ಮಳೆ ಶಾಸ್ತ್ರ

ಮುಗಿಲಿನ ಹೆಗಲ ಏರುತ ಬಂದ
ಚಂದಿರನೋ ಬಲು ನಾಜೂಕು
ಎರಡೂ ಕೈಗಳ ಮೇಲಕೆ ಏರಿಸಿ
ಜೋಡಿ ಕುದುರೆಯ ಬಂದೂಕು!!

ಮಳೆ ಸುರಿವಂತಿದೆ ಬೆಳದಿಂಗಳಿಗೂ
ಮೈ ಚಳಿ ಬಿಡಿಸುವ ಮಹದಾಸೆ
ಕರಿ ಮುಗಿಲಾಚೆಗೆ ಬೆಳ್ಮುಗಿಲೊಂದಿದೆ
ಚಿಗುರಿದ ಕರ್ರನೆ ಕುಡಿ ಮೀಸೆ!!

ರಾತ್ರಿಗೆ ಅರಳಿದ ಮೊಗ್ಗಿನ ಪರಿಮಳ
ಚಿಟ್ಟೆಯ ನಿದ್ದೆಯ ಕೆಡಿಸಿತ್ತು
ಒಣಗಲು ಬಿಟ್ಟ ಮಾಳಿಗೆ ಬಿರುಕಿಗೆ
ಮುಂದುವರೆದಂಥ ಕಸರತ್ತು!!

ಬೀದಿ ನಾಯಿಗೆ ರೊಟ್ಟಿಯ ಆಸೆ
ಹೆಚ್ಚಿಸುತ ಕೆಸರಿನ ಬಿಂಬ
ಸತ್ತ ಹೆಗ್ಗಣ ಕಾಗೆಯ ತೇಗಲಿ
ಉಂಡಿತ್ತು ಹೊಟ್ಟೆಯ ತುಂಬ!!

ಕರಿ ಕೊಡೆ ಕೆಳಗಡೆ ಬಿಳಿ ಕೆನ್ನೆಗಳು
ಕೈ ಬಳೆ, ಓಲೆ ಹೊಂದುತಲಿತ್ತು
ಕಣ್ಣಿನ ದರ್ಶನ ಪಡೆಯುವ ಸರತಿಗೆ
ಬರಗೆಟ್ಟ ನೋಟ ಕಾದಿತ್ತು!!

ಸಂಜೆಯ ಮೀರಿ ತೆಳು ಹನಿ ಪಸರಿಸಿ
ಬಂಜೆ ಭೂಮಿಯೂ ಫಲವಾಯ್ತು
ಆಕಳಿಕೆ ಕಣ್ಣಂಚಲಿ ಮೂಡಲು
ತೂಕಡಿಸಿ ತುಟಿ ಮಲಗಿತ್ತು!!

                         -- ರತ್ನಸುತ

Comments

  1. ಮಳೆ ವಸ್ತುವನ್ನು ಕವನವಾಗಿಸಿದ ಹಲವು ಪ್ರಯೋಗಗಳನ್ನು ಓದಿದ್ದೇನೆ. ಆದರೆ ಈ ಕವನದಲ್ಲಿ ಅದು ತೋರುವ ಪರಿ ಮತ್ತು ಉಂಟುಮಾಡುವ ಪರಿಣಾಮಕ್ಕೆ ನಾನಾದೆ ಫಿದಾ...

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩