ನಮ್ಮೂರ ಹೆಬ್ಬಾಗಿಲಲ್ಲಿ

ನಮ್ಮೂರ ಹೆಬ್ಬಾಗಿಲ ಮುಂದೆ
ಮುನೇಶ್ವರನ ಗುಡಿಯ ಪಕ್ಕ
ಹೊಂಗೆ ಮರದ ಕೆಳಗೆ
ಬತ್ತಿದ ರಾಜಕಾಲುವೆಯಲ್ಲಿ
ಇಸ್ಪೀಟು ಎಲೆಗಳ ಅಟ್ಟಹಾಸ,
ಖಾಲಿ ಸೀಸೆಗಳ ರಂಪಾಟ,
ಗುಟ್ಕಾ, ಬೀಡಿಗಳ ಪುಂಡಾಟ,
ಉದ್ದುದ್ದ ಮೀಸೆಗಳ ಮಸೆದಾಟ!!

ಇಲ್ಲಿ ಲಕ್ಷ್ಮಿ ಕಾಲ್ಮುರಿದುಕೊಂಡು
ಕೆಸರಲ್ಲಿ ಒದ್ದಾಡುವ ವೇಳೆ
ಮುನೇಶ್ವರನ ಹುಂಡಿಯೊಳಗೆ
ಖಾಸಗಿಯಾಗಿ ಅಳುತ್ತಾಳೆಂಬ ಗುಮಾನಿ;
ದೆವ್ವ ಮೆಟ್ಟಿಕೊಂಡಾಗ,
ಹರಕೆ ಹೊತ್ತುಕೊಂಡಾಗ,
ಹರಕೆ ತೀರಿಸಲು ಬರುವ ಜನರಷ್ಟೇ
ಎಂಟಾಣಿ ಬೆಲೆ ತೆತ್ತಿ ಕೈ ಮುಗಿವವರು !!

ಮುನೇಶ್ವರ ಬಹಳ ಮುಂಗೋಪಿ
ವರ್ಷಕ್ಕೊಮ್ಮೆ ಕುರಿ-ಕೋಳಿ ಬಲಿ ಕೊಟ್ಟು
ಊರಿಗೆಲ್ಲ ಬಾಡು ಬಡಿಸಿದರಷ್ಟೇ
ತಣ್ಣಗಾಗುತ್ತಾನೆಂಬುದು ಅಜ್ಜಿ ಕಥೆ;
ಮೊನ್ನೆ ಯಾರೋ ರಕ್ತ ಕಕ್ಕಿ ಸತ್ತವರು
ಹರಕೆ ತೀರಿಸಿರಲಿಲ್ಲವಂತೆ;
ತಪ್ಪು ಕಾಣಿಕೆಯಾಗಿ ಚಪ್ಪಡಿ ಕಲ್ಲಿನುಪ್ಪರಿಗೆ
ಕಬ್ಬಿಣದ ಗೇಟಿಟ್ಟು ಸಣ್ಣ ಗುಡಿ ಕಟ್ಟಿದರು!!

ಸೋತು ಸುಣ್ಣವಾಗಿ, ಪೆಚ್ಚು ಮೋರೆ ಹೊತ್ತು
ಕಾಲುವೆಯಿಂದೆದ್ದು ಬಂದವರು
ಮನೆ ಹೆಂಗಸರಿಗೆ ಮುಖ ತೋರಿಸಲಾಗದೆ
ಉಳಿದ ನಾಲ್ಕು ಕಾಸಿನ ಜೊತೆ
ಮತ್ತೊಂದು ನಾಲ್ಕ ಹವಣಿಸಿಕೊಂಡು
ಕಂಠ ಪೂರ್ತಿ ಕುಡಿದರೆ;
ಗೆದ್ದವರ ಕಥೆ ಬಿನ್ನವಲ್ಲವೆಂಬಂತೆ
ಒಂದೇ ಮೋರಿಯ ಅತಿಥಿಗಳಾಗಿರುತ್ತಾರೆ!!

ಊರಿಗೆ ಅಪರೂಪಕ್ಕೆ ಬರುವ
ದಶಕಗಳ ಹಿಂದೆ ಪಟ್ಟಣ ಸೇರಿದ
ಹೆಸರುವಾಸಿ ರಾಜಕಾರಣಿಗಳಿಗೆ
ಜೈಕಾರ ಹೊಡೆದರೆ, ದಿನಕ್ಕಾಗುವಷ್ಟು
ಇನ್ನೂ ಹೊಗಳಿ ಅಟ್ಟಕ್ಕೇರಿಸಿದರೆ
ವಾರಕ್ಕಾಗುವಷ್ಟು ನೆಮ್ಮದಿ ಜೇಬಿನಲ್ಲಿ!!

ಮುನೇಶ್ವರನಿಗೆ ಕೈ ಮುಗಿದು
ಕಿಲೋ ಮಾಂಸ ತಂದು ಬೇಯಿಸಿಕೊಟ್ಟರೆ
ಕಾಲುವೆಯ ಕಲಾತಾಣದ ಆವರಣ
ರಂಗೆದ್ದು ಕೈ ಬೀಸಿ ಕರೆವುದು;
ಲಕ್ಷ್ಮಿ ಯಾರ ಜೇಬಿಂದ ಯಾರಲ್ಲಿ ಜಾರುವಳೋ?
ಮರುಕ ಪಡಲಿಕ್ಕೆ ಖಾಲಿ ಹುಂಡಿಯಂತೂ ಇದ್ದೇ ಇದೆ!!

                                                       -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩