ಬೆಳಕಿನ ಕತ್ತಲು

ಬೆಳಕಿಗೂ ಕತ್ತಲಿಗೂ ನಡುವೆ
ಕೇವಲ ಒಂದು ದೀಪದ ಅಂತರ,
ಹಚ್ಚಿಟ್ಟರೆ ಮಾತ್ರ;
ಇಲ್ಲವಾದಲ್ಲಿ, ತಾಮಸ ಉದರದಿ
ಜೀರ್ಣವಾದ ಬೆಳಕು
ಕಡ್ಡಿ ಗೀರುವ ಕೈಗಳ
ಅಲ್ಲಿಂದಲೇ ಬೇಡಬೇಕು
ಸಣ್ಣ ಕಿಚ್ಚಿನ ಸಲುವಿಗೆ!!

ಬೆಳಕು ತಕರಾರಿನ ಸರಕು,
ಕತ್ತಲು ಸ್ತಬ್ಧ ಏಕತಾನತೆ;
ಕತ್ತಲಿಗೆ ಕಿವಿ ಚುರುಕಾದರೆ
ಬೆಳಕಿಗೆ ಕಣ್ಣು;
ಗ್ರಹಿಕೆಯೆಂಬುದೇ ಬೇರೆ,
ಕಂಡು, ಕೇಳುವುದಕ್ಕೂ ಮಿಗಿಲು;

ಬೆತ್ತಲ ಬಯಲಾಗಿಸುವ ಬೆಳಕು
ಕತ್ತಲ ಗುಲಾಮ,
ಕೆಲವೊಮ್ಮೆ ಕತ್ತಲೂ ಮಣಿವುದು
ಬೆಳಕ ಬೆರಗಿಗೆ;
ಇದು ಸಾಂದರ್ಭಿಕ ಆಟ,
ಮಾರ್ಮಿಕ ಅವಲೋಕನ,
ಬೆಳಕು-ಕತ್ತಲ ದಾಟಿ
ಸ್ಥಿರಾಸ್ಥಿತಿಯ ತಲುಪಲು!!

ನೆರಳು ಬೆಳಕಿನ ಕತ್ತಲು,
ಕತ್ತಲು ನೆರಳಿನ ಬೆಳಕು;
ಎಲ್ಲವೂ ಅಲ್ಲಲ್ಲೇ ಗಿರಕಿ ಹೊಡೆವ
ಪರಿಕಲ್ಪನಾ ಸೂತ್ರಗಳು!!

ಜೊನ್ನಿಗೆ ಇರುಳ ಸನ್ಮಾನ,
ತಾರಕ ಸಭೀಕರೆದುರು
ಘನ ಬಿಗುಮಾನ;
ನೇಸರನ ದಾಳಿಗೆ
ಸೋಲೊಪ್ಪದ ಸಮರ,
ಎಚ್ಚೆತ್ತ ಕಣ್ಣಿಗೆ
ಭೀಕರ ದರ್ಶನ!!

ಮಣ್ಣಿನೊಳಗೆ ಹೆಣವಾದವರು
ಕತ್ತಲ ಮೋಹಿಸಿದವರೇ ಇರಬೇಕು;
ಹುಟ್ಟಿಗೆ ಹಪಹಪಿಸಿ
ಕಣ್ಬಿಟ್ಟ ಹಸುಳೆಗಳಲ್ಲಿ
ಅಬ್ಬಬ್ಬಾ ಎಷೋಂದು ಅಮಾಯಕ ನಿರೀಕ್ಷೆ?!!

ಬಹುಶಃ ಗೆದ್ದು ಸೋತು 
ಸೋತು ಗೆಲ್ಲುವ ದಿನ ನಿತ್ಯದ ಆಟದ
ಮುಕ್ತ ಮೈದಾನದ ವೀಕ್ಷಣೆಯಲ್ಲಿ
ಮೈ ಮರೆತ ನಾವುಗಳು
ಬೆಳಕಿಗೆ ಬದುಕನ್ನ
ಕತ್ತಲಿಗೆ ನಿದ್ದೆಯುಣಿಸಿ ಕೈ ತೊಳೆಯುವಾಗ
ನೆರಳು ಬಿಕ್ಕಿದ್ದ ಕೇಳಿಸಿಕೊಳ್ಳಲಿಲ್ಲವೆನಿಸುತ್ತೆ!!

                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩