತ್ರಿ ಹಿಡಿದೇ ತೂಕಡಿಸಿದ್ದ
ಲೇಖನಿ ಇನ್ನೂ ಕೈಯ್ಯಲ್ಲೇ ಇದೆ;
ಎಲ್ಲೋ ಕಂಡ ಕೊನೆ,
ಇನ್ನೆಲ್ಲಿಗೋ ಹೊರಳಿದ ಪುಟದ
ದಿನಚರಿಯ ಚಟ ಬಿಡಿಸಲಿರುವ
ಹಸಿಗನಸುಗಳೂ ಕೆಲವೊಮ್ಮೆ
ಆಯಾ ದಿನದ ವಿಷಯಗಳಾಗುತ್ತವೆ;
ಬರೆಯದೆ ಸಾವಿಲ್ಲ!!

ಅಕ್ಷರಗಳು ನಿರಾಕಾರವಾಗಿ,
ಮುಕ್ತವಾಗಿ ಹಾರಾಡುತಿರೆ
ಬಲೆ ಬೀಸಿ, ಸೆರೆ ಹಿಡಿದು
ಬಾಗಿಸಿ ದುಂಡಾಗಿಸುವಾಗ
ಒಂದೊಂದೇ ಹೊರ ಬೀಳುತ್ತವೆ
ಹಾಳೆಯ ಮೇಲೆ ಅಚ್ಚಾಗಲೆಂದು;
ಒಳಗುಳಿದವಿನ್ನೂ ಉಸಿರಾಡುವಾಗ,
ಹೊರಗೆ ಸಾಲು ಸಾಲು ಶವ ಯಾತ್ರೆ!!

ಬನ್ನಿ, ಎಲ್ಲರೂ ಭಾಗಿಯಾಗಿ
ವಿಮುಕ್ತಿ ಕಲ್ಪಿಸೋಣ,
ಸತ್ತ ಭಾವನೆಗಳ ಆತ್ಮ ಸುಖಿಸಲಿ;
ಇನ್ನು ಮೇಲೆ ಬರೆದವೆಲ್ಲಕ್ಕೂ 
ತ್ರಿಶಂಕು ಸ್ಥಿತಿ
ಒಂದು, ಜೀವಂತ ಹೆಣಗಳು
ಇಲ್ಲ, ಸತ್ತ ಜೀವಗಳು;

ಗಾಳಿ ಹೊತ್ತೊಯ್ದದ್ದು ಸ್ವಾಗತಾರ್ಹ,
ಪಂಚಭೂತಗಳಲ್ಲೊಂದಾದ ತಾನು
ಮುಟ್ಟಿಸ ಬಹುದವನು
ಆಪ್ತ ಮನಸುಗಳ ತೃಪ್ತ ಓದಿಗೆ;
ನನ್ನ ಖಾಲಿತನವ ಇಷ್ಟ ಪಡುವವರು
ಯಾರಾದರೂ ಇದ್ದಾರೆಯೇ?!!

                            -- ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...