"ದಿಲ್ ತೋ ಪಾಗಲ್ ಹೈ!!"

ಹೃದಯವೆಂಬ ನಾಕು ತಂತಿ
ತಂಬೂರಿಯೊಳಗಿಂದ
ಒಂದೊಂದು ಮೀಟುವಿಕೆಗೆ
ಒಂದೊಂದು ನಾದ!!

ಎಲ್ಲವನ್ನೂ ಕೂಡಿಸಿ 
ಒಮ್ಮೆಲೆ ತಡವಿಕೊಂಡರೆ
ಜಿಗಿದೆದ್ದ ಸದ್ದು
ಕ್ರಮೇಣ ಮಾಸುವುದು,
ಮತ್ತೆ ಮೀಟದ ಹೊರತು;

ಎಲ್ಲವನ್ನೂ ಬಿಗಿಸಿಡಬೇಕು;
ಯಾವೊಂದ ಸಡಿಲಿಸಿದರೂ
ಮನಸಿನ ಕಿವಿ ಅಪಶೃತಿಯ 
ಅರಿತುಕೊಳ್ಳುವ ಅಪಾಯವಿದೆ!!

ಒಂದೊಂದು ತಂತಿಗೂ
ಒಂದೊಂದು ಗಾತ್ರ
ಒಂದೊಂದು ಗಂಟು
ಒಂದೊಂದು ಸ್ಥಾಯಿ

ಅಡಿಗೊಂದು ಸ್ಥಿರತೆ
ಮುಡಿಗೊಂದು ಕೀಲಿ
ಕಂಪಿಸಲು ಸಜ್ಜು
ಗೆದ್ದ ರಮಣಿಯರ ಕೈಲಿ!!

ಯಾರೂ ಈವರೆಗೆ
ಸಂಯೋಜನೆಯಲೆನ್ನ
ಚಿತ್ತ ಸೂರೆಗೊಳುವ
ಜೀವ ರಾಗ ಬಿಡಿಸಿಲ್ಲ;
ಬಹುಶಃ ಸಹಕರಿಸದಿತ್ತೇನೋ
ಹಾಳು ಹೃದಯ?!!

ಕುದಿ ರಕ್ತ ಮಡುವಲ್ಲಿ
ಸದಾ ಮಿಂದ ತಾನು
ನಿತ್ರಾಣ ತಂಬೂರಿ;
ತುಕ್ಕು ಹಿಡಿದ ತಂತಿ
ತಲ್ಲಣಕೆ ಸಲ್ಲದಿರೆ
ರಕ್ತ ಚಲನೆಯನ್ನೇ
ಧಿಕ್ಕರಿಸಿ ಬಿಡಬಹುದು;
"ದಿಲ್ ತೋ ಪಾಗಲ್ ಹೈ!!"

ಇನ್ನು ಕಾಯಿಸುವುದು ಸಾಕು
ಬಂದೊಮ್ಮೆ ನೇವರಿಸು ನಲ್ಲೆ
ಸಾಯುವನಕ ಮಿಡಿಯುತಿರಲಿ
ಹುಚ್ಚು ಹೃದಯ
ಮತ್ತೆ ನೀ ಬರುವೆಯೆಂಬ
ಅಗಾಧ ಆಸೆಯಲ್ಲಿ!!

                           -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩