ದಿಢೀರ್ ಮಳೆ

ನೀಲಿ ಆಕಾಶದಲ್ಲಿ
ಅಲ್ಲಲ್ಲಿ ಹತ್ತಿ ಅದ್ದಿ ಮೆತ್ತಿದಂತೆ
ಇಷ್ಟಿಷ್ಟೇ ಕೊಸರು ಮುಗಿಲು,
ಮಳೆಗರೆವುದು ದೂರದ ಮಾತು!!

ಬಿಸಿಲ ಮೊಗಕ್ಕೆ ಕೊಡೆ ಹಿಡಿದವರು
ಏ.ಸಿ ಕೆಳಗೆ ಪಗಾರ ಎಣಿಸುವ
ಈ ನಾಡಿಗೆ ಒಗ್ಗಿಕೊಳ್ಳದ ಜನ;
ನಮ್ಮವರೇ ಎಲ್ಲ, ಆದರೂ ನಮ್ಮವರಲ್ಲ!!

ರಸ್ತೆ ಬದಿಯಲ್ಲಿ ಚೆಲ್ಲಿದ ಕಸ
ಗಾಳಿಗೆ ಏಕಾಯೇಕಿ ರಸ್ತೆಗಿಳಿದು 
ಪ್ರತಿಭಟಿಸುವ ಹೊತ್ತಿಗಾಗಲೇ
ಮತ್ತಷ್ಟು ಕಸ ತುಂಬಿದ ಲಾರಿಗಳು
ಹಗುರಾದವು;

ಒಂದು ಬೀದಿಯ ನಲ್ಲಿಯಡಿಯಲ್ಲಿ
ನೂರು ಮನೆಗಳ ಸಾವಿರ ಕೊಡಗಳು
ದಣಿವಾರಿಸಿಕೊಂಡ ಸುಂದರ ದೃಷ್ಯ ;
ಪಕ್ಕದ ಬೀದಿಯಲಿ
ರಾಡಿಯಾದ ಕಾರಿನೊಡಲ ತೊಳೆದು-ತೊಳೆದು
ಸಂದರ್ಭದ ಅಪಹಾಸ್ಯ !!

ಸಂಜೆ ಮೂಡುತ್ತಿದ್ದಂತೆ
ಸುಂದರ ಕನಸೆಂಬಂತೆ
ಚಾಮರ ಹೊದ್ದು ಬಳುಕುತ್ತ
ಇದ್ದಲ್ಲೇ ಸುದ್ದಿಯಾದ ತರುಲತೆಗಳು
ಮಳೆಯಾಗುವ ಸೂಚನೆ ನೀಡುತ್ತಿವೆ!!

ಬಿರುಸು ಗಾಳಿಯ ಹೊಡೆತಕ್ಕೆ
ಎಲ್ಲಿಂದಲೋ ತೇಲಿಬಂದ ಮೋಡಗಳು
ಇಗೋ-ಅಗೋ ಎಂದು ಸಾತಾಯಿಸಿ
ಇನ್ನೂ ಮುಂದಕ್ಕೆ ತೇಲುತ್ತಿದ್ದಂತೆ
ಹಣೆಗೆ ಹಸ್ತರಕ್ಷೆ ನೀಡಿ ಎದುರು ನೋಡುತ್ತಿದ್ದ
ಕಣ್ಗಳ ಪಾಲಿಗೆ ನಿಜಕ್ಕೂ ಸಿಡಿಲು ಬಡಿಯಿತು!!

ಆದಷ್ಟೂ ದೂರ ಪಯಣ ಬೇಳೆಸಿ
ಎಲ್ಲೋ ದಣಿವಾರಿಸಿಕೊಳ್ಳಲು ನಿಂತ ಒಂದಕ್ಕೆ
ಹಿಂದೆಯೇ ಬಂದ ಮತ್ತೊಂದು ಡಿಕ್ಕಿ ಹೊಡೆದು
ಮೋಡಗಳ ಸರಣಿ ಸಂಘರ್ಷ;
ಭೂಮಿಗದು ಸ್ವಾಗತಾರ್ಹ ಕುರುಹು!!

ಹಳ್ಳಿಗಳ ರಾಜ ಕಾಲುವೆ ತುಂಬಿ
ಕೆರೆಗಳು ನಳನಳಿಸುತ್ತಿದ್ದರೆ;
ಪಟ್ಟಣಗಳ ಗಲ್ಲಿ-ಗಲ್ಲಿ ಗಟಾರುಗಳು
ತುಂಬಿ ನಾರುವುದೇ ದೊಡ್ಡ ತಲೆ ನೋವು!!

ದಿಢೀರ್ ಮಳೆಯ ಅಬ್ಬರದಿಂದ
ಕೆಲವರ ಪಾಲಿಗೆ ಹಬ್ಬವಾದರೆ
ಇನ್ಕೆಲವರಿಗೆ ಅಯ್ಯಯ್ಯೋ ಅಬ್ಬಬ್ಬಾ!!

                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩