Monday 30 June 2014

ಕೈ ಕೊಟ್ಟ ಮುಂಗಾರು

ಸಣ್ಣ ಮಳೆಯೊಂದು
ಹೀಗೆ ಬಂದು, ಹಾಗೆ ಹೋಯಿತು
ಕೋಳಿ ತಲೆ ಒದರಲೂ ಇಲ್ಲ
ಮೇಕೆ ಅರಚಿಕೊಳ್ಳಲೂ ಇಲ್ಲ
ಯಾವ ಜಾಡ ಸೀಮೆ ಗರಿಕೆಯಲ್ಲೂ
ಕಿಂಚಿಷ್ಟೂ ಉತ್ಸಾಹ ಕಂಡಿಲ್ಲ;
ಆಕಾಶ ಈವರೆಗೆ ಕಲಿಸಿದ ಪಾಠ
ಸಂಪನ್ನವಾದಂತಾಯಿತು!!

ತಿಂಗಳ ಹಿಂದೆ ಸಗಣಿ ಸಾರಿಸಿದ
ಮೊಗಸಾಲೆಯ ಅಂಗಳ
ಮತೊಂದು ಹಬ್ಬಕ್ಕೂ ಲಾಯಕ್ಕಾಗಿ
ಬರೆ ರಂಗೋಲಿ ಪುಡಿ ಹೆಣೆದುಕೊಂಡರಾಯ್ತು;
ಪಕ್ಕದ ವಟಾರದಲ್ಲಾರೋ
ಕೊಡೆ ತರಲೆಂದು ಮನೆಗೆ ಓಡಿ
ಎಡವಿ ತಲೆ ಪೆಟ್ಟಾಯಿತಂತೆ;
ಇರದ ತಲೆಗೆ ಏನಾದರೇನಂತೆ!!

ಹುಸಿ ಮಿಂಚು, ಗುಡುಗ ಹರಿಸಿ
ಇಲ್ಲಲ್ಲದಿದ್ದರೂ ಮತ್ತೇಲ್ಲೋ ಸುರಿದ
ಸೂಚನೆಯ ನಿರಾಳತೆ ಕೊಟ್ಟು
ಬಿರಿದ ಭೂಮಿಯ ಬಾಯಿಗೆ ಎಳ್ಳು ನೀರು;
ಗಾಳಿ ಬೇಸಿದ ದಿಕ್ಕ ಹಿಡಿದು
ಅಪ್ಪ ಮತ್ತಾರಿಗೋ ಫೋನು ಹಚ್ಚುತ್ತಾರೆ
"ಅಲ್ಲೇನಾರಾ ಮಳೆ ಬಂದದಾ?"
ಇನ್ಯಾರದ್ದೋ ಫೋನು, ಅದೇ ಪ್ರಶ್ನೆ
ಅಪ್ಪನ ಪೆಚ್ಚು ಮೋರೆಯ ಮಿಶ್ರ ಕಲೆಗಳು!!

ಇಗೋ-ಅಗೋ ಎಂದು
ಸತಾಯಿಸಿ ಪಥ ಬದಲಿಸುವ
ಕರಿ ಮೋಡಗಳ ಸವಾರ
ಕಂಠ ಪೂರ್ತಿ ಕುಡಿದೇ ಇರಬೇಕು;
ಒಮ್ಮೆಯಾದರೂ ಸಿಗಬೇಕವ
ಊರಾಚೆ ಸೇಂದಿ-ಸಾರಾಯಿ ದುಖಾನು ಬಳಿ
ಚಿಲ್ಲರೆ ಕಾಸಿಗೆ ಕೈಯೊಡ್ಡಿ;
ಚಳಿ ಬಿಡಿಸೋಕೆ ತುದಿಗಾಲೂ ತಯಾರಿದೆ!!

ಮುಂಗಾರಿನ ಸಿಂಗಾರಕ್ಕೆ
ಹಸಿರುಡಬೇಕಿದ್ದ ಹೊಲಕ್ಕೂ
ಒಣ ಬಂಗಾರದ ಮೇಲೆ ಒಲವು;
ಬಿಸಿಲ ದಿಬ್ಬಣಕೆ ಮೈಯ್ಯೊಡ್ಡಿ
ಬುಡ ಕಾಯ್ದುಕೊಂಡ ಅಲ್ಪ ತೇವವ ಹೀರಿ
ಅಂಗಾತ ವಾಲಿದ ತೆನೆ
ಚಿರ ನಿದ್ರೆಗೆ ಜಾರುತ್ತಿದಂತೆ 
ಮತ್ತೊಂದು ಹುಸಿ ಮಿಂಚು!!

                            -- ರತ್ನಸುತ

1 comment:

  1. ಯಾಕೋ ನನ್ನ ಹಳ್ಳಿಯ ಚಿತ್ರಣವೂ ಇದೇನೇನೋ?
    "ಮುಂಗಾರಿನ ಸಿಂಗಾರಕ್ಕೆ
    ಹಸಿರುಡಬೇಕಿದ್ದ ಹೊಲಕ್ಕೂ
    ಒಣ ಬಂಗಾರದ ಮೇಲೆ ಒಲವು"

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...