Tuesday 10 June 2014

ಮಳೆಯೊಡನೆ ಮಾತು

ಮಳೆ ಹನಿ ಮಾತಾಡುತ್ತಿದೆ
ಸಾಲು ಬೀದಿ ದೀಪಗಳ ಮೇಲೆ
ಚಿಟ ಪಟ ಸದ್ದು ಮಾಡುತ್ತ;
ಮುದಿ ದೀಪಗಳು ತುಸು ಹೆಚ್ಚಿಗೇ ಬೆಳಗಿ
ಕತ್ತಲಿಗೆ ಜಾರುವ ಮುನ್ನ
ಹತ್ತಿರಕೆ ಕರೆದು ಮುತ್ತಿಡುತ್ತಿವೆ
ಯಾವುದೋ ಜನ್ಮ ರಹಸ್ಯವ ಬಯಲಿಗೆಳೆದು!!

ಎಲೆಗೊಂದು ಗುಟ್ಟು,
ಹಿಂದಿಂದೆ ಸಾಲು-ಸಾಲು ಗುಟ್ಟುಗಳು;
ಎಲೆಯ ತೋಯ್ದದ್ದಲ್ಲದೆ
ಯಾವೊಂದೂ ತನ್ನಲ್ಲುಳಿಸಿಕೊಳ್ಳದೆ 
ಬಯಲಾಗುವ ಮುನ್ನ
ಗರಿಕೆಗೂ ಸಾರಿದ್ದರ ಕುರುಹು
ಜಾರು ನೆಲ, ಕೆಸರ ಮಡಿಲು!!

ರಾಜ ಮನೆತನದ ಕುದುರೆ ಗಾಡಿ
ನೆಲ ಕಚ್ಚಿದ್ದು ಸುದ್ದಿಯಲ್ಲ,
ಲಕ್ಷಗಟ್ಟಲೆ ಹೆಜ್ಜೆ ಗುರುತುಗಳು
ರದ್ದಿಯಾಗಿ ಕೊಚ್ಚಿ ಹೋದವು;
ವರದಿಗಾರರು ಕೊಡೆ ಹಿಡಿದು
ಬಿಸಿ ಚಹ ಹೀರುವಲ್ಲಿ ನಿರತರಾದರೆ
ದಿನ ಪತ್ರಿಕೆ ಇನ್ಯಾರದ್ದೋ ರಕ್ಷಣೆಗೆ
ಮುದ್ದೆ ಮುದ್ದೆಯಾಗಿ ಹೋಗಿತ್ತು!!

ಬಿಳಿ ತೊಟ್ಟವರ ಮಡಿ
ಮಡಿವುದೂ ಕೊನೆಗೆ ರಾಡಿಯಲ್ಲಿ;
ತುಂಬಿದ ಮ್ಯಾನ್ ಹೋಲುಗಳು
ಅಗತ್ಯಕ್ಕೂ ಮೀರಿ ಸೇವಿಸಿದ ನಾಯಿಯಂತೆ
ಕಕ್ಕುತ್ತಿದ್ದರೆ, ಇಡಿ ಬೀದಿ ದುರ್ನಾತ!!

ದ್ವಿಚಕ್ರಗಳು ಅರ್ಧ ಮುಳುಗಿ
ಸವಾರರು ಇದ್ದಲ್ಲೇ ಬಿಟ್ಟು ಹೋಗಿದ್ದರು,
ಬೇಜವಾಬ್ದಾರಿ ತಂದೆ 
ಮಗುವನ್ನ ಸಂತೆಯಲ್ಲಿ ಬಿಟ್ಟು ಹೋದಂತೆ;
ಇನ್ನು ತಳ್ಳು ಗಾಡಿಗಳಿಗೆ 
ಎಷ್ಟು ತಳ್ಳಿದರೂ ಕದಲುವ ಮನಸಿಲ್ಲ!!

ರಿಪೀರಿಯಾಗಿ ಕೂತ ಲಾರಿ,
ಮುರಿದು ಬಿದ್ದ ಹೆಮ್ಮರದ ರೆಂಬೆ,
ಗೋಡೆ ಕುಸಿತ, ಮಳೆ ಸತತ
ಮೂರು ತಾಸಿಗೂ ಹೆಚ್ಚು ಹೊತ್ತು ಸುರಿದು
ಇನ್ನೂ ನಿಲ್ಲುವ ಲಕ್ಷಣಗಳಿಲ್ಲ!!

ಹನಿಗಳ ಬಿಡುವಿಲ್ಲದ ಮಾತು-ಕಥೆ
ನನ್ನೊಡನೆಯೂ ಸಾಗಿತ್ತು;
ಯಾವುದೋ ಪೂರ್ವಜನ್ಮದಲ್ಲಿ
ಬಿಟ್ಟು ಹೋದವಿರಬೇಕು
ಮುಗಿಯಲೇ ಇಲ್ಲ!!

                            -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...