Tuesday 10 June 2014

ಜೀವನ ಪ್ರೀತಿ

ನೀರಿನಿಂದ ಹಾರಿ ಮೀನು
ನೆಲದ ಮೇಲೆ ಬಿದ್ದರಲ್ಲಿ
ಇದ್ದ ರೆಕ್ಕೆ ಹಾರುವುದನು
ಕಲಿಸಿಕೊಟ್ಟಿತು;
ಚುಕ್ಕಿ, ಚಂದ್ರ, ಗಗನದೊಡನೆ
ಮುಕ್ತ ಚರ್ಚೆ ನೆಡೆಸಿ ತನಗ-
-ಪೂರ್ವವಾದ ಕಾಲ ತಾನೇ
ಕೂಡಿ ಬಂದಿತು!!

ಇದ್ದ ಉಸಿರ ಬಿಗಿ ಹಿಡಿದು
ಕದ್ದು ಮುಗಿಲಲೊಂದ ಪಡೆದು
ಕಾದ ಮಳೆಯ ಮುತ್ತು ಮಣಿಯ
ಬೀಳ್ಗೊಟ್ಟಿತು;
ಸುಮ್ಮನಾದೆ ಏಕೆ ನವಿಲೇ
ರೆಕ್ಕೆ ಬಿಚ್ಚಿ ಕುಣಿಯದಂತೆ?
ಮೂಖ ಕೋಗಿಲೆ ಪಾಡು
ಪೇಳಂದಿತು!!

ಬೆಸ್ತ ಬೀಸಿಕೊಂಡ ಬಲೆಗೆ
ಬಿದ್ದು ಜಿಗಿಯುತಿದ್ದ ಮೀನ
ಮೇಲಿನಿಂದ ಕಂಡು ತಾನು
ಮರುಕ ಪಟ್ಟಿತು;
ಹನಿಯುತಿದ್ದ ಮುಗಿಲ ಜೊತೆಗೆ
ತನ್ನದೊಂದು ಕಣ್ಣ ಹನಿಯ
ಮುಯ್ಯಿ ರೂಪದಲ್ಲಿ ಬೆರೆಸಿ
ಬಿಟ್ಟುಕೊಟ್ಟಿತು!!

ನೀಲಿ ಕಡಲ ಹಾಲು ಮಂಜು
ಮೇಲೆ ಸೂರ್ಯ ಉರಿದ ಪಂಜು
ಸುರುಳಿ ಬೀಸಿ ಬಂದ ಗಾಳಿ
ನೀರ ಹೊಯ್ಯಿತು;
ಎತ್ತರಕ್ಕೆ ಹಾರಿಸುತ್ತ 
ಇದ್ದ ಬದ್ದ ಜೀವ ಕುಲವ
ಮೀನು ಮಳೆ ಸುರಿದ ಹಾಗೆ
ಧರೆಗೆ ಇಳಿಯಿತು!!

ಸಿಕ್ಕ ತನ್ನ ಸಂಗದೊಡನೆ
ಮತ್ತೆ ಒಂದುಗೂಡಿ ತಾನು
ಒಂದು ಕೆಸರು, ಇಲ್ಲ ಮರಳು,
ಕಡಲ ಪಾಲಿಗೆ;
ಬೇಲಿ ಹಾಕಿಕೊಂಡರೆಂತು
ಸೋಲು ಒಪ್ಪಲೇನು ಬಂತು
ಬೇಕು ಚಿಟಿಕೆಯಷ್ಟು ಪ್ರೀತಿ
ನಮ್ಮ ಬಾಳಿಗೆ!!

                       -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...