ಚಂದ್ರ ಪ್ರಸ್ತ

ಕನಸಿನ ಚಂದಿರನು
ಮನಸಲ್ಲಿ ಮಣ್ಣಾದ
ಅಳಿಸು ಬಾರೆ ಸಖಿ
ಹಣೆಯ ತಿಲಕ;
ಗಾಜು ಬಳೆಯನ್ನೊಡೆದು
ಮೋಜು ಕದವ ಬಿಗಿದು
ಬಣ್ಣ ತೊಳೆದು ಮಾಡಿಸೊಂದು
ಜಳಕ!!

ಗುಣಿ ತೋಡಿದವರಾರೋ
ತಿಳಿದಿಲ್ಲ ಈ ತನಕ
ಕೊಡಬೇಕು ಬಕ್ಸೀಸು
ಮರೆಯದಂತೆ;
ಹಿಡಿಯಲ್ಲಿ ಹಿಡಿದಂಥ
ಮಣ್ಣನ್ನೂ ಕೇಳಿದೆ
ತಾನೂ ಕಣ್ಮುಚ್ಚಿ
ಗೊತ್ತಿಲ್ಲವಂತೆ!!

ಅಳುವಾಗ ಕಣ್ಣೊರೆಸಿ
ತಲೆಯ ನೇವರಿಸಿದರು
ಆಪ್ತವೆನಿಸಿತು ಅವರ
ಹಸ್ತ ಸ್ಪರ್ಶ;
ಚಂದಿರನೇ ಇರಬೇಕು
ಎದ್ದು ಬಂದಿರಬೇಕು
ಒಲವೊಪ್ಪಂದಕೆ
ನೂರು ವರ್ಷ!!

ಸಖಿ, ಎಲ್ಲಿ ನೆರಳಿಲ್ಲ?
ಬೆಳಕಲ್ಲಿ ನಾನೆಲ್ಲಿ?
ಹುಡುಕಾಡಲೇ ಬೇಕೆ
ನನ್ನ ನಾನು?
ಎಲ್ಲ ಹೊಂದಿರುವೆ ನಾ
ಆದರೂ ಏನಿಲ್ಲ
ನಾನೆಂಬುದು ಒಂದು
ಮಿಥ್ಯ ಬಾನು!!

ಎಷ್ಟು ಸಮಯ ಉರುಳಿ,
ಇನ್ನೆಷ್ಟು ಉಳಿದಿದೆ?
ಸುಡು ಬಿಸಿಲನು ನಾನು
ಸಹಿಸಲಾರೆ;
ಎದ್ದು ಬರಲೆನ್ನಿನಿಯ
ಮರು ಜೀವ ಪಡೆದಂತೆ
ಜೊನ್ನ ಖುಷಿಗೆ ದುಃಖ 
ಬಡಿಸಲಾರೆ!!

ಹಕ್ಕಿ ಹಾರುತ್ತಲಿವೆ
ಸಂಜೆ ಆಗಿರಬೇಕು
ಹೊತ್ತು ತಾ ಸಿಂಗಾರ
ತೊಡಿಸು ನನಗೆ;
ಈ ಇರುಳು ಉಣಬಡಿಸಿ
ನನ್ನನ್ನೇ ಒಪ್ಪಿಸುವೆ
ಚಂದಿರನು ಇದ್ದಲ್ಲೇ 
ಕರಗೋ ಹಾಗೆ!!

                -- ರತ್ನಸುತ

Comments

  1. ತೀವ್ರತೆಯೇ ಮೈವೆತ್ತಂತಹ ಕವನ.
    ಶೀರ್ಷಿಕೆ ಬಲು ನೆಚ್ಚಿಗೆಯಾಯಿತು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩