ಗಿಣಿ ಮತ್ತು ಕಣ್ಣೀರು

ಭವಿಷ್ಯ ನಿಡುಯುತ್ತೇನೆಂದ ಗಿಣಿ ಶಾಸ್ತ್ರದವನು
ನನ್ನ ಅಂಗೈಯ್ಯ ತನ್ನ ಅಂಗೈಯ್ಯಲಿ ಬಳಸಿ, ಸಾರಿಸಿ
ಕಣ್ಣ ಕಮರಿಸಿ ಮತ್ತೆ ಅರಳಿಸಿ
ರೇಖೆಗಳ ಬೆಂಬಿಡದಂತೆ ಜಾಲಾಡಿ
ಕೊನೆಗೊಮ್ಮೆ ನನ್ನ ಮುಖ ನೋಡುತ್ತಾನೆ,
ಕಣ್ತುಂಬ ರಾಶಿ ನೀರ ತುಂಬಿಸಿಕೊಂಡು;
ತಲೆ ಬಾಗಿಸಿ ಎರಡು ತೊಟ್ಟು ಬಿಟ್ಟು ಕೊಟ್ಟು
ಹಿಂದಿರುಗಿಸುತ್ತಿರುವಂತೆ ನನಗೂ ಅಳು ತರಿಸಿತು,
ಪಂಜರದ ಗಿಣಿ ವಿಲ-ವಿಲ ಒದ್ದಾಡುತ್ತಿತ್ತು!!

ಅವನ ಬಳಿ ಇದ್ದ ಕಟ್ಟಿನ ರಟ್ಟಿನ ಹಾಳೆಗಳು
ನನಗೆ ಯಾವ ದಿಕ್ಸೂಚನೆಯನ್ನೂ ನೀಡದೆ
ಗಾಳಿಯಲ್ಲಿ ಹಾರಿ ಹೋಗುತ್ತಿದ್ದಂತೆ
ಕಣ್ಣೊರೆಸಿಕೊಂಡು ಒಂದೊಂದನ್ನೇ ಹೆಕ್ಕಿ
ಮತ್ತೆ ಕಟ್ಟಿಕೊಳ್ಳುತ್ತ ಹರಿದ ಚಾಪೆಯ ಮೇಲೆ
ಅಂಡೂರಿ ಕೂರುವಾಗಲೇ ಗಮನಿಸಿದ್ದು
ನನಗೆ ಆತ ಹಾಸಿದ್ದು ಮೆತ್ತನೆಯ ಹೊಚ್ಚ ಹೊಸ ಚಾಪೆ!!

ಮೂಖನಾದವನ ಮೌನವೂ ದುಃಖ ಸಾರುತ್ತಿತ್ತು
ಗಿಣಿ ಎಚ್ಚೆತ್ತುಕೊಂಡು ಹೇಳಲಾರಂಬಿಸಿತು
ನಿರ್ಗತಿಕ ಯಜಮಾನ ದಿನ ರಾತ್ರಿ ತನಗೆ
ರಹಸ್ಯವಾಗಿ ಪಿಸುಗುಡುತ್ತಿದ್ದ ಕಥೆಯ

"ಮೂವತ್ತು ವರ್ಷಗಳ ಹಿಂದಿನ ಮಾತು
ಇದೇ ಸಂತೆ ಬೀದಿಯಲ್ಲಿ ಕಣೆಯಾದ ತನ್ನ ತಮ್ಮ
ನೀಲಿ ಚಡ್ಡಿ, ಹಳದಿ ಅಂಗಿ ತೊಟ್ಟಿದ್ದು
ಇನ್ನೂ ಕಣ್ಣಿಗೆ ಕಟ್ಟಿದಂತಿದ್ದುದ
ಮರೆಯಲೆಂದೇ ದಿನಾಲೂ ಕುಡಿವುದು
ತಾನೊಬ್ಬ ಪಾಪ್ಪಿಯೆಂದು ನುಡಿವುದು"

ನನ್ನಲ್ಲಿ ತನ್ನ ತಮ್ಮನ ಕಂಡನಾ?
ಇಲ್ಲ ನಾನೇ ಇವನ ತಮ್ಮನಾ?
ಭವಿಷ್ಯವ ತಿಳಿವುದ ಬಿಟ್ಟು
ಕಿಸೆಯಿಂದ ನೂರು ರೂಗಳ 
ಎರಡು ನೋಟನ್ನ ತನ್ನ ಕೈಲಿಟ್ಟು
ಒದ್ದೆ ಕಣ್ಣಲ್ಲೇ ಎದ್ದು ಹೋದೆ!!

ತಿಂಗಳು ಕಳೆಯಿತು 
ಆ ಬೀದಿ ಕಡೆ ತಲೆ ಹಾಕಲೂ ಪುರುಸೊತ್ತಿರಲಿಲ್ಲ;
ಅಂದೊಮ್ಮೆ ದೇವರು ಕೊಟ್ಟ ಅಣ್ಣನ
ಕಾಣಲೆಂದು ಆ ಕಡೆ ಗಾಡಿ ಹೊರಡಿಸಿದೆ
ಅದೇ ಚಾಪೆ, ಅದೇ ಗಿಣಿ, ಅದೇ ಅಣ್ಣ
ತಮ್ಮನ ಸ್ಥಾನದಲ್ಲಿ ಬೇರಾರೋ ಬಿಕ್ಕುತ್ತಿದ್ದ!!

                                       -- ರತ್ನಸುತ

Comments

  1. ಬಿಕ್ಕುತ್ತಿದ್ದವನು ನನಗ್ಯಾಕೋ ನನ್ನಂತೆಯೇ ಕಂಡ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩