Thursday 19 June 2014

ಒಲವಿಂದ

ನೋಟ ಭಿಕ್ಷೆ ನೀಡಿ ಹೋದೆ
ಎನ್ನ ಕಕ್ಷೆಯಲ್ಲೇ ಒಮ್ಮೆ
ಸುತ್ತುವರಿದು ಹೋದರೇನು
ಬಾದೆ ನಿನ್ನದು;
ಏನು ಹೇಳಬೇಕೋ ಕಾಣೆ
ಎದುರು ಸಿಕ್ಕೆ ದಿಢೀರ್ ಮೊನ್ನೆ
ನಿನ್ನ ಮುಂದೆ ಉದ್ದ ನಾಲಗೆ
ಸಣ್ಣದು!!

ಶಂಖ ಊದಿದಂತೆ ಸದ್ದು
ಅಕ್ಕಿ ಕಾಳ ನೀನೇ ಖುದ್ದು
ಹಿಡಿಯಲಿಟ್ಟು ಮರೆಸುತಿದ್ದೆ
ತಿಳಿಯದಾಯಿತು;
ಹಾಗೇ ಬಿಟ್ಟುಗೊಡುವ ವೇಳೆ
ನಿಂತೆ ಸಿಡಿಲು ಬಡಿದ ಹಾಗೆ
"ಕೈಯ್ಯ ಹಿಡಿದು ತಡೆಯೋ" ಎಂದು
ಬಳೆಯು ಕೂಗಿತು!!

ನಾಲ್ಕು ಪದಗಳನ್ನು ಹೊಲಿದು
ಕಿತ್ತು ಹೋದ ಪದ್ಯ ಹೊಸೆದು
ನೆತ್ತರಲ್ಲಿ ಬರೆವ ಎಂದು
ಬೆರಳ ಚುಚ್ಚಿದೆ;
ಮಾಯ ಗಾಳಿ ಬೀಸಿ ತಾನೇ 
ಎದೆಯ ನೀವಿ ಹೋಯಿತಲ್ಲಿ
ಪದಗಳೆಲ್ಲ ಮಿಥ್ಯವಗಿ
ಅಳಲು ತೊಡಗಿದೆ!!

ರಗ್ಗಿನೊಳಗೆ ನಿನ್ನ ಮಗ್ಗಿ
ಮತ್ತೆ ಮತ್ತೆ ಪಠಿಸುವಾಗ
ಸಿಗ್ಗು ಚೂರು ಹೆಚ್ಚಿ ದಿಂಬ
ತಬ್ಬಿಕೊಳ್ಳುವೆ;
ಕನಸಿನಲ್ಲಿ ಮುಸುಕು ಧರಿಸಿ
ಕಣ್ಣ ತಪ್ಪಿಸುತ್ತ ಹೊರಟೆ
ಒಮ್ಮೆ ನನ್ನ ಹೆಸರ ಹಿಡಿದು
ಕೂಗಬಾರದೇ?!!

ಎದೆಯ ಕಣದ ಬಳ್ಳದಲ್ಲಿ 
ಸೇರು-ಸೇರು ಉಸಿರು ಅಳೆದು
ನಿನ್ನ ಸೆರಗ ಮಡಿಲ ತುಂಬಿ
ಮುಕ್ತನಾಗುವೆ;
ಒಂದು ಬೊಗಸೆಯಷ್ಟು ನೀನು
ನಿನ್ನ ಪಾಲಿನಿಂದ ನೀಡು
ಬದುಕ ಹೇಗೋ ನಡೆಸಿಕೊಂಡು
ಮುಂದೆ ಸಾಗುವೆ!!

                           ಇಂತಿ ನಿನ್ನವ;
                             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...