Tuesday 10 June 2014

ಟೋಕನ್ ನಂಬರ್ "ಹದ್ಮೂರು"

ನನ್ಗೊಂದು ನಂಬರ್ ತಗ್ಲಾಕಿದ್ರು;
ನನ್ ಹೆಸ್ರು ಕೋಮಾದಲ್ಲಿದ್ದು
ಈಗ್ಲೋ, ಆಗ್ಲೋ ಅಂತಿರ್ಬೇಕು
ಪ್ರತಿಯೊಬ್ರೂ ನನ್ನ ಆ ನಂಬರ್ರಿಂದ 
ಗುರ್ತುಸ್ತಾಯಿದ್ರೆ
ಹೆಸ್ರ ಬಾಯ್ಗೆ ಮಣ್ಣು ಹಾಕೋಣ ಅನ್ಸ್ತು!!

"ನಂಬರ್ ಹದ್ಮೂರು " 
ಯಾರೋ ಕೂಗಿದ್ರು;
ಕಾಂಪೌಂಡ್ರು?
ಅವ್ನು ಕೂಗಿದ್ದು ನನ್ನ ಟೋಕನ್ ನಂಬರ್,
ಅರ್ಥಾತ್ ನನ್ನನ್ನೇ!!
ಕೈ ಏರ್ಸಿ ಹತ್ರ ಹೋದೆ
"ನಂಬರ್ ಹದ್ಮೂರು ನೀವೇನಾ?" ಅಂದ,
"ಅಲ್ಲ; ಹೌದೌದು"ಅಂದೆ
ವಿಚಿತ್ರವಾಗಿ ನೋಡ್ತಾ
"ಇಲ್ಲೇ ಕೂತಿರಿ, ಡಾಕ್ಟ್ರು ಕರಿತಾರೆ" ಅಂದ!!

"ನಂಬರ್ ಹದ್ಮೂರು " 
ಡಾಕ್ಟ್ರೇ ಕರ್ದಿರ್ಬೇಕು, ನಿದಾನಕ್ಕೆ ಇಣುಕ್ದೆ;
"ಯಾರ್ರೀ" ಅಂದ್ರು
"ಸರ್ ನಾನು ಭರತ" ಅಂದೆ
"ಟೋಕನ್ ನಂಬರ್ ಹೇಳ್ರೀ!!" ಅಂದ್ರು
ಎಲ್ಲೋ ಜೇಬಿಗೆ ತುರ್ಕ್ಕೊಂಡಿದ್ನ
ತಡಕಾಡಿ ತೋರ್ಸಿ "ಹದ್ಮೂರು" ಅಂದೆ
"ಒಳಗ್ ಬನ್ನಿ" ಅಂದ್ರು
ಅಯ್ಯೋ, ಅವ್ನೂ ಕಾಂಪೌಂಡರ್ರೇ!!

ಡಾಕ್ಟ್ರು ಸದ್ಯ ಡಾಕ್ಟ್ರಂಗೇ ಇದ್ದ;
ಯಕಂತೀನಿ ಅಂದ್ರೆ,
ನಮ್ ಗೌರ್ಮೆಂಟ್ ಆಸ್ಪತ್ರೆಲಿ
ರೋಗಿ ಯಾರೋ, ಡಾಕ್ಟ್ರು ಯಾರೋ
ಗೊತ್ತೇ ಆಗಲ್ಲ ನೋಡಿ;

ಆ ವಯ್ಯ ಬಟ್ಟೆ ಇಸ್ತ್ರಿ ಮಾಡುಸ್ಕೊಂಡು,
ಸೆಂಟು-ಗಿಂಟು ಹೊಡ್ಕೊಂಡು,
ಕತ್ತಾಗ್ ಸ್ತೆತೋಸ್ಕೋಪ್ ನೇತಾಕ್ಕೊಂಡು,
ಇದಪ್ಪ ಡಾಕ್ಟ್ರು ವರ್ಸೆ ಅನ್ನೋ ಥರ ಇದ್ದ!!

"ಏನ್ರೀ ಪ್ರಾಬ್ಲಮ್ಮು" 
"ಸಾರ್ ಹಿಂಗಿಂಗೆ, ಹಂಗಂಗೆ" ಅಂದೆ
ಎಲ್ಲಿತ್ತೋ ಬೆಟಾಲಿಯನ್ನು,
ಕೈಯ್ಯಾಗ್ ಬುಕ್ಕು, ಗೀಚೋ ಪೆನ್ನು ಹಿಡ್ಕೊಂಡು
ಕಾಡ್ ಮಂಗ ನಾಡಿಗ್ ಬಂದಾಗ
ನಾಡಿನ್ ಮಂಗಗ್ಳು ಪಿಳಿ ಪಿಳಿ ಅಂತ 
ನೋಡೋ ಹಂಗೆ ನೋಡ್ತಿದ್ರು;
ಸದ್ಯ ಮೈ ಪರ್ಚ್ಲಿಲ್ಲ 
ಆ ಜೂನಿಯರ್ ಡಾಕ್ಟ್ರುಗ್ಳು!!

ಯಾವ್ದೋ ದೊಡ್ರೋಗ ಇರ್ಬೇಕು ಅಂತ
ಆಸೆಯಿಂದ ಬಂದೋರ್ಗೆ
ಅಳ್ಸಿದ್ ದ್ವಾಸೆನೂ ಸಿಗ್ಲಾರ್ದಂಗ್ ಮಾಡಿದ್ನನ್ನ
ಅದೆಷ್ಟು ಬೈಕೊಂಡ್ರೋ ಪಾಪ!!

ನಾಕು ಗುಳ್ಗೆ ಬರ್ದ್ಕೊಟ್ಟು
ಇರೋ ಖಾಯ್ಲೆ ಎಲ್ಲ ಮೇಲಾಯ್ತದೆ
ಅಂತ ಹೇಳ್ತಿದ್ದಂಗೆ
"ನಿನ್ ಹೆಸ್ರೇನಂದೆ?" ಕೇಳ್ದ ಡಾಕ್ಟ್ರು
"ಹದ್ಮೂರು" ಅಂದೆ
"ಹೆಸ್ರೇಳಪ್ಪ ಹೆಸ್ರು" ಅಂದ
ಕಾಂಪೌಂಡ್ರಿನ್ ಮುಖ ನೆಪ್ಪಾಗಿ
ಮೆಲ್ಗೆ "ಭರತ" ಅಂದೆ!!

                           -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...