ಗೂಗಲ್ ಮ್ಯಾಪಲಿ ಕಂಡದ್ದು/ಕಾಣದ್ದು

ಮನೆಯ ಹೊರಗೆ ತೀಟೆ ತೀರಿದ
ಜೋಡಿ ಜೋಡುಗಳು,
ಬಾಗಿಲಲ್ಲಿ ಹಬ್ಬದ ನೆನಪಲ್ಲೇ ಬಾಡಿ
ಹಪ್ಪಳವಾದ ತೋರಣ,
ಗೋಡೆಯ ಸುಣ್ಣ ಚಕ್ಕೆಗಳ
ತುದಿಗಾಲ ನಿಲುವು,
ಒರಟು ನೆಲದ ಮೇಲೆ ಹಾಸಿಕೊಂಡ
ಹರಿದ ಚಾಪೆ!!

ದೇವರ ಪಟದ ಮೇಲೆ ಧ್ಯಾನಸ್ಥ
ಧೂಳಿನ ಪದರ,
ಮೂಲೆ ಮೂಲೆಗಳಲ್ಲೂ ಮೆತ್ತಿಕೊಂಡ
ಜೇಡನ ಬಲೆ,
ನಡುಮನೆಯಲ್ಲಿ ಬಿತ್ತರವಾದ ತುಳಸಿ ಗಿಡ,
ಕಡು ಬಡತನ
ನೀರೆರೆವ ಕಳಶ, ಅಂಗೈಯ್ಯ ತೀರ್ಥ
ದಣಿದ ಮಣ್ಣು!!

ಗುಡಾಣ ಹೆಗ್ಗಣಗಳ ತಾಣ,
ಉರಿಯದೊಲೆಯ ಸುತ್ತ
ಚುಕ್ಕಿ-ರೇಖೆಯ ಅಳಿದುಳಿದ
ಚಂದ ಚಿತ್ತಾರ;
ಬೂದಿಯೂ ತಿಪ್ಪೆ ಪಾಲು,
ಎಂದೋ ಉಕ್ಕಿಸಿದ ಹಾಲ
ಕಮಟು ಘಮಲು,
ಆಧಾರ ಸ್ತಂಬಗಳ ಆಕ್ರಂದನ!!

ಹೊರಗೆ ನಿಲ್ಲದ ಮಳೆ,
ಒಳಗೆ ಕೊಲ್ಲುವ ಮೌನ,
ಕೊಟ್ಟಿಗೆಯ ಗೂಟದಲಿ
ಬಿಡಿಸದ ಸರಪಳಿ;
ಇರುಳ ತಿಂಗಳ ಬೆಳಕು,
ಹಗಲ ಬಿಸಿಲಿನ ಮಬ್ಬು,
ಜೋತು ಹಾಕಿದ ಗಿಲಕಿಯೊಡನೆ
ತಂಗಾಳಿಯ ಮಾತು-ಕಥೆ!!

ಮುರಿದ ಬುಗುರಿ, ಗೋಳಿ ಗುಂಡು,
ಕಡಿಗೋಲು, ಕುಡುಗೋಲು,
ಹರಿದ ಗುಬ್ಬಚ್ಚಿ ಗೂಡು,
ಬೆರಣಿ ಕುಪ್ಪೆ, ಪಟದ ನೂಲು;
ನಾಲ್ಕು ಕಂಬನಿ, ಮೂರು ಹೆಜ್ಜೆ,
ಸಾಲು ಕನಸು, ಒಂದು ಬಯಕೆ;
ಸೂರ್ಯ ಹುಟಿ ಮುಳುಗುತಾನೆ
ಬೆಳಕಿನರಿವು ಇನ್ನ್ನೂ ಬಾಕಿ!!

ಗೂಗಲ್ ಮ್ಯಾಪನು ಜೂಮ್ ಮಾಡಿ
ಕಂಡೂ ಕಾಣದ ಹಳ್ಳಿ ಮನೆಗೆ
ಪಟ್ಟಣಗಳು ಬಿಕ್ಕುತಿದ್ದೋ;
ಹಳ್ಳಿಗಳ್ಳಿಯೇ ವೃದ್ಧಾಶ್ರಮ-
ಕೇಂದ್ರಗಳಂತೆ ಮಾರ್ಪಾಡಾದೋ!!

                                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩